ಭಾರತ ಟೆಸ್ಟ್​ ತಂಡದ ಉಪನಾಯಕನ ಹುದ್ದೆಯಿಂದ ರಿಷಭ್​ ಪಂತ್​ ಬಿಡುಗಡೆ?

ಭಾರತ ಟೆಸ್ಟ್​ ತಂಡದ ಉಪನಾಯಕನ ಹುದ್ದೆಯಿಂದ ರಿಷಭ್​ ಪಂತ್​ ಬಿಡುಗಡೆ?
ಭಾರತ ಟೆಸ್ಟ್​ ತಂಡದ ಉಪನಾಯಕನ ಹುದ್ದೆಯಿಂದ ರಿಷಭ್​ ಪಂತ್​ ಬಿಡುಗಡೆ?
Published on
ನವದೆಹಲಿ: ಐಪಿಎಲ್​ ಬೆನ್ನಲ್ಲೇ ಅಫ್ಘಾನಿಸ್ತಾನ ವಿರುದ್ಧ ಮುಲ್ಲನ್​ಪುರದಲ್ಲಿ ನಡೆಯಲಿರುವ ಏಕೈಕ ಟೆಸ್ಟ್​ ಪಂದ್ಯಕ್ಕೆ ಭಾರತ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ನಿರೀಕ್ಷೆ ಇಲ್ಲ. ಆದರೆ ಟೆಸ್ಟ್​ ತಂಡದ ಉಪನಾಯಕನ ಸ್ಥಾನದಿಂದ ರಿಷಭ್​ ಪಂತ್​ (Rishabh Pant) ಬಿಡುಗಡೆಯಾಗುವ ಸಾಧ್ಯತೆ ಇದೆ. 28 ವರ್ಷದ ಪಂತ್​ಗೆ ಬ್ಯಾಟಿಂಗ್​ನತ್ತ ಹೆಚ್ಚಿನ ಗಮನಹರಿಸಲು ನೆರವಾಗುವ ಸಲುವಾಗಿ ಆಯ್ಕೆಗಾರರು ಈ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಆಫ್ಘನ್​ ವಿರುದ್ಧ ಟೆಸ್ಟ್​, ಏಕದಿನ ಸರಣಿಗೆ ಮಂಗಳವಾರ ಗುವಾಹಟಿಯಲ್ಲಿ ಅಜಿತ್​ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿ ಭಾರತ ತಂಡವನ್ನು ಆರಿಸಲಿದೆ.

ರಿಷಭ್​ ಪಂತ್​ ಐಪಿಎಲ್​ನಲ್ಲಿ ಕಳೆದ 2 ಆವೃತ್ತಿಗಳಿಂದ ಲಖನೌ ಸೂಪರ್​ಜೈಂಟ್ಸ್​ ನಾಯಕ ಮತ್ತು ವಿಕೆಟ್​ ಕೀಪರ್​-ಬ್ಯಾಟರ್​ ಆಗಿ ಹೆಚ್ಚಿನ ಯಶಸ್ಸು ಕಂಡಿಲ್ಲ. ಅಲ್ಲದೆ ಕಳೆದ ನವೆಂಬರ್​ನಲ್ಲಿ ದ. ಆಪ್ರಿಕಾ ವಿರುದ್ಧದ ಗುವಾಹಟಿ ಟೆಸ್ಟ್​ನಲ್ಲಿ ಶುಭಮಾನ್​ ಗಿಲ್​ ಗೈರಿನಲ್ಲಿ ನಾಯಕತ್ವ ನಿರ್ವಹಿಸಿದಾಗಲೂ ಅವರ ಕಾರ್ಯತಂತ್ರಗಳು ಹೆಚ್ಚಿನ ಪ್ರಭಾವ ಬೀರಿರಲಿಲ್ಲ.

"ಟೆಸ್ಟ್​ ತಂಡದಲ್ಲಿ ಪಂತ್​ ಬ್ಯಾಟರ್​ ಆಗಿ ಆಕ್ರಮಣಕಾರಿ ಆಟದೊಂದಿಗೆ ಹೆಚ್ಚಿನ ಯಶ ಸಾಧಿಸಿದ್ದಾರೆ. ಆದರೆ ಇದರೊಂದಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದಾಗ ಅವರಿಂದ ಅದೇ ರೀತಿಯ ನಿರ್ವಹಣೆ ಬಂದಿಲ್ಲ. ಹೀಗಾಗಿ ಅವರಿಗೆ ಸ್ವತಂತ್ರವಾಗಿ ಆಡುವ ಅವಕಾಶ ಕಲ್ಪಿಸಲು ಇತರೆಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಲು ಆಯ್ಕೆ ಸಮಿತಿ ಬಯಸಿದೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಪಂತ್​ ಹಾಲಿ ಬ್ಯಾಟಿಂಗ್​ ಫಾರ್ಮ್​ನಲ್ಲಿ ಏಕದಿನ ತಂಡದಲ್ಲಿ 2ನೇ ವಿಕೆಟ್​ ಕೀಪರ್​ ಆಗಿ ಉಳಿದುಕೊಳ್ಳುವುದು ಕೂಡ ಕಠಿಣವೆನಿಸಿದೆ. ಸಂಜು ಸ್ಯಾಮ್ಸನ್​, ಇಶಾನ್​ ಕಿಶನ್​, ಧ್ರುವ ಜುರೆಲ್​ ಏಕದಿನ ತಂಡದ 2ನೇ ಕೀಪರ್​ ಸ್ಥಾನದ ರೇಸ್​ನಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net