IPL-2026: ಪಂಜಾಬ್ ಕಿಂಗ್ಸ್​ ಅಜೇಯ​ ಓಟಕ್ಕೆ ತಡೆಯೊಡ್ಡುವುದೇ ರಾಜಸ್ಥಾನ ರಾಯಲ್ಸ್​​?

IPL-2026: ಪಂಜಾಬ್ ಕಿಂಗ್ಸ್​ ಅಜೇಯ​ ಓಟಕ್ಕೆ ತಡೆಯೊಡ್ಡುವುದೇ ರಾಜಸ್ಥಾನ ರಾಯಲ್ಸ್​​?
IPL-2026: ಪಂಜಾಬ್ ಕಿಂಗ್ಸ್​ ಅಜೇಯ​ ಓಟಕ್ಕೆ ತಡೆಯೊಡ್ಡುವುದೇ ರಾಜಸ್ಥಾನ ರಾಯಲ್ಸ್​​?
Published on
ಮುಲ್ಲನ್​ಪುರ: ಆಡಿದ ಮೊದಲ 7 ಪಂದ್ಯಗಳಲ್ಲೂ ಅಜೇಯ ಸಾಧನೆ ಮಾಡಿರುವ ಹಾಲಿ ರನ್ನರ್​ಅಪ್​ ಪಂಜಾಬ್​ ಕಿಂಗ್ಸ್​ ಮತ್ತು ಆರಂಭಿಕ 4 ಪಂದ್ಯಗಳನ್ನು ಗೆದ್ದ ಬಳಿಕ ನಂತರದ 4 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಕಂಡಿರುವ ರಾಜಸ್ಥಾನ ರಾಯಲ್ಸ್​ ತಂಡಗಳು ಐಪಿಎಲ್​ 19ನೇ ಆವೃತ್ತಿಯಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ. ರನ್​ಪ್ರವಾಹವನ್ನೇ ಹರಿಸುತ್ತಿರುವ ಶ್ರೇಯಸ್​ ಅಯ್ಯರ್​ ಬಳಗದ ಅಜೇಯ ಓಟಕ್ಕೆ, ಸ್ಫೋಟಕ ಬ್ಯಾಟರ್​ಗಳಿದ್ದರೂ ಅಸ್ಥಿರ ನಿರ್ವಹಣೆ ತೋರಿಸುತ್ತಿರುವ ರಿಯಾನ್​ ಪರಾಗ್​ ಬಳಗ ತಡೆಯೊಡ್ಡಲು ಶಕ್ತವಾಗುವುದೇ ಎಂಬ ಕುತೂಹಲವಿದೆ. ಉಭಯ ತಂಡಗಳಲ್ಲಿ ಸ್ಫೋಟಕ ಬ್ಯಾಟರ್​ಗಳಿರುವುದರಿಂದ ಸಿಕ್ಸರ್​, ರನ್​ ಮಳೆಯಾಗುವ ನಿರೀಕ್ಷೆಯೂ ಇದೆ.

ಐಪಿಎಲ್​ ಇತಿಹಾಸದಲ್ಲಿ ಮೊದಲ 7 ಪಂದ್ಯಗಳಲ್ಲೂ ಅಜೇಯವಾಗುಳಿದ ಮೊದಲ ತಂಡ ಎನಿಸಿರುವ ಪಂಜಾಬ್​, 6 ಜಯ ಮತ್ತು ರದ್ದುಗೊಂಡ 1 ಪಂದ್ಯದಿಂದ 13 ಅಂಕ ಗಳಿಸಿ ಪ್ಲೇಆ್​ ಸನಿಹದಲ್ಲಿದೆ. ಈ ಪಂದ್ಯದಲ್ಲೂ ಗೆದ್ದರೆ ಪಂಜಾಜ್​ ಸತತ 2ನೇ ಬಾರಿ ಪ್ಲೇಆಫ್​ ಪ್ರವೇಶಿಸುವುದು ಬಹುತೇಕ ಖಚಿತವೆನಿಸಲಿದೆ. ಮತ್ತೊಂದೆಡೆ ಆರ್​ಆರ್​ ತಂಡ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಪ್ಲೇಆ್​ಗೇರಲು ಉಳಿದ 6 ಪಂದ್ಯಗಳಲ್ಲಿ 3 ಪಂದ್ಯವನ್ನಾದರೂ ಗೆಲ್ಲಬೇಕಾದ ಸವಾಲು ಹೊಂದಿದೆ.

