ವೈಭವ್​ಗಾಗಿ ಮೊದಲು ಗಾಳ ಹಾಕಿದ್ದು ರಾಜಸ್ಥಾನವಲ್ಲ ಈ ತಂಡ... ಸೂರ್ಯವಂಶಿ ಹರಾಜಿನ ಅಸಲಿ ಕಥೆ ಇಲ್ಲಿದೆ! Vaibhav Suryavanshi

ವೈಭವ್​ಗಾಗಿ ಮೊದಲು ಗಾಳ ಹಾಕಿದ್ದು ರಾಜಸ್ಥಾನವಲ್ಲ ಈ ತಂಡ... ಸೂರ್ಯವಂಶಿ ಹರಾಜಿನ ಅಸಲಿ ಕಥೆ ಇಲ್ಲಿದೆ! Vaibhav Suryavanshi
ವೈಭವ್​ಗಾಗಿ ಮೊದಲು ಗಾಳ ಹಾಕಿದ್ದು ರಾಜಸ್ಥಾನವಲ್ಲ ಈ ತಂಡ... ಸೂರ್ಯವಂಶಿ ಹರಾಜಿನ ಅಸಲಿ ಕಥೆ ಇಲ್ಲಿದೆ! Vaibhav Suryavanshi
Published on

ಪ್ರಮುಖ ಮುಖ್ಯಾಂಶಗಳು

  • ರಾಜಸ್ಥಾನ ರಾಯಲ್ಸ್​ ಪರ ಆಡುತ್ತಿರುವ ವೈಭವ್​ ಸೂರ್ಯವಂಶಿಯ ಬಗ್ಗೆ ವಿಶೇವಾಗಿ ಹೇಳಬೇಕಾಗಿಲ್ಲ
  • 18ನೇ ಆವೃತ್ತಿಯಲ್ಲಿ ಐಪಿಎಲ್​ಗೆ ಪಾದರ್ಪಣೆ ಮಾಡಿ ಚೊಚ್ಚಲ ಲೀಗ್​ನಲ್ಲೇ ಬ್ಯಾಟಿಂಗ್​ನಲ್ಲಿ ಸುನಾಮಿ ಸೃಷ್ಟಿ
  • ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯಲ್ಲೂ ತನ್ನ ಬಿರುಗಾಳಿ ಬ್ಯಾಟಿಂಗ್​ ಮುಂದುವರಿಸಿದ ವೈಭವ್​
  • ಅಚ್ಚರಿ ಸಂಗತಿ ಏನೆಂದರೆ ವೈಭವ್​ಗಾಗಿ ಐಪಿಎಲ್​ ಹರಾಜಿನಲ್ಲಿ ಮೊದಲು ಬಿಡ್​ ಸಲ್ಲಿಸಿದ್ದು ರಾಜಸ್ಥಾನ ತಂಡವಲ್ಲ
Vaibhav Suryavanshi : ಕಳೆದ ಐಪಿಎಲ್​ನಲ್ಲಿ ಅಂದರೆ, 18ನೇ ಆವೃತ್ತಿಯಲ್ಲಿ ಪಾದರ್ಪಣೆ ಮಾಡಿ, ಚೊಚ್ಚಲ ಟೂರ್ನಮೆಂಟ್​ನಲ್ಲೇ ಬ್ಯಾಟಿಂಗ್​ ಸುನಾಮಿ ಸೃಷ್ಟಿಸಿ ಎಲ್ಲರ ಗಮನ ಸೆಳೆದ ಟೀಮ್​ ಇಂಡಿಯಾದ ಯುವ ಸೆನ್ಸೇಷನ್​​ ವೈಭವ್ ಸೂರ್ಯವಂಶಿ, ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯಲ್ಲೂ ತನ್ನ ಬಿರುಗಾಳಿ ಬ್ಯಾಟಿಂಗ್​ ಅನ್ನು ಮುಂದುವರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವೈಭವ್​, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಸೀಸನ್​ನಲ್ಲಿ ರಾಜಸ್ಥಾನ ತಂಡ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಮೂರರಲ್ಲೂ ಗೆಲುವು ಸಾಧಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ಮೂರೂ ಪಂದ್ಯದಲ್ಲೂ ವೈಭವ್ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 52 ರನ್ ಗಳಿಸಿದ ವೈಭವ್​, ಗುಜರಾತ್ ಟೈಟಾನ್ಸ್ ವಿರುದ್ಧ 18 ಎಸೆತಗಳಲ್ಲಿ 31 ರನ್ ಗಳಿಸಿದರು. ಮಂಗಳವಾರ (ಏಪ್ರಿಲ್​ 07) ಗುವಾಹಟಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೆ ತಮ್ಮ ಬ್ಯಾಟಿಂಗ್​ನಲ್ಲಿ ವಿನಾಶ ಸೃಷ್ಟಿಸಿದರು. ಕೇವಲ 14 ಎಸೆತಗಳನ್ನು ಎದುರಿಸಿದ ವೈಭವ್​, 1 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 39 ರನ್ ಗಳಿಸಿದರು.
ಸತತವಾಗಿ ಮಿಂಚಿನಂತಹ ಫಾರ್ಮ್​ನಲ್ಲಿರುವ ವೈಭವ್​, ಇದೀಗ ಕ್ರೀಡಾಭಿಮಾನಿಗಳ ಫೇವರಿಟ್​ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ವೈಭವ್​ ಟ್ರೆಂಡಿಂಗ್​ನಲ್ಲಿದ್ದಾರೆ. ಅವರ ಕುರಿತಾದ ಅನೇಕ ಸುದ್ದಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಲ್ಲಿ ಒಂದು ಸುದ್ದಿ ಎಲ್ಲರ ಗಮನ ಸೆಳೆದಿದೆ. ಅದೇನೆಂದರೆ, ವೈಭವ್​ಗಾಗಿ ಐಪಿಎಲ್​ ಹರಾಜಿನಲ್ಲಿ ಮೊದಲು ಬಿಡ್​ ಸಲ್ಲಿಸಿದ್ದು ರಾಜಸ್ಥಾನ ತಂಡವಲ್ಲ, ಹಾಗಾದರೆ, ಯಾವ ತಂಡ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಹರಾಜಿನಲ್ಲಿ ಮೊದಲು ಬಿಡ್​ ಮಾಡಿದ್ದು ಯಾರು?

