CSK, RCB, SRH ತಂಡಗಳಲ್ಲಿ ಮಿಂಚುತ್ತಿರುವ ಐವರು ಯುವ ಪ್ರತಿಭೆಗಳ ಬಗ್ಗೆ ಚೇತೇಶ್ವರ ಪೂಜಾರ, ಮಾರ್ಕ್ ಬೌಷರ್ ಮೆಚ್ಚುಗೆ

ಐಪಿಎಲ್ ತಂಡಗಳ ಐವರು ಕ್ರಿಕೆಟಿಗರು
ಐಪಿಎಲ್ ತಂಡಗಳ ಐವರು ಕ್ರಿಕೆಟಿಗರು
Published on
ಬೆಂಗಳೂರು: ಐಪಿಎಲ್ 2026ರ ಪ್ಲೇಆಫ್ ರೇಸ್ ರೋಚಕ ಹಂತಕ್ಕೆ ತಲುಪಿದೆ. ಅಗ್ರ ನಾಲ್ಕು ತಂಡಗಳು ತಮ್ಮ ಲಯ ಕಾಯ್ದುಕೊಳ್ಳಲು ಹೋರಾಡುತ್ತಿದ್ದರೆ, ಉಳಿದ ತಂಡಗಳು ಭರ್ಜರಿ ಎಂಟ್ರಿಕೊಡಲು ಶತಾಯಗತಾಯ ಪ್ರಯತ್ನದಲ್ಲಿವೆ. ಪ್ರಸ್ತುತ ನಾಲ್ಕು ಸ್ಥಾನಗಳಿಗಾಗಿ ಎಂಟು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಗುಜರಾತ್ ಟೈಟನ್ಸ್ 16 ಅಂಕಗಳನ್ನು ಗಳಿಸಿ ಮೊದಲ ತಂಡವಾಗಿ ಪ್ಲೇಆಫ್ ತಲುಪಿದೆ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡು ಸತತ ಸೋಲುಗಳ ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಲಯಕ್ಕೆ ಮರಳಿದ್ದು, ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ತನ್ನ ಯುವ ಆಟಗಾರರ ಮಿಂಚಿನ ಪ್ರದರ್ಶನದಿಂದ ಸತತ ಮೂರು ಪಂದ್ಯಗಳನ್ನು ಗೆದ್ದು ಪ್ಲೇಆಫ್ ರೇಸ್​ನಲ್ಲಿ ಮುಂಚೂಣಿಗೆ ಬಂದಿದೆ. ಸನ್​ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕೂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ತೀವ್ರ ಹೋರಾಟ ನಡೆಸುತ್ತಿವೆ.
ಈ ಸಂದರ್ಭದಲ್ಲಿ, ಸಿಎಸ್‌ಕೆ, ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ ತಂಡಗಳು ಪ್ಲೇಆಫ್​ ಸುತ್ತಿಗೆ ಪ್ರವೇಶಿಸಲು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಪ್ರಮುಖ ಪಾತ್ರ ವಹಿಸಬಲ್ಲ ಐವರು ನಿರ್ಭೀತ ಯುವ ಪ್ರತಿಭೆಗಳನ್ನು ಹೊಂದಿವೆ. ಆ ಐವರ ಪರಿಚಯ ಮತ್ತು ವಿವರಗಳು ಇಲ್ಲಿವೆ.

