

ಬೆಂಗಳೂರು: ಬೆಂಗಳೂರಿನ 13 ವರ್ಷದ ಪೋರ ಮೊಹಮ್ಮದ್ ಮುಸ್ತಫಾ ಅಹ್ಮದ್ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದ ಜೂನಿಯರ್ ನ್ಯಾಷನಲ್ ಹೇಬಾಲ್ ಚಾಂಪಿಯನ್ ಷಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಜತ ಪದಕ (ಬೆಳ್ಳಿ) ಮುಡಿಗೇರಿಸಿಕೊಳ್ಳುವ ಮೂಲಕ ದೇಶದ ಕ್ಯೂ ಸ್ಪೋರ್ಟ್ಸ್ ಅಂಗಳದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ವಿಶೇಷವೆಂದರೆ, ಈ ಪ್ರಮುಖ ಟೂರ್ನಿಯಲ್ಲಿ ಮುಸ್ತಫಾ ಸ್ಪರ್ಧಿಸಿದ್ದು ಮತ್ತೊಬ್ಬ ಆಟಗಾರನಿಂದ ಎರವಲು ಪಡೆದ ಕ್ಯೂ (ಆಟದ ಕೋಲು) ಮೂಲಕ ಎಂಬುದು ಗಮನಾರ್ಹ.
ಕರ್ನಾಟಕ ರಾಜ್ಯಮಟ್ಟದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ನಲ್ಲಿ ಈಗಾಗಲೇ ಹಲವು ಜೂನಿಯರ್ ಚಾಂಪಿಯನ್ ಷಿಪ್ ಗೆದ್ದಿರುವ ಮುಸ್ತಫಾ, ಪ್ರಸ್ತುತ ಭಾರತದ ಜೂನಿಯರ್ ಸ್ನೂಕರ್ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಹೇಬಾಲ್ ಆಟಕ್ಕೆ ಕಾಲಿಟ್ಟ ಮುಸ್ತಫಾಗೆ ಈ ಟೂರ್ನಿಗೂ ಮುನ್ನ ಸಿಕ್ಕಿದ್ದು ಕೇವಲ ಬೆರಳಣಿಕೆಯಷ್ಟು ತರಬೇತಿ ಸತ್ರಗಳು ಮಾತ್ರ. ಆರಂಭದಲ್ಲಿ ಕೇವಲ ದೊಡ್ಡ ಟೂರ್ನಿಯ ಅನುಭವ ಪಡೆಯುವ ಉದ್ದೇಶದಿಂದ ಕಣಕ್ಕಿಳಿದಿದ್ದ ಈ ಪೋರ, ತಮ್ಮ ಚಾಣಾಕ್ಷ ಆಟದಿಂದ ಪಂದ್ಯಾವಳಿಯಲ್ಲೇ ಕೌತುಕ ಮೂಡಿಸಿದರು.
ಹಂತ ಹಂತವಾಗಿ ಹಲವು ಅನುಭವಿ ಆಟಗಾರರಿಗೆ ಆಘಾತ ನೀಡುತ್ತಾ ಫೈನಲ್ ತಲುಪಿದ ಮುಸ್ತಫಾ, ಪ್ರಶಸ್ತಿ ಸುತ್ತಿನಲ್ಲಿ ಮಹಾರಾಷ್ಟ್ರದ ಪ್ರತಿಭಾವಂತ ಆಟಗಾರನ ವಿರುದ್ಧ ತೀವ್ರ ಪೈಪೋಟಿ ನಡೆಸಿದರು. ಅಂತಿಮವಾಗಿ ಅತ್ಯಂತ ನಿಕಟ ಅಂತರದಲ್ಲಿ ಸೋಲೊಪ್ಪಿಕೊಂಡು ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಸರಿಯಾದ ಸ್ವಂತ ಸಲಕರಣೆಗಳೂ ಇಲ್ಲದೆ, ಕನಿಷ್ಠ ಸಿದ್ಧತೆಯೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ರಜತ ಪದಕ ಗೆದ್ದ ಬೆಂಗಳೂರಿನ ಈ ಬಾಲಕನ ಸಾಧನೆಗೆ ಕ್ರೀಡಾಲೋಕದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಜುಲೈ 1, 2026 ರಂದು ಮುಕ್ತಾಯಗೊಂಡ ಜೂನಿಯರ್ ನ್ಯಾಷನಲ್ ಹೇಬಾಲ್ ಚಾಂಪಿಯನ್ಷಿಪ್ ನಲ್ಲಿ ದೇಶದ ಮೂಲೆ ಮೂಲೆಗಳಿಂದ ಪ್ರಮುಖ ಯುವ ಆಟಗಾರರು ಭಾಗವಹಿಸಿದ್ದರು. ತಮ್ಮ ಚೊಚ್ಚಲ ಪ್ರಮುಖ ಟೂರ್ನಿಯಲ್ಲೇ ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಮುಸ್ತಫಾ ಅಹ್ಮದ್, ಭಾರತದ ಕ್ಯೂ ಸ್ಪೋರ್ಟ್ಸ್ನ ಅತ್ಯಂತ ಭರವಸೆಯ ಉದಯೋನ್ಮುಖ ತಾರೆಯಾಗಿ ಹೊರಹೊಮ್ಮಿದ್ದಾರೆ.
