ಮತ್ತೊಮ್ಮೆ ನರಿಬುದ್ಧಿ ತೋರಿದ ಮೊಹ್ಸಿನ್​ ನಖ್ವಿ! ಐಪಿಎಲ್​ಗೆ ಟಕ್ಕರ್​ ಕೊಡಲು ಪಿಎಸ್​ಎಲ್​ ದಿನಾಂಕ ಬದಲು | IPL vs PSL

ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ
ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 2026 ನಡೆಯುವ ಸಮಯಕ್ಕೆ ಪಿಎಸ್​ಎಲ್​ ತರಲು ನಖ್ವಿ ಪ್ಲ್ಯಾನ್​
  • ಮಾರ್ಚ್​ 26ರಿಂದ ಮೇ 3 ರವರೆಗೆ ನಡೆಸಲು ನಿರ್ಧಾರ
ನವದೆಹಲಿ: ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಪಂದ್ಯವನ್ನು ಭಾರತ ಗೆದ್ದಿದ್ದೇ ಆದರೂ ಟ್ರೋಫಿ ಮತ್ತು ಮೆಡಲ್​ಗಳು ಮಾತ್ರ ಆಟಗಾರರಿಗೆ ಸಿಕ್ಕಿಲ್ಲ. ಅದಕ್ಕೆ ಮೂಲ ಕಾರಣ, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯ ನರಿ ಬುದ್ಧಿ. ಅಂದು ಮೈದಾನದಿಂದ ಟ್ರೋಫಿ ಹೊತ್ತೊಯ್ದ ಈತ, ಇಂದಿಗೂ ಅದನ್ನು ಭಾರತ ತಂಡಕ್ಕೆ ಹಸ್ತಾಂತರಿಸಿಲ್ಲ. ಸದ್ಯ ಈ ವಿಚಾರ ಐಸಿಸಿ ಅಂಗಳದಲ್ಲಿದೆ. ಇದೆಲ್ಲದರ ಮಧ್ಯೆ, ತನ್ನ ನರಿಬುದ್ಧಿಯನ್ನು ಮತ್ತೊಮ್ಮೆ ತೋರಿಸಿರುವ ನಖ್ವಿ, 2026ರ ಐಪಿಎಲ್​ ಎಂಟ್ರಿಯ ಸಮಯಕ್ಕೆ ಪಿಎಸ್​ಎಲ್​ ನಡೆಸಲು ಮುಂದಾಗಿದ್ದಾರೆ.

ಕಳೆದ ಬಾರಿಯೂ ಕ್ಲ್ಯಾಶ್​ ಮಾಡಲು ಪ್ರಯತ್ನ!

ಈಗಾಗಲೇ ಐಪಿಎಲ್​ ಮಿನಿ ಹರಾಜಿನ ಲೆಕ್ಕಾಚಾರಗಳು ಬಲು ಜೋರಾಗಿದ್ದು, ಡಿ.16ರಂದು ದುಬೈನಲ್ಲಿ ಆಕ್ಷನ್​ ಪ್ರಕ್ರಿಯೆ ನಡೆಯಲಿದೆ. ಹೀಗಿರುವಾಗಲೇ, ಪಾಕಿಸ್ತಾನ ಸೂಪರ್ ಲೀಗ್ 2026ರ ಬಗ್ಗೆ ಪ್ರಸ್ತಾಪಿಸಿರುವ ಮೊಹ್ಸಿನ್ ನಖ್ವಿ, ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಪೈಪೋಟಿ ಕೊಡಲು ಪಿಎಸ್​ಎಲ್​ ಅನ್ನು ಮಾರ್ಚ್​ 26ರಿಂದ ಮೇ 3 ರವರೆಗೆ ನಡೆಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಖ್ವಿ, ಪಿಎಸ್​ಎಲ್​ನ 11ನೇ ಆವೃತ್ತಿಯನ್ನು ಮುಂದಿನ ವರ್ಷದ ಮಾರ್ಚ್​ 26ರಿಂದ ಮೇ 3 ರವರೆಗೆ ನಡೆಸಲು ನಿರ್ಧರಿಸಿದ್ದೇವೆ. ಹರಾಜು ಪ್ರಕ್ರಿಯೆ ಜ.8ರಂದು ನಡೆಯಲಿದ್ದು, ಎರಡು ಹೊಸ ತಂಡಗಳು ಈ ಬಾರಿ ಲೀಗ್​ಗೆ ಸೇರ್ಪಡೆಯಾಗಲಿದೆ ಎಂದಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ತನ್ನ ದ್ವೇಷ, ನರಿಬುದ್ಧಿಯನ್ನು ಮತ್ತೆ ತೋರಿರುವ ನಖ್ವಿ, ಐಪಿಎಲ್​ ಆರಂಭದ ಸಮಯಕ್ಕೆ ಪಿಎಸ್​ಎಲ್​ ಆರಂಭಿಸಲು ಎದುರುನೋಡುತ್ತಿದ್ದಾರೆ. ಈ ವರ್ಷವು ಅದೇ ಪ್ರಯೋಗ ಮಾಡಿದ್ದ ನಖ್ವಿಗೆ ಭಾರೀ ಮುಖಭಂಗವೇ ಉಂಟಾಯಿತು. ಆದರೂ ಎರಡನೇ ಪ್ರಯತ್ನಕ್ಕೆ ಮುಂದಾಗಿರುವುದು ಸದ್ಯ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಐಪಿಎಲ್​ ಇಲ್ಲವಾದರೆ ಪಿಎಸ್​ಎಲ್​...

ಐಪಿಎಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಡುವ ಟಿ20 ಲೀಗ್. ಇದೊಂದು ಲೀಗ್​ನಲ್ಲಿ ಹಲವು ದೇಶಗಳ ಸ್ಟಾರ್​ ಹಾಗೂ ಪ್ರತಿಭಾವಂತ ಯುವ ಕ್ರಿಕೆಟಿಗರು ಆಡುತ್ತಾರೆ. ಐಪಿಎಲ್​ ವೀಕ್ಷಣೆ ಮುಂದೆ ಪಿಎಸ್​ಎಲ್​ ಏನೇನು ಅಲ್ಲ! ಕಾರಣ, ಇಂಡಿಯನ್​ ಪ್ರೀಮಿಯರ್​ ಲೀಗ್​ ನೋಡುವವರ ಸಂಖ್ಯೆ ಪಾಕಿಸ್ತಾನ ಸೂಪರ್​ ಲೀಗ್​ಗೆ ಇಲ್ಲವೇ ಇಲ್ಲ. ಆ ಮಟ್ಟಿಗಿನ ವೀಕ್ಷಕರ ಸಂಖ್ಯೆ ಹಾಗೂ ಜನಪ್ರಿಯತೆ ಸಹ ಇಲ್ಲ. ಇನ್ನು ಐಪಿಎಲ್‌ನಲ್ಲಿ ಮಾರಾಟವಾಗದ ಆಟಗಾರರಿಗೆ ಪಿಎಸ್‌ಎಲ್‌ನಲ್ಲಿ ಬ್ಯಾಕಪ್ ಹುಡುಕಲು ಅವಕಾಶವಿದೆ. ಉದಾಹರಣೆಗೆ, ಐಪಿಎಲ್ 2026ರ ಹರಾಜಿನಲ್ಲಿ 359 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಇದರಲ್ಲಿ ಕೇವಲ 77 ಸ್ಥಾನಗಳು ಮಾತ್ರ ಲಭ್ಯವಿದೆ ಎಂಬುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net