ಸಿಕ್ಸರ್ ಹೊಡೆದ ಆಟಗಾರನಿಂದಲೇ ಕ್ಷಮೆಯಾಚನೆ! ಪಂಜಾಬ್ ಕಿಂಗ್ಸ್‌ನಿಂದ ಗಾಯಾಳು ಅಭಿಮಾನಿಗೆ ಸಿಕ್ಕಿತು ‘ಸ್ಪೆಷಲ್ ಸರ್ಪ್ರೈಸ್’.. Priyansh Arya

Priyansh Arya (ಚಿತ್ರ X)
Priyansh Arya (ಚಿತ್ರ X)
Published on
ಮುಲ್ಲನ್‌ಪುರ: ಐಪಿಎಲ್ 2026ರ ಕ್ರಿಕೆಟ್ ಅಂಗಳದಲ್ಲಿ ಕೇವಲ ರನ್ ಮತ್ತು ವಿಕೆಟ್‌ಗಳ ಅಬ್ಬರ ಮಾತ್ರವಲ್ಲದೆ, ಹೃದಯ ಗೆಲ್ಲುವಂತಹ ಮಾನವೀಯ ಘಟನೆಯೊಂದು ನಡೆದಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದ ವೇಳೆ ತನ್ನ ಬ್ಯಾಟಿಂಗ್‌ನಿಂದ ಅಬ್ಬರಿಸಿದ್ದ ಪಂಜಾಬ್ ಕಿಂಗ್ಸ್ (PBKS) ಆಟಗಾರ (Priyansh Arya) ಪ್ರಿಯಾಂಶ್ ಆರ್ಯ, ಆಕಸ್ಮಿಕವಾಗಿ ಗಾಯಗೊಂಡ ಅಭಿಮಾನಿಯೊಬ್ಬರಿಗೆ ವಿಶೇಷ ಸನ್ನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಘಟನೆ ಏನು?

ಎಲ್​ಎಸ್​ಜಿ ವಿರುದ್ಧ ಪಿಬಿಕೆಎಸ್ ತಂಡದ ಇನ್ನಿಂಗ್ಸ್‌ನಲ್ಲಿ ಪ್ರಿಯಾಂಶ್ ಬಲವಾಗಿ ಬ್ಯಾಟ್​ ಬೀಸಿದ ಪರಿಣಾಮ ಪಂದ್ಯ ವೀಕ್ಷಿಸುತ್ತಿದ್ದ  ಅಭಿಮಾನಿ ಕ್ರಿಶನ್ ಚಂದ್ ಅವರ ಹಣೆಯ ಮೇಲೆ ಚೆಂಡು ಬಿದ್ದಿತು. ಇದರಿಂದ ಅವರ ಮುಖದಲ್ಲಿ ರಕ್ತ ಸುರಿಯಲು ಪ್ರಾರಂಭಿಸಿದ್ದು, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಿ, ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. 
ಚಿಕಿತ್ಸೆಯ ಸಮಯದಲ್ಲಿ ಚಂದ್ ಅವರ ಹುಬ್ಬಿನ ಮೇಲೆ ಹೊಲಿಗೆ ಹಾಕಲಾಗಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ಘಟನೆ ನಂತರ  ಪಿಬಿಕೆಎಸ್ ತಂಡ ಅಭಿಮಾನಿ ಮತ್ತು ಅವರ ಕುಟುಂಬವನ್ನು ಸಂಪರ್ಕಿಸಿ ಯೋಗ ಕ್ಷೇಮ ವಿಚಾರಿಸಿದ್ದಾರೆ. 

ವಿಡಿಯೋ ಕರೆಯಲ್ಲಿ ಮಾತನಾಡಿದ ಪ್ರಿಯಾಂಶ್ ಆರ್ಯ ಮತ್ತು ಪ್ರೀತಿ ಜಿಂಟಾ!

ಪಂಜಾಬ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಪ್ರಿಯಾಂಶ್ ಮತ್ತು ಸಹ-ಮಾಲೀಕಿ ಪ್ರೀತಿ ಜಿಂಟಾ ಗಾಯಗೊಂಡ ಚಂದ್ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿ ಅವರ ಆರೋಗ್ಯವನ್ನು ವಿಚಾರಿಸಿದರು. ನಂತರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿರುವ ತಮ್ಮ ಮುಂಬರುವ ಪಂದ್ಯಕ್ಕೆ ಹಾಜರಾಗಲು ಆಹ್ವಾಸಿದರು.
ಪ್ರಿಯಾಂಶ್ ಮಾತನಾಡುತ್ತಾ, ನನ್ನ ಹೊಡೆತದಿಂದ ನಿಮಗೆ ಪೆಟ್ಟಾಗಿರುವ ದೃಶ್ಯಗಳನ್ನು ನೋಡಿದ ನಂತರ ತಾನು ಕಳವಳಗೊಂಡಿದ್ದೇನೆ. ಅದು ದೊಡ್ಡ ಗಾಯವೇ ಎಂದು ಚಿಂತೆಯಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್​ ನಾನು ಚೆನ್ನಾಗಿದ್ದೇನೆ, ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಎಂದರು. 

ಮಾಲೀಕಿ ಜಿಂಟಾ ಹೇಳಿದ್ದೇನು?

ನಮ್ಮೆಲ್ಲರ ಆಶೀರ್ವಾದಗಳು ನಿಮ್ಮ ಮೇಲಿವೆ ಚಿಕ್ಕಪ್ಪ. ನಿಮಗೆ ಸಾಧ್ಯವಾದರೆ, ದಯವಿಟ್ಟು ಪಂದ್ಯಕ್ಕಾಗಿ ಧರ್ಮಶಾಲಾಕ್ಕೆ ಬನ್ನಿ. ಈ ಬಾರಿ ನಿಮ್ಮನ್ನು ಸುರಕ್ಷಿತವಾಗಿಡಲು ಫ್ರಾಂಚೈಸಿ ಹೆಲ್ಮೆಟ್ ವ್ಯವಸ್ಥೆ ಮಾಡಲಿದೆ ಎಂದು ಜಿಂಟಾ ಹೇಳಿದ್ದಾರೆ. 
"ಗಾಯಗೊಂಡ ಅಭಿಮಾನಿಯ ಪ್ರತಿ ಪಂಜಾಬ್ ಕಿಂಗ್ಸ್ ತೋರಿದ ಈ ಮಾನವೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಮೈದಾನದಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಸದಾ ಸದ್ದು ಮಾಡುವ ಈ ತಂಡ, ಈಗ ಮೈದಾನದ ಹೊರಗಿನ ಈ ಹೃದಯಸ್ಪರ್ಶಿ ಸನ್ನೆಯ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದೆ. ಪ್ರಸ್ತುತ ಐಪಿಎಲ್ 2026ರಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಪಂಜಾಬ್ ಕಿಂಗ್ಸ್, ಆಡಿರುವ 8 ಪಂದ್ಯಗಳಲ್ಲಿ 13 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಹೆಮ್ಮೆಯಿಂದ ಅಗ್ರಸ್ಥಾನವನ್ನು ಅಲಂಕರಿಸಿದೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net