ಅಂದೇ ಎಚ್ಚರಿಸಿದ್ರು ಕ್ರಿಕೆಟ್​ ಫ್ಯಾನ್ಸ್! ಎಚ್ಚೆತ್ತುಕೊಳ್ಳದ ಕಾವ್ಯ ಮಾರನ್​ಗೆ 2.3 ಕೋಟಿ ರೂ. ಕಳೆದುಕೊಳ್ಳುವ ಭೀತಿ

ಪಾಕ್​ ಕ್ರಿಕೆಟಿಗ ಅಬ್ರಾರ್​ ಅಹ್ಮದ್​, ಕಾವ್ಯ ಮಾರನ್​
ಪಾಕ್​ ಕ್ರಿಕೆಟಿಗ ಅಬ್ರಾರ್​ ಅಹ್ಮದ್​, ಕಾವ್ಯ ಮಾರನ್​
Published on

ಪ್ರಮುಖ ಮುಖ್ಯಾಂಶಗಳು

  • ಸನ್​ರೈಸರ್ಸ್​ ಹೈದ್ರಾಬಾದ್​ ಓನರ್​ ಕಾವ್ಯ ಮಾರನ್​ಗೆ ಧರ್ಮ ಸಂಕಟ
  • ಪಾಕಿಸ್ತಾನ ಕ್ರಿಕೆಟಿಗ ಕೈಕೊಡುವ ಮುನ್ಸೂಚನೆ ಬೆನ್ನಲ್ಲೇ ತಲೆಬಿಸಿ
  • ಅಬ್ರಾರ್​ ಅಹ್ಮದ್​ಗೆ ಚೆಕ್​ಮೆಟ್​ ಇಟ್ಟ ಪಿಸಿಬಿ ಕ್ರಿಕೆಟ್​
Kavya Maran: ದಿ ಹಂಡ್ರೆಡ್​ ಲೀಗ್​ಗೆ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್​ರನ್ನು ತಮ್ಮ ಫ್ರಾಂಚೈಸಿಗೆ ಬರೋಬ್ಬರಿ 2.3 ಕೋಟಿ ರೂ. ಕೊಟ್ಟು ಖರೀದಿಸಿದ ಸನ್​ರೈಸರ್ಸ್​ ಹೈದ್ರಾಬಾದ್​ ಫ್ರಾಂಚೈಸಿಯ ಒಡತಿ ಕಾವ್ಯ ಮಾರನ್​ಗೆ ಇದೀಗ ಧರ್ಮ ಸಂಕಟ ಎದುರಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಪಿಸಿಬಿ ಅಹ್ಮದ್​ರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಅಲ್ಲೊಂದು ಚೆಕ್​ಮೆಟ್​ ಇಟ್ಟಿದೆ. ಶೀಘ್ರದಲ್ಲೇ ಯುಕೆಯಲ್ಲಿ ನಡೆಯಲಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ಬೇಕಿದ್ರೆ ಆಡಿ, ಇಲ್ಲವೇ ಅಂತಾರಾಷ್ಟ್ರೀಯ ತಂಡದಲ್ಲಿ ನಮ್ಮ ಜೊತೆ ಸೇರಿಕೊಳ್ಳಿ. ಈ ಆಯ್ಕೆಯೂ ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಆಟಗಾರರನ್ನು ಗೊಂದಲಕ್ಕೆ ಸಿಲುಕಿಸಿದೆ.
ಈ ಲೀಗ್‌ನಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮಾಲೀಕರ ಒಡೆತನದ 'ಸನ್‌ರೈಸರ್ಸ್ ಲೀಡ್ಸ್' ಫ್ರಾಂಚೈಸಿ ಅಬ್ರಾರನ್ನು ತಂಡಕ್ಕೆ ಖರೀದಿಸಿದೆ. ಈಗ ನೋಡಿದ್ರೆ, ಅವರ ಮುಂದೆ ಎರಡು ಆಯ್ಕೆಗಳಿವೆ. ಒಂದು ಕ್ಲಬ್​ ಕ್ರಿಕೆಟ್​ಗೆ ಆಡುವುದು ಇಲ್ಲವೇ, ಅಂತಾರಾಷ್ಟ್ರೀಯ ತಂಡದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದು. ಯಾವುದೇ ಗೊಂದಲ ಅಥವಾ ಮುನಿಸು ಬೇಡವೆಂದೇ ಪಿಸಿಬಿ ಈಗಾಗಲೇ ಆಟಗಾರನಿಗೆ ಎನ್​ಓಸಿ ಕೂಡ ಕೊಟ್ಟುಬಿಟ್ಟಿದೆ.
