IPL 2026: ಶ್ರೇಯಸ್ ಅಯ್ಯರ್ ಅಬ್ಬರಕ್ಕೆ ಬೆದರಿದ ಹೈದರಾಬಾದ್ ಬೌಲರ್‌ಗಳು: ಪಂಜಾಬ್ ಪಾಲಾಯ್ತು ರೋಚಕ ಗೆಲುವು!

IPL 2026
IPL 2026
Published on
ಮುಲ್ಲನ್‌ಪುರ: IPL 2026ರ 17ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ನೀಡಿದ್ದ 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಐತಿಹಾಸಿಕ ಜಯ ದಾಖಲಿಸಿದೆ. ನಾಯಕ ಶ್ರೇಯಸ್ ಅಯ್ಯರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಗಳ ಜಯ ತನ್ನದಾಗಿಸಿಕೊಂಡಿತು.

ಸನ್ ರೈಸರ್ಸ್ ಅಬ್ಬರದ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮಾ (74 ರನ್, 28 ಎಸೆತ) ಮತ್ತು ಟ್ಯಾವಿಸ್ ಹೆಡ್ (38 ರನ್, 23 ಎಸೆತ) ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಕೇವಲ 8.1 ಓವರ್‌ಗಳಲ್ಲಿ 120 ರನ್ ಚಚ್ಚುವ ಮೂಲಕ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿತು. ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳಿದ್ದವು. ನಂತರ ಬಂದ ಹೆನ್ರಿಚ್ ಕ್ಲಾಸೆನ್ 39 ರನ್ ಕೊಡುಗೆ ನೀಡಿದರು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿತು.

ಪಂಜಾಬ್ ಕಿಂಗ್ಸ್ ಪವರ್‌ಫುಲ್ ಚೇಸಿಂಗ್

ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಓಪನರ್‌ಗಳಾದ ಪ್ರಿಯಾಂಶ್ ಆರ್ಯ (57 ರನ್, 20 ಎಸೆತ) ಮತ್ತು ಪ್ರಭ್‌ಸಿಮ್ರನ್ ಸಿಂಗ್ (51 ರನ್, 25 ಎಸೆತ) ಸಿಡಿಲಬ್ಬರದ ಆರಂಭ ನೀಡಿದರು. ಕೇವಲ 6 ಓವರ್‌ಗಳ ಪವರ್‌ಪ್ಲೇನಲ್ಲಿ ಈ ಜೋಡಿ 93 ರನ್ ಸಿಡಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಮಧ್ಯಮ ಕ್ರಮಾಂಕದಲ್ಲಿ ನೀಹಲ್ ವಧೇರಾ (14) ಬೇಗನೆ ಔಟಾದಾಗ ಪಂದ್ಯ ತುಸು ಕುತೂಹಲ ಮೂಡಿಸಿತ್ತು. ಆದರೆ, ನಾಯಕ ಶ್ರೇಯಸ್ ಅಯ್ಯರ್ (69 ರನ್, 33 ಎಸೆತ)* ಮತ್ತು ಫಿನಿಶರ್ ಶಶಾಂಕ್ ಸಿಂಗ್ (16 ರನ್, 9 ಎಸೆತ)* ಯಾವುದೇ ಆತಂಕವಿಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಯ್ಯರ್ ತಮ್ಮ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್

ಸನ್ ರೈಸರ್ಸ್ ಹೈದರಾಬಾದ್: 219/6 (20 ಓವರ್) - ಅಭಿಷೇಕ್ ಶರ್ಮಾ 74, ಹೆನ್ರಿಚ್ ಕ್ಲಾಸೆನ್ 39; ಶಶಾಂಕ್ ಸಿಂಗ್ 2/20.
ಪಂಜಾಬ್ ಕಿಂಗ್ಸ್: 223/4 (18.5 ಓವರ್) - ಶ್ರೇಯಸ್ ಅಯ್ಯರ್ 69*, ಪ್ರಿಯಾಂಶ್ ಆರ್ಯ 57, ಪ್ರಭ್‌ಸಿಮ್ರನ್ ಸಿಂಗ್ 51; ಶಿವಂಗ್ ಕುಮಾರ್ 3/33,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net