ಮುಲ್ಲನ್‌ಪುರದಲ್ಲಿ ರಾಹುಲ್, ಶುಭಮಾನ್ ಶತಕ: ಮೊದಲ ದಿನವೇ ಹಲವು ದಾಖಲೆ!

ಮುಲ್ಲನ್‌ಪುರದಲ್ಲಿ ರಾಹುಲ್, ಶುಭಮಾನ್ ಶತಕ: ಮೊದಲ ದಿನವೇ ಹಲವು ದಾಖಲೆ!
ಮುಲ್ಲನ್‌ಪುರದಲ್ಲಿ ರಾಹುಲ್, ಶುಭಮಾನ್ ಶತಕ: ಮೊದಲ ದಿನವೇ ಹಲವು ದಾಖಲೆ!
Published on
ಮುಲ್ಲನ್‌ಪುರ: ಆರು ತಿಂಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಭಾರತ ತಂಡ ಅಗ್ರ ಕ್ರಮಾಂಕದ ಆಕರ್ಷಕ ಬ್ಯಾಟಿಂಗ್ ಪ್ರಾಬಲ್ಯದಿಂದ ಉತ್ತಮ ಆರಂಭ ಪಡೆದುಕೊಂಡಿದೆ. ಕನ್ನಡಿಗ ಕೆಎಲ್ ರಾಹುಲ್ (KLRahul) (100 ರನ್, 165 ಎಸೆತ, 11 ಬೌಂಡರಿ) ಹಾಗೂ ನಾಯಕ ಶುಭಮಾನ್ ಗಿಲ್ ( Shubman gill) (103* ರನ್, 143 ಎಸೆತ, 11 ಬೌಂಡರಿ, 1 ಸಿಕ್ಸರ್) ಅಮೋಘ ಶತಕದ ನೆರವಿನಿಂದ ಭಾರತ ತಂಡ, ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಮೊದಲ ದಿನವೇ ಹಿಡಿತ ಸಾಧಿಸಿ ಬೃಹತ್ ಮೊತ್ತದತ್ತ ಸಾಗಿದೆ.
ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಗಿಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಸಾಧಾರಣ ಆರಂಭದ ನಡುವೆಯೂ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ (81 ರನ್, 104 ಎಸೆತ, 13 ಬೌಂಡರಿ) ಜೋಡಿ ಭದ್ರ ಬುನಾದಿ ಹಾಕಿಕೊಟ್ಟಿತು. ಚಹಾ ವಿರಾಮಕ್ಕೆ 2 ವಿಕೆಟ್‌ಗೆ 209 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ನಂತರ ರಾಹುಲ್ ಮತ್ತು ಗಿಲ್ ಜತೆಯಾಟದಿಂದ ಹಿಡಿತ ಸಾಧಿಸಿದ್ದು, ದಿನದಂತ್ಯಕ್ಕೆ ಭಾರತ 85 ಓವರ್‌ಗಳಲ್ಲಿ 3 ವಿಕೆಟ್‌ಗೆ 368 ರನ್ ಕಲೆಹಾಕಿದೆ.
ಗಿಲ್ ಜತೆಯಾಗಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (50* ರನ್, 70 ಎಸೆತ, 2 ಬೌಂಡರಿ, 3 ಸಿಕ್ಸರ್) ಮುರಿಯದ 4ನೇ ವಿಕೆಟ್‌ಗೆ 151 ಎಸೆತಗಳಲ್ಲಿ 121 ರನ್ ಸೇರಿಸಿದ್ದಾರೆ. ಐಪಿಎಲ್‌ನಲ್ಲಿ ರನ್‌ಬರ ಎದುರಿಸಿದ್ದ ಪಂತ್ ತನ್ನ 50ನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕದೊಂದಿಗೆ ಲಯಕ್ಕೆ ಮರಳಿದರು.
11. ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಸಿಡಿಸಿದ 11ನೇ ಶತಕ ಇದಾಗಿದ್ದು, ಸುನೀಲ್ ಗಾವಸ್ಕರ್ (33), ಸೆಹ್ವಾಗ್ (22), ಮುರುಳಿ ವಿಜಯ್ (12) ಅಗ್ರ 3 ಸ್ಥಾನದಲ್ಲಿದ್ದಾರೆ.
50. ರಿಷಭ್ ಪಂತ್ ಭಾರತ ಪರ 50 ಟೆಸ್ಟ್ ಪಂದ್ಯಗಳನ್ನಾಡಿದ 3ನೇ ವಿಕೆಟ್ ಕೀಪರ್ ಎನಿಸಿದರು. ಎಂಎಸ್ ಧೋನಿ (90), ಸಯ್ಯದ್ ಕಿರ್ಮಾನಿ (88) ಮೊದಲಿಬ್ಬರು.
11. ಶುಭಮಾನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಸಾವಿರ ರನ್ ಪೂರೈಸಿದ 11ನೇ ಭಾರತೀಯ ಎನಿಸಿದರು. ಜತೆಗೆ 2ನೇ ಕಡಿಮೆ ಇನಿಂಗ್ಸ್‌ಗಳಲ್ಲಿ (15) ಈ ಸಾಧನೆ ಮಾಡಿದದರು. ಸುನೀಲ್ ಗಾವಸ್ಕರ್ (14 ಇನಿಂಗ್ಸ್) ಮೊದಲ ಸ್ಥಾನದಲ್ಲಿದ್ದಾರೆ.
4. ಭಾರತ ಟೆಸ್ಟ್ ಪಂದ್ಯವೊಂದರ ಮೊದಲ ದಿನ ತವರಿನಲ್ಲಿ ಕಲೆಹಾಕಿದ 4ನೇ ಗರಿಷ್ಠ ಮೊತ್ತ ಇದಾಗಿದೆ. ಇದಕ್ಕೆ ಮುನ್ನ 417, 385, 371 ರನ್‌ಗಳಿಸಿದ್ದು ಮೊದಲ 3 ಅತ್ಯಧಿಕ ಮೊತ್ತವಾಗಿದೆ.
15. ಆಡುವ 11ರ ಬಳಗದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ ಇಬ್ಬರೂ ಇಲ್ಲದೆ ಟೀಮ್ ಇಂಡಿಯಾ 16 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಪಂದ್ಯವನ್ನಾಡಿತು. 2010ರಿಂದ ಭಾರತ ತಂಡ ತವರಿನಲ್ಲಿ ಆಡಿದ ಎಲ್ಲ 69 ಪಂದ್ಯಗಳಲ್ಲಿ ಅಶ್ವಿನ್-ಜಡೇಜಾ ಪೈಕಿ ಒಬ್ಬರು ಆಡುವ 11ರ ಭಾಗವಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net