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ 1.1 ಕೋಟಿ ರೂ.ಗೆ ಖರೀದಿಸಿತು. ಆದಾಗ್ಯೂ, ಹರಾಜಿನಲ್ಲಿ ವೈಭವ್​ ಹೆಸರನ್ನು ಕರೆದಾಗ, ರಾಜಸ್ಥಾನ ಆರಂಭದಲ್ಲಿ ಅವರಿಗೆ ಬಿಡ್ ಮಾಡಲಿಲ್ಲ. ಅಂದಹಾಗೆ, ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಿತು. ಈ ಹರಾಜಿಗೆ ಆಯ್ಕೆಯಾದ 574 ಆಟಗಾರರಲ್ಲಿ ವೈಭವ್ ಸೂರ್ಯವಂಶಿ 491ನೇ ಸ್ಥಾನದಲ್ಲಿದ್ದರು. ಅವರನ್ನು ಕನಿಷ್ಠ 30 ಲಕ್ಷ ರೂ.ಗೆ ಹರಾಜಿನಲ್ಲಿ ಇಡಲಾಯಿತು. ಈ ವೇಳೆ ಅವರನ್ನು ಮೊದಲು ಬಿಡ್ ಮಾಡಿದ ತಂಡವೆಂದರೆ ಡೆಲ್ಲಿ ಕ್ಯಾಪಿಟಲ್ಸ್. ಬಳಿಕ ರಾಜಸ್ಥಾನ ರಾಯಲ್ಸ್ ಕೂಡ ಅದೇ ಕ್ರಮವನ್ನು ಅನುಸರಿಸಿತು.
ವೈಭವ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ತೀವ್ರ ಪೈಪೋಟಿ ನಡೆಸಿದವು. ಇದರಿಂದ ವೈಭವ್​ ಬೆಲೆ ಹೆಚ್ಚಾಯಿತು. ವೈಭವ್ ಸೂರ್ಯವಂಶಿಗೆ ಡೆಲ್ಲಿ ಕ್ಯಾಪಿಟಲ್ಸ್​ 1 ಕೋಟಿ ರೂ.ವರೆಗೆ ಬಿಡ್ ಮಾಡಿತು. ಆದರೆ, ಆ ಸಮಯದಲ್ಲಿ, ರಾಜಸ್ಥಾನ ರಾಯಲ್ಸ್​ 1 ಕೋಟಿ 10 ಲಕ್ಷ ರೂ.ಗಳಿಗೆ ಬಿಡ್ ಮಾಡಿತು. ಇದಾದ ಬಳಿಕ ಡೆಲ್ಲಿ ಮತ್ತೆ ಬಿಡ್​ ಮಾಡಲಿಲ್ಲ. ಅಂತಿಮವಾಗಿ ವೈಭವ್‌ರನ್ನು ಅದೇ ಬೆಲೆಗೆ ರಾಜಸ್ಥಾನ ರಾಯಲ್ಸ್​ ಖರೀದಿ ಮಾಡಿತು. ಈ ಸಮಯದಲ್ಲಿ ವೈಭವ್​ ಕೇವಲ 13 ವರ್ಷ ವಯಸ್ಸಾಗಿತ್ತು. ಈ ಪ್ರಕ್ರಿಯೆಯಲ್ಲಿ, ವೈಭವ್ ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದರು.
2025ರ ಐಪಿಎಲ್ ಆರಂಭದಲ್ಲಿ ವೈಭವ್​ ಅವರಿಗೆ 14 ವರ್ಷ ತುಂಬಿತು. ಐಪಿಎಲ್‌ನಲ್ಲಿ ತಮ್ಮ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ವೈಭವ್​ ಎಲ್ಲರ ಹುಬ್ಬೇರಿಸಿದರು. ಅಲ್ಲದೆ, ಅದೇ ಋತುವಿನಲ್ಲಿ ಅವರು ಶತಕ ಸಹ ಗಳಿಸಿದರು ಮತ್ತು ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರರಾದರು. ಅವರು ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲೂ ಬಿರುಗಾಳಿಯ ಬ್ಯಾಟಿಂಗ್​ ಮುಂದುವರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net