ಮೇ 2026ರಲ್ಲಿ ಬೆಂಗಳೂರಿನ ಹೇಬಾಲ್ ಅಕಾಡೆಮಿ ಸೇರಿದ ಮುಸ್ತಫಾ, ಪ್ರಸಿದ್ದ ಕೋಚ್ ಪ್ರಣೀತ್ ರಾಮಚಂದಾನಿ ಅವರ ಗರಡಿಯಲ್ಲಿ ಪಳಗಲು ಆರಂಭಿಸಿದರು. ಅಂದಿನಿಂದ ಸ್ನೂಕರ್ ಹಾಗೂ ಹೇಬಾಲ್ ಕ್ರೀಡೆಗೆ ಅಗತ್ಯವಿರುವ ಕ್ಯೂ ಆಕ್ಷನ್, ನಿಲ್ಲುವ ಭಂಗಿ, ಆಟದ ತಂತ್ರಗಳು ಮತ್ತು ಶಾಟ್ ಗಳ ಸರಿಯಾದ ಆಯ್ಕೆಯ ಕುರಿತು ಅತ್ಯಂತ ಶಿಸ್ತುಬದ್ಧ ತರಬೇತಿ ಪಡೆಯುತ್ತಿದ್ದಾರೆ.
ಭಾರತದಲ್ಲಿ ಹೇಬಾಲ್ ಕ್ರೀಡೆಯನ್ನು ಬೆಳೆಸುವಲ್ಲಿ ಕೋಚ್ ಪ್ರಣೀತ್ ಅವರದ್ದು ಪ್ರಮುಖ ಪಾತ್ರ. ಬ್ರಿಟನ್ ಹಾಗೂ ಬೆಲ್ಜಿಯಂನಲ್ಲಿ ಜಾಗತಿಕ ಖ್ಯಾತಿಯ ತರಬೇತುದಾರ ಕ್ರಿಸ್ ಹೆನ್ರಿ ಅವರಿಂದ ಲೆವೆಲ್-1 ಮತ್ತು ಲೆವೆಲ್-2 ಕೋಚಿಂಗ್ ಸರ್ಟಿಫಿಕೇಟ್ ಪಡೆದಿರುವ ಪ್ರಣೀತ್, ಬೆಂಗಳೂರಿನಲ್ಲೇ ಭಾರತದ ಮೊದಲ ಕ್ರಿಸ್ ಹೆನ್ರಿ ಪ್ಲೇಯರ್ ಇಂಟೆನ್ಸಿವ್ ಟ್ರೈನಿಂಗ್ ಪ್ರೋಗ್ರಾಂ ಆರಂಭಿಸಿದ್ದಾರೆ.
ಮುಸ್ತಫಾ ಅವರಲ್ಲಿನ ಅಪಾರ ಪ್ರತಿಭೆಯನ್ನು ಗುರುತಿಸಿದ ಪ್ರಣೀತ್, ಅವರನ್ನು ಈ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದ್ದರು. ಇದರಿಂದಾಗಿ ಮುಸ್ತಫಾಗೆ ನೇರವಾಗಿ ಅಂತಾರಾಷ್ಟ್ರೀಯ ತರಬೇತುದಾರ ಕ್ರಿಸ್ ಹೆನ್ರಿ ಅವರಿಂದಲೇ ಸುಧಾರಿತ ತಂತ್ರಗಳನ್ನು ಕಲಿಯುವ ಅಪರೂಪದ ಅವಕಾಶ ಸಿಕ್ಕಂತಾಯಿತು.