1. ಅಭಿಷೇಕ್ ಶರ್ಮಾ

ಈ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅಭಿಷೇಕ್ ಶರ್ಮಾ, ಎಸ್​ಆರ್​ಎಚ್​ ತಂಡದ ಅಪ್ರತಿಮ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಇವರು 43.7ರ ಸರಾಸರಿಯಲ್ಲಿ 210ರ ಸ್ಟ್ರೈಕ್ ರೇಟ್​ನೊಂದಿಗೆ ಬ್ಯಾಟ್ ಬೀಸುತ್ತಿದ್ದಾರೆ. ಈ ಎಡಗೈ ಬ್ಯಾಟರ್ ಈಗಾಗಲೇ ಮೂರು ಅರ್ಧಶತಕಗಳನ್ನು ಸಿಡಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 68 ಎಸೆತಗಳಲ್ಲಿ ಅಜೇಯ 135 ರನ್ ಗಳಿಸಿ ಅಬ್ಬರಿಸಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ತಂಡದ ಬೆನ್ನೆಲುಬಾಗಿದ್ದರೆ, ಅಭಿಷೇಕ್ ತಮ್ಮ ನಿರ್ಭೀತ ಆಟದ ಮೂಲಕ ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಟ್ರಾವಿಸ್ ಹೆಡ್ ಫಾರ್ಮ್​ಗೆ ಮರಳಿರುವುದರಿಂದ, 2016ರ ಚಾಂಪಿಯನ್ ಹೈದರಾಬಾದ್ ತಂಡವು ಅಗ್ರ ಎರಡು ಸ್ಥಾನಕ್ಕೇರಿ ಫೈನಲ್​ಗೆ ಮತ್ತೊಂದು ಅವಕಾಶ ಪಡೆಯಲು ಬಯಸಿದರೆ, ಅಗ್ರ ಕ್ರಮಾಂಕದಲ್ಲಿ ಅಭಿಷೇಕ್ ಅವರ ಸ್ಫೋಟಕ ಬ್ಯಾಟಿಂಗ್ ನಿರ್ಣಾಯಕವಾಗಲಿದೆ.

2. ಉರ್ವಿಲ್ ಪಟೇಲ್

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಚೆಪಾಕ್ ಕ್ರೀಡಾಂಗಣದಲ್ಲಿ ಉರ್ವಿಲ್ ಪಟೇಲ್ ನಡೆಸಿದ ರನ್ ಬೇಟೆ, ಇಂತಹ ಪ್ರತಿಭಾವಂತ ಆಟಗಾರನಿಗೆ ಅವಕಾಶ ಸಿಗಲು ಇಷ್ಟು ಸಮಯ ಏಕೆ ಬೇಕಾಯಿತು ಎಂದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಗುಜರಾತ್ ಮೂಲದ ಈ ವಿಕೆಟ್ ಕೀಪರ್ ಬ್ಯಾಟರ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟಾಟಾ ಐಪಿಎಲ್ ಇತಿಹಾಸದಲ್ಲಿ ಜಂಟಿ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾರತೀಯ ಆಟಗಾರನಿಂದ ವೇಗದ ಟಿ20 ಶತಕದ ದಾಖಲೆ ಹೊಂದಿರುವ ಇವರ ಪ್ರತಿಭೆಯ ಬಗ್ಗೆ ಅನುಮಾನವೇ ಇರಲಿಲ್ಲ, ಆದರೆ ದೇಶೀಯ ಕ್ರಿಕೆಟ್​ನ ಪ್ರದರ್ಶನವನ್ನು ಐಪಿಎಲ್​ನಲ್ಲಿ ತೋರುವುದು ಬಾಕಿಯಿತ್ತು. ಉರ್ವಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2019ರ ನಂತರ ಮೊದಲ ಬಾರಿಗೆ 200ಕ್ಕೂ ಅಧಿಕ ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ತಂಡವು ಪ್ಲೇಆಫ್ ರೇಸ್​ನಲ್ಲಿ ಮುನ್ನುಗ್ಗಲು ಇವರ ಆಟವೇ ಕೇಂದ್ರಬಿಂದುವಾಗಲಿದೆ.