ಪಂಜಾಬ್​ ತಂಡಕ್ಕೆ ಕಾಯಂ ತವರಾಗಿರುವ ಮುಲ್ಲನ್​ಪುರದ ಮಹಾರಾಜ ಯಾದವೀಂದ್ರ ಸಿಂಗ್​ ಸ್ಟೇಡಿಯಂನಲ್ಲಿ ಇದು ಹಾಲಿ ಆವೃತ್ತಿಯ ಕೊನೆಯ ಲೀಗ್​ ಪಂದ್ಯವಾಗಿದೆ. ಪಂಜಾಬ್​ ತಂಡ ತವರಿನ ಕೊನೇ 3 ಲೀಗ್​ ಪಂದ್ಯಗಳನ್ನು ಧರ್ಮಶಾಲಾದ ಎಚ್​ಪಿಸಿಎ ಸ್ಟೇಡಿಯಂನಲ್ಲಿ ಆಡಲಿದೆ. ಪಂಜಾಬ್​ ಮುಲ್ಲನ್​ಪುರದಲ್ಲಿ ಆಡಿದ ಮೊದಲ 3 ಲೀಗ್​ ಪಂದ್ಯದಲ್ಲೂ ಗೆದ್ದಿದ್ದು, ಅಜೇಯವಾಗಿ ಇಲ್ಲಿನ ಅಭಿಯಾನ ಕೊನೆಗೊಳಿಸುವ ತವಕದಲ್ಲಿದೆ.
ಶ್ರೇಯಸ್​-ಪಾಂಟಿಂಗ್​ ಮೋಡಿ
ಶ್ರೇಯಸ್​ ಅಯ್ಯರ್​ ಮತ್ತು ರಿಕಿ ಪಾಂಟಿಂಗ್​ ಪಂಜಾಬ್​ ಕಿಂಗ್ಸ್​ ತಂಡದಲ್ಲಿ ನಾಯಕ&ಕೋಚ್​ ಆಗಿ ಒಗ್ಗೂಡಿದ ಬಳಿಕ ತಂಡದ ಆಟದ ವೈಖರಿಯೇ ಬದಲಾಗಿದೆ. ಕಳೆದ ವರ್ಷ ಫೈನಲ್​ಗೇರಿ ಸ್ವಲ್ಪದರಲ್ಲೇ ಪ್ರಶಸ್ತಿ ವಂಚಿತವಾಗಿದ್ದ ಪಂಜಾಬ್​ ಈ ಬಾರಿ ಚಾಂಪಿಯನ್​ ಪಟ್ಟಕ್ಕೇರಲು ಹಿಂದೆಂದಿಗಿಂತಲೂ ಹೆಚ್ಚು ತುಡಿತದಲ್ಲಿದೆ. ಈ ಮೂಲಕ ತಂಡದ ಸಹ&ಮಾಲಕಿ ಹಾಗೂ ಬಾಲಿವುಡ್​ ನಟಿ ಪ್ರೀತಿ ಝಿಂಟಾ ಅವರ ಐಪಿಎಲ್​ ಟ್ರೋಫಿಯ ದೀರ್ಕಾಲದ ಕೊನೆಗೂ ನನಸಾಗುವ ನಿರೀಕ್ಷೆ ಈ ಬಾರಿ ಅತ್ಯಂತ ಅಧಿಕವಾಗಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡದ 264 ರನ್​ ಸವಾಲನ್ನೂ ಬೆನ್ನಟ್ಟಿ ಗರಿಷ್ಠ ಮೊತ್ತದ ಚೇಸಿಂಗ್​ ದಾಖಲೆ ಬರೆದಿರುವ ಪಂಜಾಬ್​ ತಂಡ ಟೂರ್ನಿಯ ಅತ್ಯಂತ ಅಪಾಯಕಾರಿ ತಂಡವೆನಿಸಿದೆ. ಪ್ರಿಯಾಂಶ್​ ಆರ್ಯ-ಪ್ರಭ್​ಸಿಮ್ರನ್​ ಸಿಂಗ್​ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದರೆ, ಶ್ರೇಯಸ್​ ಅಯ್ಯರ್​, ಕೂಪರ್​ ಕೊನೊಲಿ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಿದ್ದಾರೆ. ಬೌಲಿಂಗ್​ನಲ್ಲಿ ಅರ್ಷದೀಪ್​ ಸಿಂಗ್​, ಕನ್ನಡಿಗ ವೈಶಾಖ್​ ವಿಜಯಕುಮಾರ್​, ಮಾಕೋರ್ ಯಾನ್ಸೆನ್​, ಕ್ಸೇವಿಯರ್​ ಬಾರ್ಟ್ಲೆಟ್​ ಬಲ ತುಂಬಿದ್ದಾರೆ.
