ಬಾಂಗ್ಲಾ ದಿಕ್ಕು ತಪ್ಪಿಸಿದ್ದೇ ಪಾಕ್​! ಅವರ ದೌರ್ಜನ್ಯಗಳು ಇಡೀ ಜಗತ್ತಿಗೆ ಗೊತ್ತಿದೆ: ರಾಜೀವ್ ಶುಕ್ಲಾ ಕಿಡಿನುಡಿ | BCCI

ಟಿ20 ವಿಶ್ವಕಪ್​ ವಿವಾದ
ಟಿ20 ವಿಶ್ವಕಪ್​ ವಿವಾದ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಆಡುವ ಬಗ್ಗೆ ಮುಂದಿನ ವಾರ ತಿಳಿಸುತ್ತೇವೆ ಎಂದ ಪಿಸಿಬಿ
  • ನಿರ್ಧಾರ ಕುರಿತು ಹೇಳುವ ಹೈಡ್ರಾಮಾ ಇನ್ನೂ ಒಂದು ವಾರಕ್ಕೆ ಮುಂದೂಡಿಕೆ
  • ಬಾಂಗ್ಲಾದೇಶ ನಿರ್ಧಾರದ ಹಿಂದೆ ಪಾಕಿಸ್ತಾನ ಪಾತ್ರವಿದೆ ಎಂದ ಬಿಸಿಸಿಐ
ನವದೆಹಲಿ: ಭಾರತದಲ್ಲಿ ನಮ್ಮ ಆಟಗಾರರಿಗೆ ಸುರಕ್ಷತೆ ಇಲ್ಲ. ಹೀಗಾಗಿ, ಟಿ20 ವಿಶ್ವಕಪ್​ನಲ್ಲಿ ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಐಸಿಸಿಗೆ ಪತ್ರದ ಮುಖೇನ ಮನವಿ ಮಾಡಿಕೊಂಡಿದ್ದ ಬಾಂಗ್ಲಾ ಕ್ರಿಕೆಟ್​ಗೆ ಭಾರೀ ಮುಖಭಂಗವೇ ಉಂಟಾಗಿದೆ. ಭಾರತಕ್ಕೆ ನಾವು ಪ್ರವಾಸ ಮಾಡಲ್ಲ ಎಂದಿದ್ದ ಬಿಸಿಬಿಯನ್ನು ಕಡೆಗೂ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಕಿತ್ತುಬಿಸಾಡಿದೆ. ಈ ಮಧ್ಯೆ, ಹೊಸ ಹೈಡ್ರಾಮಾ ಮುಂದುವರಿಸಿರುವ ಪಾಕಿಸ್ತಾನ, ವಿಶ್ವಕಪ್​ ಆಡಬೇಕೋ, ಬೇಡವೋ ಎಂಬ ನಿರ್ಧಾರವನ್ನು ಶುಕ್ರವಾರ (ಜ.30) ಅಥವಾ ಸೋಮವಾರ ಹೇಳ್ತವೆ ಎಂದಿದೆ.  
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ದೇಶದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದು, ಟಿ20 ವಿಶ್ವಕಪ್​ ಟೂರ್ನಿಯಿಂದ ಐಸಿಸಿ ಬಾಂಗ್ಲಾದೇಶವನ್ನು ಹೊರಗಿಟ್ಟ ಹಿನ್ನೆಲೆ, ತಮ್ಮ ತಂಡ ಕೂಡ ಟೂರ್ನಿಯನ್ನು ಕೈಬಿಡುವ ಬಗ್ಗೆ ಪ್ರಧಾನಿಯೊಂದಿಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.  ದೀರ್ಘಕಾಲದ ಚರ್ಚೆಯ ಬಳಿಕ ಈ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ಜ.30 ಅಥವಾ ಫೆ.02ರಂದು ತಿಳಿಸುವುದಾಗಿ ಪಾಕ್​ ತಾವು ಮಾಡುತ್ತಿರುವ ಹೈಡ್ರಾಮವನ್ನು ಮುಂದುವರಿಸಿದೆ.         

ಪಾಕ್​ ವಿರುದ್ಧ ಬಿಸಿಸಿಐ ಉಪಾಧ್ಯಕ್ಷ ಕಿಡಿನುಡಿ

ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, "ನಾವು ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ಆಡಬೇಕೆಂದು ಬಯಸಿದ್ದೆವು. ಸಂಪೂರ್ಣ ಭದ್ರತೆಯನ್ನು ಒದಗಿಸುತ್ತೇವೆ ಮತ್ತು ಅದರಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಅವರಿಗೆ ಭರವಸೆಯನ್ನೂ ನೀಡಿದ್ದೆವು. ಆದರೆ, ಅವರು ಭಾರತದಲ್ಲಿ ಆಡದಿರಲು ನಿರ್ಧರಿಸಿ, ಕೊನೆಯ ಕ್ಷಣದಲ್ಲಿ ಸ್ಥಳ ಬದಲಾಯಿಸಲು ಕೋರಿದರು. ಇದು ಸಾಧ್ಯವಿಲ್ಲ. ಹೀಗಾಗಿಯೇ, ಐಸಿಸಿ ಬಾಂಗ್ಲಾ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿತು" ಎಂದರು.
"ಬಾಂಗ್ಲಾ ಟಿ20 ವಿಶ್ವಕಪ್​ನಿಂದ ಹೊರಗುಳಿಯಲು ಪಾಕಿಸ್ತಾನವೇ ಮೂಲ ಕಾರಣ. ಅವರ ನಿರ್ಧಾರದಲ್ಲಿ ಪಾಕ್​ ಪಾತ್ರವಿದೆ. ಅನಗತ್ಯವಾಗಿ ಬಾಂಗ್ಲಾದೇಶದ ವಿಷಯದಲ್ಲಿ ಪಿಸಿಬಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಬಿಸಿಬಿ ದಾರಿ ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ತಪ್ಪು. ಬಾಂಗ್ಲಾ ವಿರುದ್ಧ ಪಾಕಿಸ್ತಾನ ಮಾಡಿರುವ ದೌರ್ಜನ್ಯಗಳು ಇಡೀ ಜಗತ್ತಿಗೆ ತಿಳಿದಿದೆ. ಈಗ ಅವರನ್ನು ಸಹಾನುಭೂತಿಯಿಂದ ದಿಕ್ಕು ತಪ್ಪಿಸುತ್ತಿರುವುದು ವಿಪರ್ಯಾಸ" ಎಂದು ಹೇಳಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net