3. ಅನ್ಶುಲ್ ಕಾಂಬೋಜ್

ಪರ್ಪಲ್ ಕ್ಯಾಪ್​ಗಾಗಿ ಭುವನೇಶ್ವರ್ ಕುಮಾರ್ ಅವರೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿರುವ ಅನ್ಶುಲ್ ಕಾಂಬೋಜ್, ಈ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನಿರೀಕ್ಷಿತ ಯಶಸ್ಸಿನ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ. ಈ ಬಲಗೈ ವೇಗಿ ಈಗಾಗಲೇ 19 ವಿಕೆಟ್​ಗಳನ್ನು ಕಬಳಿಸಿದ್ದು, ಇದರಲ್ಲಿ ಹಲವಾರು ಬಾರಿ ಮೂರು ವಿಕೆಟ್​ಗಳ ಗೊಂಚಲು ಕೂಡ ಸೇರಿದೆ. ಅತಿ ವೇಗದ ಬೌಲಿಂಗ್ ಇಲ್ಲದಿದ್ದರೂ ಸಹ ಪಂದ್ಯದ ವಿವಿಧ ಹಂತಗಳಲ್ಲಿ ಇವರು ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.
ಜೆಮಿ ಓವರ್‌ಟನ್ ಮಧ್ಯಮ ಓವರ್​ಗಳನ್ನು ಕಂಟ್ರೋಲ್​ ಮಾಡುತ್ತಿದ್ದರೆ, ಖಲೀಲ್ ಅಹ್ಮದ್ ಮತ್ತು ನಾಥನ್ ಎಲ್ಲಿಸ್ ಅವರ ಗಾಯದ ಸಮಸ್ಯೆಯ ನಡುವೆ ಕಾಂಬೋಜ್ ಅವರು ನಾಯಕ ರುತುರಾಜ್ ಗಾಯಕ್ವಾಡ್ ಅವರ ನಂಬಿಕಸ್ತ ಆಯ್ಕೆಯಾಗಿದ್ದಾರೆ (ಹೊಸ ಚೆಂಡು ಮತ್ತು ಡೆತ್ ಓವರ್​ಗಳಲ್ಲಿ). ಈ ಸೀಸನ್​ನಲ್ಲಿ ಸಿಎಸ್‌ಕೆಯ ಮಂದಗತಿಯ ಆರಂಭದ ನಂತರ, ತಂಡದ ಪುನರಾಗಮನದಲ್ಲಿ ಕಾಂಬೋಜ್ ಅವರ ಸ್ಥಿರ ಪ್ರದರ್ಶನ ದೊಡ್ಡ ಪಾತ್ರ ವಹಿಸಿದೆ.

4. ಸಾಕಿಬ್ ಹುಸೇನ್

ಟೂರ್ನಿಯ ಆರಂಭದ ಕೆಲವು ಪಂದ್ಯಗಳಿಂದ ವಂಚಿತರಾಗಿದ್ದ ಬಿಹಾರದ ವೇಗಿ ಸಾಕಿಬ್ ಹುಸೇನ್, ಇದೀಗ ಸನ್‌ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ಅಗತ್ಯವಿದ್ದ ಸಮತೋಲನವನ್ನು ನೀಡಿದ್ದಾರೆ. 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆದ ತಂಡದ ಭಾಗವಾಗಿದ್ದ ಸಾಕಿಬ್, ತಮ್ಮ ಚೊಚ್ಚಲ ಐಪಿಎಲ್ ಸೀಸನ್​ನಲ್ಲಿ ವೈವಿಧ್ಯಮಯ ಬೌಲಿಂಗ್ ಮತ್ತು ನಿರ್ಣಾಯಕ ಸಮಯದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಪ್ಯಾಟ್ ಕಮಿನ್ಸ್ ಮತ್ತು ಫಾರ್ಮ್​ನಲ್ಲಿರುವ ಇಶಾನ್ ಮಾಲಿಂಗ ಅವರೊಂದಿಗೆ ಸೇರಿ, ಈ ಯುವ ಆಟಗಾರ ಆರಂಭದಲ್ಲಿ ಅನುಭವದ ಕೊರತೆ ಎದುರಿಸುತ್ತಿದ್ದ ಬೌಲಿಂಗ್ ವಿಭಾಗವನ್ನು ಬಲಪಡಿಸಿದ್ದಾರೆ. ಎಸ್‌ಆರ್‌ಎಚ್ ತಂಡವು ಅಗ್ರ ಎರಡು ಸ್ಥಾನಗಳ ಮೇಲೆ ಕಣ್ಣಿಟ್ಟಿರುವಾಗ, ಸಾಕಿಬ್ ಅವರ ಪ್ರದರ್ಶನವು ಅತ್ಯಂತ ಪ್ರಮುಖವಾಗಲಿದೆ.

