15,000 ಕೋಟಿ ರೂ.! ಬಲು ದುಬಾರಿ ಮೊತ್ತಕ್ಕೆ ಸೇಲ್​ ಆಯ್ತು ರಾಜಸ್ಥಾನ ರಾಯಲ್ಸ್​; ಅಷ್ಟಕ್ಕೂ ಯಾರೀ ಕಲ್ ಸೋಮಾನಿ?

ರಾಜಸ್ಥಾನ ರಾಯಲ್ಸ್
ರಾಜಸ್ಥಾನ ರಾಯಲ್ಸ್
Published on

ಪ್ರಮುಖ ಮುಖ್ಯಾಂಶಗಳು

  • ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕಡೆಗೂ ಸೇಲ್​
  • ದಾಖಲೆಯ ಬೆಲೆಗೆ ಆರ್​ಆರ್​ ಮಾರಾಟ
  • ಕಲ್ ಸೋಮಾನಿ ಒಕ್ಕೂಟ ಸೇರಿದ ರಾಜಸ್ಥಾನ ರಾಯಲ್ಸ್
ಬೆಂಗಳೂರು: ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿಯ ಮಾರಾಟದ ಪ್ರಕ್ರಿಯೆ ಕಡೆಗೂ ಮುಕ್ತಾಯಗೊಂಡಿದೆ. ಅಮೆರಿಕ ಮೂಲದ ಉದ್ಯಮಿ ಕಲ್ ಸೋಮಾನಿ ನೇತೃತ್ವದ ಒಕ್ಕೂಟವು ತಂಡವನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ.
1.63 ಬಿಲಿಯನ್ ಡಾಲರ್‌ಗಳು ಅಂದರೆ ಬರೋಬ್ಬರಿ 15,300 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ಸೇಲ್ ಆಗಿದೆ. 1 ಬಿಲಿಯನ್ ಡಾಲರ್‌ಗೆ ಮಾರಾಟವಾದ ಮೊದಲ ಐಪಿಎಲ್ ತಂಡ ಎಂಬ ಹೆಗ್ಗಳಿಕೆ ಸದ್ಯ ಆರ್​ಆರ್ ಪಾಲಾಗಿದೆ. ಕಲ್ ಸೋಮಾನಿ ನೇತೃತ್ವದ ಒಕ್ಕೂಟವು ವಾಲ್ಮಾರ್ಟ್ ಕುಟುಂಬದ ಅಮೇರಿಕನ್ ಉದ್ಯಮಿ ರಾಬ್ ವಾಲ್ಟನ್ ಮತ್ತು ಎನ್​ಎಫ್​ಎಲ್​ ತಂಡ ಡೆಟ್ರಾಯಿಟ್ ಲಯನ್ಸ್‌ನಲ್ಲಿ ಬಹುಪಾಲು ಪಾಲನ್ನು ಹೊಂದಿರುವ ಹ್ಯಾಂಪ್ ಕುಟುಂಬದಿಂದ ಫ್ರಾಂಚೈಸಿಗೆ ಆರ್ಥಿಕ ಬೆಂಬಲ ಸಿಗಲಿದೆ. 19ನೇ ಆವೃತ್ತಿ ಮುಗಿದ ಬೆನ್ನಲ್ಲೇ ಹೊಸ ಮಾಲೀಕತ್ವವು ಅಧಿಕಾರ ವಹಿಸಿಕೊಳ್ಳಲಿದೆ.
ಈ ಹಿಂದೆ, ಸಂಜೀವ್ ಗೋಯೆಂಕಾ ಅವರ ಆರ್​ಪಿಎಸ್​ಜಿ ಗ್ರೂಪ್ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು 940 ಮಿಲಿಯನ್‌ ಡಾಲರ್​ಗೆ ಖರೀದಿಸಿತು. ಆದರೆ, ಟೊರೆಂಟ್ ಗ್ರೂಪ್ ಗುಜರಾತ್ ಟೈಟಾನ್ಸ್‌ನಲ್ಲಿ ಶೇ.67ರಷ್ಟು ಪಾಲನ್ನು 575 ಮಿಲಿಯನ್‌ ಡಾಲರ್​ಗೆ ಖರೀದಿಸಿತು ಎಂದು ವರದಿಯಾಗಿದೆ. ಇದನ್ನು ಗಮನಿಸಿದರೆ, ಐಪಿಎಲ್​ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಎಂಬುದು ಗಮನಾರ್ಹ.

ಯಾರೀ ಕಲ್​ ಸೋಮಾನಿ?

ಅಮೆರಿಕದ ಕೈಗಾರಿಕೋದ್ಯಮಿ ಕಲ್​ ಸೋಮಾನಿ, ಇಲ್ಲಿಯವರೆಗೆ ರಾಜಸ್ಥಾನ್ ರಾಯಲ್ಸ್‌ನಲ್ಲಿ ಅಲ್ಪಸಂಖ್ಯಾತ ಪಾಲನ್ನು ಹೊಂದಿದ್ದರು. 2021ರಲ್ಲಿಯೇ ಆರ್​ಆರ್​ನಲ್ಲಿ ಸ್ವಲ್ಪ ಹೂಡಿಕೆ ಮಾಡಿದ್ದರು. ಆದರೀಗ, ಬಿಡ್ಡಿಂಗ್ ರೇಸ್​ನಲ್ಲಿದ್ದ ಇತರರನ್ನು ಹಿಂದಿಕ್ಕಿ, ಶೇ.100ರಷ್ಟು ಅಂದರೆ ಸಂಪೂರ್ಣ ಪಾಲನ್ನು ತಮ್ಮದಾಗಿಸಿಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net