ಟಿ20 ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಪಂದ್ಯ ಬಹಿಷ್ಕಾರಕ್ಕೆ ಪಾಕಿಸ್ತಾನ ಚಿಂತನೆ!

ಟಿ20 ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಪಂದ್ಯ ಬಹಿಷ್ಕಾರಕ್ಕೆ ಪಾಕಿಸ್ತಾನ ಚಿಂತನೆ!
ಟಿ20 ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಪಂದ್ಯ ಬಹಿಷ್ಕಾರಕ್ಕೆ ಪಾಕಿಸ್ತಾನ ಚಿಂತನೆ!
Published on
ಲಾಹೋರ್​: ಬಾಂಗ್ಲಾದೇಶದ ಪಂದ್ಯಗಳನ್ನು ಸ್ಥಳಾಂತರಿಸಲು ಒಪ್ಪಿಕೊಳ್ಳದ ಐಸಿಸಿ ನಿರ್ಧಾರವನ್ನು ಖಂಡಿಸಿ ಟಿ20 ವಿಶ್ವಕಪ್​ (T20 World Cup) ಟೂರ್ನಿಯಿಂದಲೇ ಹೊರನಡೆಯುವ ಬೆದರಿಕೆ ಹಾಕಿದ್ದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಇದೀಗ ತನ್ನ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ಮಾಡುವ ಸಾಧ್ಯತೆ ಕಾಣಿಸಿದೆ. ಸಂಪೂರ್ಣ ಟೂರ್ನಿಯನ್ನು ಬಹಿಷ್ಕರಿಸುವ ಬದಲಾಗಿ, ಫೆಬ್ರವರಿ 15ರಂದು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಕೊಲಂಬೊದಲ್ಲಿ ನಿಗದಿಯಾಗಿರುವ ಹೈವೋಲ್ಟೇಜ್​ ಪಂದ್ಯವನ್ನು ಮಾತ್ರ ಬಹಿಷ್ಕರಿಸುವ ಬಗ್ಗೆ ಪಿಸಿಬಿ ಇದೀಗ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಪಾಕ್​ ತಂಡ ಭಾರತ ವಿರುದ್ಧದ ಪಂದ್ಯವನ್ನು ಆಡದಿದ್ದರೆ ಅಂಕ ಕಳೆದುಕೊಳ್ಳಲಿದೆ. ಆದರೆ ಅದರ ಈ ನಡೆ ಪ್ರಸಾರ ವಾಹಿನಿ ಮತ್ತು ಐಸಿಸಿಯ (ICC) ಆದಾಯಕ್ಕೆ ಭಾರಿ ಹೊಡೆತವನ್ನೂ ನೀಡಲಿದೆ. ಐಸಿಸಿ ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವುದು ಪಿಸಿಬಿಯ ಯೋಚನೆಯಾಗಿದೆ.

ಟಿ20 ವಿಶ್ವಕಪ್​ ವೇಳೆ ಬಾಂಗ್ಲಾ ಪರ ನಿಲ್ಲುವ ಸಲುವಾಗಿ ಪಿಸಿಬಿ ಮೂರು ವಿಧದ ಯೋಜನೆಯನ್ನು ಹಾಕಿಕೊಂಡಿದೆ. ಇದರಲ್ಲಿ ಭಾರತ ವಿರುದ್ಧದ ಪಂದ್ಯ ಆಡದಿರುವುದು ಒಂದಾದರೆ, ಟೂರ್ನಿಯ ಎಲ್ಲ ಪಂದ್ಯಗಳನ್ನು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡುವುದು ಇನ್ನೊಂದು ಆಯ್ಕೆಯಾಗಿದೆ. ಟೂರ್ನಿಯಲ್ಲಿ ಸಾಧಿಸುವ ಎಲ್ಲ ಗೆಲುವುಗಳನ್ನು ಬಾಂಗ್ಲಾದೇಶದ ಅಭಿಮಾನಿಗಳಿಗೆ ಅರ್ಪಿಸುವುದು ಪಿಸಿಬಿಯ ಇನ್ನೊಂದು ಯೋಚನೆಯಾಗಿದೆ.

ಸಂಪೂರ್ಣ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ ಪಿಸಿಬಿಗೆ ಭಾರೀ ಆರ್ಥಿಕ ಸಂಕಷ್ಟ ಎದುರಾಗಲಿದೆ. ಹೀಗಾಗಿ ಇದನ್ನು ತಪ್ಪಿಸಲು ಪಿಸಿಬಿ, ಐಸಿಸಿಗೆ ಪರೋಕ್ಷವಾಗಿ ಹೊಡೆತ ನೀಡುವಂಥ ಚಿಂತನೆ ನಡೆಸಿದೆ. ಪಾಕ್​ ತಂಡ ಭಾರತ ವಿರುದ್ಧದ ಪಂದ್ಯ ಆಡದಿದ್ದರೂ, ಅಮೆರಿಕ, ನೆದರ್ಲೆಂಡ್​, ನಮೀಬಿಯಾ ವಿರುದ್ಧದ ಇತರ 3 ಪಂದ್ಯಗಳಲ್ಲಿ ಗೆದ್ದು ಸೂಪರ್​-8 ಹಂತಕ್ಕೇರುವ ಅವಕಾಶ ಹೊಂದಿದೆ.
ಶುಕ್ರವಾರ ಅಥವಾ ಸೋಮವಾರ ಅಂತಿಮ ನಿರ್ಧಾರ?
ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ (PCB) ಅಧ್ಯಕ್ಷ ಮೊಹ್ಸಿನ್​ ನಖ್ವಿ ಸೋವಾರ ಪ್ರಧಾನಿ ಶಹಬಾಜ್​ ಶರೀಫ್​ ಅವರನ್ನು ಭೇಟಿಯಾದರು ಮತ್ತು ಐಸಿಸಿ ಜತೆಗಿನ ತಿಕ್ಕಾಟದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡರು. ತಮ್ಮ ಮುಂದಿರುವ ಎಲ್ಲ ಆಯ್ಕೆಗಳನ್ನೂ ಪ್ರಧಾನಿಗೆ ವಿವರಿಸಿದರು. ಆದರೆ, ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಬೇಕೇ, ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಶುಕ್ರವಾರ ಅಥವಾ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ನಖ್ವಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net