ಬಹುಕಾಲದ ಗೆಳತಿಯ ಜತೆ ಎಂಗೇಜ್​ ಆದ ಕ್ರಿಕೆಟಿಗ ಪೃಥ್ವಿ ಶಾ: ಯಾರು ಈ ಆಕೃತಿ ಅಗರ್ವಾಲ್​? Prithvi Shaw

ಬಹುಕಾಲದ ಗೆಳತಿಯ ಜತೆ ಎಂಗೇಜ್​ ಆದ ಕ್ರಿಕೆಟಿಗ ಪೃಥ್ವಿ ಶಾ: ಯಾರು ಈ ಆಕೃತಿ ಅಗರ್ವಾಲ್​? Prithvi Shaw
ಬಹುಕಾಲದ ಗೆಳತಿಯ ಜತೆ ಎಂಗೇಜ್​ ಆದ ಕ್ರಿಕೆಟಿಗ ಪೃಥ್ವಿ ಶಾ: ಯಾರು ಈ ಆಕೃತಿ ಅಗರ್ವಾಲ್​? Prithvi Shaw
Published on

ಪ್ರಮುಖ ಮುಖ್ಯಾಂಶಗಳು

  • ಬಹುಕಾಲದ ಗೆಳತಿ ಆಕೃತಿ ಅಗರ್ವಾಲ್​ ಜತೆ ಟೀಮ್​ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಎಂಗೇಜ್​ಮೆಂಟ್​
  • ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡ ಪೃಥ್ವಿ ಶಾ
  • ಫೋಟೋ ಹಂಚಿಕೊಂಡು ಅವಳೇ ನನ್ನ ಪರಿಪೂರ್ಣ ಇನ್ನಿಂಗ್ಸ್ ಎಂದು ಭಾರತದ ಕ್ರಿಕೆಟಿಗ
Prithvi Shaw : ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಪೃಥ್ವಿ ಶಾ ಅವರು ತಮ್ಮ ಬಹುಕಾಲದ ಗೆಳತಿ ಆಕೃತಿ ಅಗರ್ವಾಲ್​ ಜತೆ ಇಂದು (ಮಾರ್ಚ್​ 08) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಪರಸ್ಪರ ಕೈಗಳಿಗೆ ರಿಂಗ್​ ತೊಡಿಸುವ ಹಾಗೂ ಇಬ್ಬರು ಕೈಕೈ ಹಿಡಿದಿರುವ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೃಥ್ವಿ ಶಾ, ಮೈದಾನದಲ್ಲಿ ಸಿಕ್ಸರ್‌ಗಳನ್ನು ಬಾರಿಸುವುದರಿಂದ ಹಿಡಿದು ಜೀವಮಾನವಿಡೀ ಹಿಟ್‌ಗಳವರೆಗೆ. ಅವಳೇ ನನ್ನ ಪರಿಪೂರ್ಣ ಇನ್ನಿಂಗ್ಸ್ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಅದಕ್ಕೆ ಈಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡೆ ( #justengaged ) ಎಂಬ ಹ್ಯಾಶ್​ಟ್ಯಾಗ್​ ಸೇರಿಸಿದ್ದಾರೆ.

ಯಾರು ಈ ಆಕೃತಿ ಅಗರ್ವಾಲ್​​?

22 ವರ್ಷದ ಆಕೃತಿ ಅಗರ್ವಾಲ್​ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಮತ್ತು ನಟಿಯಾಗಿಯೂ ಹೆಸರು ಮಾಡಿದ್ದಾರೆ. ಮೂಲತಃ ಉತ್ತರ ಪ್ರದೇಶದ ಲಖನೌದವರಾದ ಆಕೃತಿ, ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ಬಂದರು. ಇದರ ನಡುವೆ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಆಕೃತಿ, ಮೊದಲ ಬಾರಿಗೆ ತೆಲುಗಿನ ತ್ರಿಮುಖ ಚಿತ್ರದಲ್ಲಿ ನಟಿಸಿದರು. ಪೃಥ್ವಿ ಶಾ ಅವರೊಂದಿಗಿನ ಪರಿಚಯವು ಪ್ರೀತಿಗೆ ಕಾರಣವಾಯಿತು.
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಡಾನ್ಸ್​ ಮತ್ತು ಲಿಪ್-ಸಿಂಕ್ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಜಾಲತಾಣ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರಸ್ತುತ, ಇನ್​ಸ್ಟಾಗ್ರಾಂನಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಇನ್‌ಸ್ಟಾಗ್ರಾಂ ಜೊತೆಗೆ ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಾರೆ. ಯೂಟ್ಯೂಬ್​ನಲ್ಲಿ ವ್ಲಾಗ್‌ಗಳು ಮತ್ತು ಲೈಫ್​ಸ್ಟೈಲ್​ ವಿಷಯವನ್ನು ಪೋಸ್ಟ್ ಮಾಡುತ್ತಾರೆ. ಕ್ರಿಕೆಟಿಗ ಪೃಥ್ವಿ ಶಾ ಅವರೊಂದಿಗೆ ಹಲವಾರು ಪ್ರವಾಸಗಳಲ್ಲಿ ಕಾಣಿಸಿಕೊಂಡ ಬಳಿಕ ಆಕೃತಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಗಮನ ಸೆಳೆದರು. ಗಣೇಶ ಚತುರ್ಥಿ ಸೇರಿದಂತೆ ಹಲವು ಹಬ್ಬಗಳನ್ನು ಶಾ ಅವರೊಂದಿಗೆ ಆಚರಿಸಿದ್ದಾರೆ.

ಪೃಥ್ವಿ ಶಾ ಬಗ್ಗೆ

ಪೃಥ್ವಿ ಶಾ ಅವರ ಪೂರ್ಣ ಹೆಸರು ಪೃಥ್ವಿ ಪಂಕಜ್ ಶಾ. ಭಾರತದ ಪ್ರಸಿದ್ಧ ಕ್ರಿಕೆಟಿಗ. ಇವರು 1999, ನವೆಂಬರ್ 9ರಂದು ಮಹಾರಾಷ್ಟ್ರದ ವಿರಾರ್‌ನಲ್ಲಿ ಜನಿಸಿದರು. ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಪೃಥ್ವಿ ಶಾ ತಮ್ಮ 14ನೇ ವಯಸ್ಸಿನಲ್ಲೇ ಹ್ಯಾರಿಸ್ ಶೀಲ್ಡ್‌ನಲ್ಲಿ 546 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿ ಗಮನ ಸೆಳೆದರು. 2018ರಲ್ಲಿ ಭಾರತದ ಅಂಡರ್-19 ತಂಡದ ನಾಯಕರಾಗಿ ವಿಶ್ವಕಪ್ ಗೆದ್ದ ನಂತರ ಅದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ಶತಕ ಬಾರಿಸಿದರು. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅವರು ರಣಜಿ ಟ್ರೋಫಿಯಲ್ಲಿ 2025ರಲ್ಲಿ ಚಂಡೀಗಢ ವಿರುದ್ಧ 141 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೆ ಸ್ಥಾನ ಪಡೆಯಲು ಹೆಣಗಾಡುತ್ತಿರುವ ಪ್ರತಿಭಾವಂತ ಆಟಗಾರ ಎನಿಸಿಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net