ಜು.21ರಿಂದ ಆರಂಭಗೊಳ್ಳಲಿರುವ ಲೀಗ್​ಗೆ ಆಡುವುದು ಬಿಡುವುದು ಅಬ್ರಾರ್​ಗೆ ಬಿಟ್ಟದು ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತಿಳಿಸಿದೆ. ಮತ್ತೊಂದೆಡೆ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಜು.25ರಿಂದ ಆರಂಭಗೊಳ್ಳಲಿದೆ. ಇದರರ್ಥ ಲೀಗ್ ಪ್ರಾರಂಭವಾದ ಕೇವಲ ನಾಲ್ಕು ದಿನಗಳ ಬೆನ್ನಲ್ಲೇ ಪಾಕ್​ಗೆ ಟೆಸ್ಟ್ ಸರಣಿ ಶುರುವಾಗಲಿದೆ. ಹೀಗಿರುವಾಗ ಎರಡೂ ಕಡೆ ಆಡಲು ಅಬ್ರಾರ್ ಅಹ್ಮದ್​ಗೆ ಅವಕಾಶವಿಲ್ಲ. ಹೀಗಾಗಿ, ಯಾರ ಕಡೆ ಹೋಗ್ತಾರೆ ಅನ್ನೋದೇ ಗೊಂದಲ. ಇದೇ ಕಾವ್ಯ ಮಾರನ್​ಗೆ ಈಗ ದೊಡ್ಡ ತಲೆಬಿಸಿ ತಂದೊಡ್ಡಿದೆ.
ಕಾವ್ಯ ಮಾರನ್ ಅವರು ಪಾಕಿಸ್ತಾನಿ ಆಟಗಾರನನ್ನು ಭಾರಿ ಬೆಲೆಗೆ ಖರೀದಿಸಿದ್ದಕ್ಕಾಗಿ ಅಂದೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದರು. ಪಾಕ್​ ನಮ್ಮ ಬದ್ಧ ವೈರಿ. ಅಲ್ಲಿನ ಆಟಗಾರರು ನಿಮ್ಮ ತಂಡಕ್ಕೆ ಬೇಕಿತ್ತಾ? ನಿಮಗೆ ನಾಚಿಕೆ ಆಗುವುದಿಲ್ಲವೇ? ಯಾವುದೇ ಕಾರಣಕ್ಕೂ ಕಾವ್ಯ ಮಾರನ್​ ಅವರ ಎಸ್​ಆರ್​ಎಚ್​ ಫ್ರಾಂಚೈಸಿಗೆ ಐಪಿಎಲ್​ನಲ್ಲಿ ಅವಕಾಶ ಕೊಡಬೇಡಿ ಎಂದೆಲ್ಲ ಕ್ರಿಕೆಟ್​ ಪ್ರೇಮಿಗಳು ಹಿಗ್ಗಾಮುಗ್ಗಾ ಜಾಡಿಸಿದ್ದರು. ಈಗ ನೋಡಿದ್ರೆ, ಅಬ್ರಾರ್​ ಕಾವ್ಯ ತಂಡಕ್ಕೆ ಕೈಕೊಡುವ ಸ್ಥಿತಿಯಲ್ಲಿದ್ದಾರೆ. ಇದು ಆಕೆಗೆ ಭಾರಿ ಮುಖಭಂಗವನ್ನೇ ಉಂಟುಮಾಡಿದೆ. ಒಟ್ಟಾರೆ ಅಬ್ರಾರ್​, ಪಾಕಿಸ್ತಾನ ಟೆಸ್ಟ್ ತಂಡಕ್ಕೆ ಸೇರುತ್ತಾರಾ ಅಥವಾ ಕಾವ್ಯ ಮಾರನ್​ ಖರೀದಿಗೆ ಮೋಸ ಮಾಡದಂತೆ ಹಂಡ್ರೆಂಡ್​ ಲೀಗ್ ಆಡುತ್ತಾರಾ ಎಂಬುದೇ ಸದ್ಯ ಹಲವರ ಕುತೂಹಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net