5. ರಸಿಕ್ ಸಲಾಮ್ ಧರ್

2024ರಲ್ಲಿ ದೆಹಲಿ ಕ್ಯಾಪಿಟಲ್ಸ್ ಮೂಲಕ ಮೊದಲ ಬಾರಿಗೆ ಗಮನ ಸೆಳೆದಿದ್ದ ರಸಿಕ್ ಸಲಾಮ್ ಧರ್, ಈ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ದಾಳಿಗೆ ಅತ್ಯಂತ ಸುಲಭವಾಗಿ ಹೊಂದಿಕೊಂಡಿದ್ದಾರೆ. ಈ ಸೀಸನ್​ನ ತಮ್ಮ ಕೇವಲ ಎರಡನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ರಸಿಕ್ ಅಬ್ಬರಿಸಿದ್ದರು.
ಅಲ್ಲದೆ ಡೆತ್ ಓವರ್​ಗಳಲ್ಲಿ ಅನುಭವಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ ವುಡ್ ಅವರಿಗೆ ಅತ್ಯುತ್ತಮ ಸಾಥ್ ನೀಡುತ್ತಿದ್ದಾರೆ. ಕೇವಲ ಬೌಲರ್ ಮಾತ್ರವಲ್ಲದೆ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಜೇಯ 45 ರನ್ ಗಳಿಸಿರುವ ರಸಿಕ್ ಒಬ್ಬ ಸಮರ್ಥ ಕೆಳಕ್ರಮಾಂಕದ ಬ್ಯಾಟರ್ ಕೂಡ ಹೌದು. ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಚೇಸ್​ನಲ್ಲಿ ಇವರು ತಮ್ಮ ಅದ್ಭುತ ಸಂಯಮವನ್ನು ಪ್ರದರ್ಶಿಸಿದ್ದರು.
ಈ ಪ್ರತಿಭೆಗಳ ಕುರಿತು ಜಿಯೋಸ್ಟಾರ್ ವಾಹಿನಿ ಜೊತೆಗೆ ಮಾತನಾಡಿದ ಕ್ರಿಕೆಟ್ ತಜ್ಞರಾದ ಚೇತೇಶ್ವರ ಪೂಜಾರ ಮತ್ತು ಮಾರ್ಕ್ ಬೌಷರ್, ಟಾಟಾ ಐಪಿಎಲ್ 2026ರ ಪ್ಲೇಆಫ್ ರೇಸ್​ನಲ್ಲಿ ಸಿಎಸ್‌ಕೆ, ಎಸ್‌ಆರ್‌ಎಚ್ ಮತ್ತು ಆರ್‌ಸಿಬಿ ತಂಡಗಳಿಗೆ ಈ ನಿರ್ಭೀತ ಯುವ ಪ್ರತಿಭೆಗಳು ಏಕೆ ಪ್ರಮುಖವಾಗಲಿದ್ದಾರೆ ಎಂಬುದರ ಕಾರಣಗಳನ್ನು ಈ ಕೆಳಗೆ ವಿವರಿಸಿದ್ದಾರೆ.

