

ಬೆಂಗಳೂರು: ಭಾರತ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿ 12 ಶತಕಗಳ ಸಹಿತ 5 ಸಾವಿರಕ್ಕೂ ಅಧಿಕ ರನ್ ಬಾರಿಸಿರುವ ಮಾಜಿ ಬ್ಯಾಟರ್ ಅಜಿಂಕ್ಯ ರಹಾನೆ (
Ajinkya Rahane
) ಇದೀಗ ಹೊಸ ಪಾತ್ರದೊಂದಿಗೆ ಟೆಸ್ಟ್ ಕ್ರಿಕೆಟ್ಗೆ ಮರಳುತ್ತಿದ್ದಾರೆ.
ಆ.15ರಿಂದ ಗಾಲೆಯಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಅವರು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ (
Sony Sports Network
) ವೀಕ್ಷಕ ವಿವರಣೆಕಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೇ ಎಲ್ಲ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿರುವ 37 ವರ್ಷದ ರಹಾನೆ ಈಗಾಗಲೆ ಇಂಗ್ಲೆಂಡ್ನ ದಿ ಹಂಡ್ರೆಡ್ ಲೀಗ್ ಮೂಲಕ ವೀಕ್ಷಕ ವಿವರಣೆಕಾರರಾಗಿ ಪದಾರ್ಪಣೆ ಮಾಡಿದ್ದಾರೆ.
"ಟೆಸ್ಟ್ ಕ್ರಿಕೆಟ್ ನಮ್ಮ ಆಟದ ಉತ್ತುಂಗದ ಪ್ರಕಾರವಾಗಿದೆ. ಇದರಲ್ಲಿ ಭಾರತವನ್ನು ಹಲವು ವರ್ಷಗಳ ಕಾಲ ಪ್ರತಿನಿಧಿಸುವ ಸೌಭಾಗ್ಯ ನನ್ನದಾಗಿತ್ತು. ಈಗ ಇದೇ ಆಟವನ್ನು ಭಿನ್ನವಾದ ದೃಷ್ಟಿಕೋನದಿಂದ ನೋಡಲಿದ್ದೇನೆ. ನನ್ನ ಅನುಭವ ಹಂಚಿಕೊಳ್ಳಲು ಕಾತರಗೊಂಡಿದ್ದೇನೆ' ಎಂದು ರಹಾನೆ ತಿಳಿಸಿದ್ದಾರೆ.