ಆರ್​ಆರ್​ಗೆ ನಾಯಕನೇ ಹೊರೆ!
ರಾಜಸ್ಥಾನ ಪರ ಅಗ್ರ ಮೂವರು ಬ್ಯಾಟರ್​ಗಳಾದ ವೈಭವ್​ ಸೂರ್ಯವಂಶಿ (357), ಯಶಸ್ವಿ ಜೈಸ್ವಾಲ್​ (255), ಧ್ರುವ ಜುರೆಲ್​ (232) ಬಲಿಷ್ಠ ನಿರ್ವಹಣೆ ತೋರುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬುವವರಿಲ್ಲ. ನಾಯಕ ರಿಯಾನ್​ ಪರಾಗ್​ 8 ಪಂದ್ಯಗಳಲ್ಲಿ ಕೇವಲ 88 ರನ್​ ಗಳಿಸಿದ್ದು, ಯಾವ ಇನಿಂಗ್ಸ್​ನಲ್ಲೂ 20ರ ಗಡಿ ದಾಟಿಲ್ಲ. ಹೀಗಾಗಿ ನಾಯಕನೇ ಆರ್​ಆರ್​ ತಂಡದ ವೀಕ್​ ಪಾಯಿಂಟ್​ ಆಗಿದ್ದಾರೆ. ಸನ್​ರೈಸರ್ಸ್​ ಎದುರು 228 ರನ್​ ರಸಿಕೊಳ್ಳುವ ವೇಳೆ ಅವರ ಕಳಪೆ ನಾಯಕತ್ವವೂ ತಂಡಕ್ಕೆ ಹಿನ್ನಡೆಯಾಗಿತ್ತು. ಜತೆಗೆ ಫೀಲ್ಡಿಂಗ್​ ವಿಭಾಗದ ವೈಫಲ್ಯವೂ ತಂಡಕ್ಕೆ ದುಬಾರಿ ಎನಿಸಿದೆ. ಬೌಲಿಂಗ್​ ವಿಭಾಗದಲ್ಲಿ ಜೋ್ರಾ ಆರ್ಚರ್​ (13), ರವಿ ಬಿಷ್ಣೋಯಿ (11) ಮತ್ತು ನಾಂಡ್ರೆ ರ್ಬಗರ್​ (8) ಬಲ ತುಂಬಿದ್ದಾರೆ.
ಮುಖಾಮುಖಿ: 30
ಪಂಜಾಬ್​: 12
ರಾಜಸ್ಥಾನ: 17
ರದ್ದು: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.
*100: ವೈಭವ್​ ಸೂರ್ಯವಂಶಿ ಇನ್ನು 6 ಸಿಕ್ಸರ್​ ಸಿಡಿಸಿದರೆ ಟಿ20ಯಲ್ಲಿ 100 ಸಿಕ್ಸರ್​ ಪೂರೈಸಲಿದ್ದಾರೆ. ಇನ್ನು 1 ಬೌಂಡರಿ ಗಳಿಸಿದರೆ ಐಪಿಎಲ್​ನಲ್ಲಿ 50 ಬೌಂಡರಿ ಪೂರ್ಣಗೊಳಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net