ಆತ ಟೆಕ್ನಿಕ್​ ಇಲ್ಲದೆ... ಅಭಿಷೇಕ್​ ವಿರುದ್ಧ ನಾಲಿಗೆ ಹರಿಬಿಟ್ಟ ಪಾಕಿಸ್ತಾನ ಆಟಗಾರ | Abhishek Sharma

ಅಭಿಷೇಕ್ ಶರ್ಮ(ಬಲ), ಮೊಹಮ್ಮದ್​ ಅಮಿರ್ (ಎಡ)
ಅಭಿಷೇಕ್ ಶರ್ಮ(ಬಲ), ಮೊಹಮ್ಮದ್​ ಅಮಿರ್ (ಎಡ)
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅಬ್ಬರಿಸದ ಅಭಿಷೇಕ್ ಶರ್ಮ
  • ಸತತ ಮೂರು ಪಂದ್ಯಗಳಲ್ಲಿ ಒಂದು ರನ್​ ಗಳಿಸದೆ ಔಟ್​
  • ಅಭಿಷೇಕ್​ ಒಬ್ಬ ಟೆಕ್ನಿಕ್​ ಇಲ್ಲದೆ ಆಡುವ ಬ್ಯಾಟರ್​ ಎಂದ ಪಾಕ್​ ಆಟಗಾರ
Abhishek Sharma: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಓಟ ಮುಂದುವರೆಸಿದೆ. ಈಗಾಗಲೇ ಸೂಪರ್​ 8 ಹಂತಕ್ಕೆ ನೇರ ಪ್ರವೇಶ ಪಡೆದಿರುವ ಸೂರ್ಯಕುಮಾರ್ ಯಾದವ್ ಪಡೆಗೆ ಅಭಿಷೇಕ್ ಶರ್ಮ ಅವರ ಕಳಪೆ ಪ್ರದರ್ಶನ ಸದ್ಯ ತಲೆನೋವಾಗಿ ಕಾಡಲಾರಂಭಿಸಿದೆ.
ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಆಡುವ ಅಭಿಷೇಕ್ ಶರ್ಮ ಟಿ20 ವಿಶ್ವಕಪ್​ನಲ್ಲಿ ಮಾತ್ರ ಡಕ್​ಔಟ್​ ಆಗುತ್ತಿರುವುದು ಈಗ ಕ್ರಿಕೆಟ್​ ಪ್ರಿಯರನ್ನು ಕೆರಳಿಸಿದೆ. ಉತ್ತಮ ಆರಂಭಿಕ ಬ್ಯಾಟರ್​ ಆಗಿ ಗುರುತಿಸಿಕೊಂಡಿರುವ ಅಭಿಷೇಕ್​, ಅದ್ಯಾಕೋ ಒಂದೇ ಒಂದು ರನ್​ ಕಲೆಹಾಕಲು ತೀರ ಪರದಾಡುವ ಪರಿಸ್ಥಿತಿ ತಲುಪಿದ್ದಾರೆ. ಯುಎಸ್​ಎ, ಪಾಕಿಸ್ತಾನ ಮತ್ತು ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯಗಳಲ್ಲಿ ಅಭಿಷೇಕ್​ ಶೂನ್ಯಕ್ಕೆ ಔಟ್​ ಆಗಿರುವುದು ಇದೀಗ ಪಾಕಿಸ್ತಾನದ ಆಟಗಾರ ಮೊಹಮ್ಮದ್​ ಅಮೀರ್​ ಸೊಕ್ಕಿನ ಮಾತಿಗೆ ಕಾರಣವಾಗಿದೆ.
"ಅಭಿಷೇಕ್​ ಒಬ್ಬ ಅದ್ಭುತ ಬ್ಯಾಟರ್​ ಏನಲ್ಲ. ಆತ ಟೆಕ್ನಿಕ್​ ಇಲ್ಲದೆ ಆಡುವ ಕ್ರಿಕೆಟಿಗ. ಅಭಿಷೇಕ್​ರನ್ನು ನಾನು ನಮ್ಮದೇ ತಂಡದ ಬ್ಯಾಟರ್​ ಸೈಮ್​ ಆಯುಬ್​ಗೆ ಹೋಲಿಸುತ್ತೇನೆ. ಕಾರಣ, ಆಯುಬ್​ ಬಂದಾಗ ಅವನಿಗೆ ಯಾವ ಕಡೆ ಹೊಡೆಯಬೇಕು ಅನ್ನೋದೇ ಗೊತ್ತಿರಲಿಲ್ಲ. ಆಡಬಾರದ ಜಾಗದಲ್ಲಿ ಆಡ್ತಿದ್ದ. ಲೆಗ್​ಸೈಡ್​ ರನ್​ಗಳನ್ನು ಕಲೆಹಾಕುತ್ತಿದ್ದ. ಬಾಲ್​ ನಾಲ್ಕನೇ ಅಥವಾ ಐದನೇ ಸ್ಟಂಪ್​ನತ್ತ ಬಂದರೆ ಅವನಿಗೆ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಭಿಷೇಕ್ ಕೂಡ ಹಾಗೆಯೇ" ಎಂದಿದ್ದಾರೆ.
'ಹಾರ್ನ ಮನ ಹೈನ್' ಶೋನಲ್ಲಿ ಈ ಕುರಿತಂತೆ ಮಾತನಾಡಿದ ಅಮಿರ್​, ಸೈಮ್​ ಮತ್ತು ಅಭಿಷೇಕ್​ ಇಬ್ಬರೂ ಸಹ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉಳಿಯಬೇಕು ಎಂದರೆ ತಮ್ಮ ಆಲ್​ರೌಂಡ್​ ಪ್ರದರ್ಶನದ ಮೇಲೆ ಹೆಚ್ಚು ಗಮನ ಹರಿಸಬೇಕು. ಮೈದಾನದಲ್ಲಿ ಎಲ್ಲಿಯವರೆಗೆ ಇವರು ಕಷ್ಟ ಪಡೋದಿಲ್ಲವೋ, ಅಲ್ಲಿಯವರೆಗೆ ಅಂತಾರಾಷ್ಟ್ರೀಯ ಬೌಲರ್​ಗಳು ನಿಮ್ಮ ಸ್ಟ್ರಾಂಗ್​ ಜೋನ್​ಗೆ ಬೌಲ್​ ಮಾಡೋದಿಲ್ಲ ಎಂದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net