ಮುಸ್ತಫಾ ಅವರ ಕ್ರೀಡಾ ಪಯಣಕ್ಕೆ ಬೆಂಗಳೂರಿನಲ್ಲಿ ಹಲವು ಸ್ನೂಕರ್ ಕ್ಲಬ್ ಗಳನ್ನು ಹೊಂದಿರುವ ತಂದೆ ಸಜ್ಜಾದ್ ಅಹ್ಮದ್ ಅವರ ಬೆಂಬಲವೇ ದೊಡ್ಡ ಶಕ್ತಿ. ಮುಸ್ತಫಾಗೆ 10ನೇ ವಯಸ್ಸಿನಲ್ಲೇ ಕ್ಯೂ ಸ್ಪೋರ್ಟ್ಸ್ ಪರಿಚಯಿಸಿದ ಸಜ್ಜಾದ್, ಮಗನಿಗೆ ಅಭ್ಯಾಸಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ತಂದೆಯ ಪ್ರೋತ್ಸಾಹ ಹಾಗೂ ಕೋಚ್ ಪ್ರಣೀತ್ ಅವರ ತಾಂತ್ರಿಕ ಮಾರ್ಗದರ್ಶನ ಮುಸ್ತಫಾನನ್ನು ಇಂದು ದೇಶವೇ ತಿರುಗಿ ನೋಡುವಂತೆ ಮಾಡಿದೆ.
ಮುಸ್ತಫಾ ಅವರ ಈ ಸಾಧನೆಯ ಕುರಿತು ಕೋಚ್ ಪ್ರಣೀತ್ ರಾಮಚಂದಾನಿ ಮಾತನಾಡಿ, "ನಮ್ಮ ಮೊದಲ ತರಬೇತಿಯಲ್ಲೇ ಮುಸ್ತಫಾನಲ್ಲಿ ಅಪಾರ ಪ್ರತಿಭೆ ಮತ್ತು ಹೊಸದನ್ನು ಕಲಿಯುವ ಅದಮ್ಯ ಉತ್ಸಾಹ ಇರುವುದನ್ನು ನಾನು ಗಮನಿಸಿದೆ. ಆಟದ ಮೂಲಭೂತ ತಂತ್ರಗಳನ್ನು ತಿದ್ದಿ ತೀಡುವುದರಿಂದ ಹಿಡಿದು, ಮತ್ತೊಬ್ಬರಿಂದ ಎರವಲು ಪಡೆದ ಕ್ಯೂ ಮೂಲಕ ರಾಷ್ಟ್ರೀಯ ಮಟ್ಟದ ರಜತ ಪದಕ ಗೆಲ್ಲುವವರೆಗಿನ ಅವರ ಈ ಬೆಳವಣಿಗೆಯನ್ನು ನೋಡುವುದು ಅತ್ಯಂತ ತೃಪ್ತಿದಾಯಕವಾಗಿತ್ತು" ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಸ್ನೂಕರ್, ಹೇಬಾಲ್ ಸೇರಿದಂತೆ ಕ್ಯೂ ಸ್ಪೋರ್ಟ್ಸ್ನ ವಿವಿಧ ವಿಭಾಗಗಳಲ್ಲಿ ರಾಷ್ಟ್ರೀಯ, ಏಷ್ಯನ್ ಹಾಗೂ ವಿಶ್ವ ಚಾಂಪಿಯನ್ಷಿಪ್ ಮಟ್ಟದಲ್ಲಿ ಸ್ಪರ್ಧಿಸಿ, ಸರ್ವಶ್ರೇಷ್ಠ ಆಲ್-ರೌಂಡರ್ ಆಟಗಾರನಾಗುವುದು ಮುಸ್ತಫಾ ಅವರ ಗುರಿಯಾಗಿದೆ. ಉತ್ತಮ ತರಬೇತಿಯ ಹುಡುಕಾಟದಲ್ಲಿ ಹೇಬಾಲ್ ಅಕಾಡೆಮಿಗೆ ಕಾಲಿಟ್ಟ ದಿನದಿಂದ ಹಿಡಿದು, ಎರವಲು ಪಡೆದ ಕೋಲಿನಿಂದಲೇ ರಾಷ್ಟ್ರೀಯ ಮಟ್ಟದ ಪದಕದ ವೇದಿಕೆ ಏರುವವರೆಗಿನ ಅವರ ಈ ಸ್ಪೂರ್ತಿದಾಯಕ ಪಯಣವು ಪ್ರತಿಭೆ, ಕಠಿಣ ಪರಿಶ್ರಮ, ಕುಟುಂಬದ ಬೆಂಬಲ ಹಾಗೂ ವಿಶ್ವದರ್ಜೆಯ ತರಬೇತಿಯ ಶಕ್ತಿಯನ್ನು ಸಾರಿದೆ.