ಚೇತೇಶ್ವರ ಪೂಜಾರ ಅಭಿಪ್ರಾಯ

"ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಉರ್ವಿಲ್ ಪಟೇಲ್ ಆಡಿದ ರೀತಿ, ಈ ಹೊಸ ತಲೆಮಾರಿನ ಆಟಗಾರರು ತಮ್ಮ ಸಾಮರ್ಥ್ಯ ತೋರಿಸಬೇಕಾದ ದಿನ ಬಂದಾಗ ಏನು ಮಾಡಬಲ್ಲರು ಎಂಬುದನ್ನು ತೋರಿಸುತ್ತದೆ. ಕಳೆದ ಕೆಲವು ವಾರಗಳಿಂದ ಕಮ್​ಬ್ಯಾಕ್​ ಮಾಡಿರುವ ಸಿಎಸ್‌ಕೆ ತಂಡದ ಅನ್ಶುಲ್ ಕಾಂಬೋಜ್ ಕೂಡ ದೊಡ್ಡ ಪಾತ್ರ ವಹಿಸಿದ್ದಾರೆ. ಇನ್ನು 4ನೇ ಕ್ರಮಾಂಕದಲ್ಲಿ ಕಾರ್ತಿಕ್ ಶರ್ಮಾ ಅವರ ಆಟದ ಮಟ್ಟವೂ ಬೆಳೆದಿದೆ" ಎಂದರು.
"ಹಾಗೆಯೇ ಕೊನೆಯಲ್ಲಿ ಪ್ರಶಾಂತ್ ವೀರ್ ಸಿಡಿಸಿದ ಆ ಎರಡು ಸಿಕ್ಸರ್‌ ಗಳು ಈ ಯುವ ಪಡೆಯು ಎಂತಹ ಆತ್ಮವಿಶ್ವಾಸದೊಂದಿಗೆ ಆಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಿಎಸ್‌ಕೆ ತಂಡವು ಈಗ ನಿರ್ಭೀತ ಯುವ ಪ್ರತಿಭೆಗಳ ಗುಂಪನ್ನೇ ಹೊಂದಿದ್ದು, ಅವರು ನಿರ್ಣಾಯಕ ಕ್ಷಣಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಅಗ್ರ ನಾಲ್ಕರಲ್ಲಿರುವ ತಂಡವೊಂದನ್ನು ಕೆಳಗಿಳಿಸಿ ಮೇಲೆ ಬರಲು ಚೆನ್ನೈ ತಂಡವು ಇವರನ್ನೇ ಹೆಚ್ಚು ನಂಬಿಕೊಂಡಿದೆ" ಎಂದರು.

ಮಾರ್ಕ್ ಬೌಷರ್ ಮಾತು

"ಅಭಿಷೇಕ್ ಶರ್ಮಾ ಈ ಸೀಸನ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​ನ ನಿರ್ಭೀತ ಆಟದ ಶೈಲಿಯನ್ನು ಪಾಲಿಸುತ್ತಿದ್ದಾರೆ. ಅವರು ತಮ್ಮ ತಂಡಕ್ಕಾಗಿ ಸತತವಾಗಿ ಸ್ಫೋಟಕ ಬ್ಯಾಟಿಂಗ್ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನೊಂದೆಡೆ, ಸಾಕಿಬ್ ಹುಸೇನ್ ತಮ್ಮ ವೈವಿಧ್ಯಮಯ ಬೌಲಿಂಗ್ ವೇಗ ಮತ್ತು ವಿಭಿನ್ನ ಆ್ಯಕ್ಷನ್ ಮೂಲಕ ಬೌಲಿಂಗ್​ನಲ್ಲಿ ಪ್ರಭಾವ ಬೀರಿದ್ದು, ಡೆತ್ ಓವರ್‌ ಗಳಲ್ಲಿ ನಂಬಿಕಸ್ತ ಆಯ್ಕೆಯಾಗಿದ್ದಾರೆ. ಇದು ಆರ್‌ಸಿಬಿ ತಂಡದಲ್ಲಿ ರಸಿಕ್ ಸಲಾಮ್ ಧರ್ ಮೂರನೇ ವೇಗಿಯಾಗಿ ಮಾಡುತ್ತಿರುವ ಕೆಲಸವನ್ನೇ ಹೋಲುತ್ತದೆ. ತಮ್ಮ ತಂಡಗಳು ಅಗ್ರ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಈ ಇಬ್ಬರೂ ಯುವ ಆಟಗಾರರು ಪ್ರಮುಖವಾಗಲಿದ್ದಾರೆ" ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net