ಇದೇ ನೋಡಿ ಟೀಮ್​ ಇಂಡಿಯಾದ ಗೆಲುವಿಗೆ ಅಸಲಿ ಕಾರಣ... ಅಚ್ಚರಿಯ ಹೇಳಿಕೆ ನೀಡಿದ ಶಾಹಿದ್​ ಅಫ್ರಿದಿ! Shahid Afridi

ಇದೇ ನೋಡಿ ಟೀಮ್​ ಇಂಡಿಯಾದ ಗೆಲುವಿಗೆ ಅಸಲಿ ಕಾರಣ... ಅಚ್ಚರಿಯ ಹೇಳಿಕೆ ನೀಡಿದ ಶಾಹಿದ್​ ಅಫ್ರಿದಿ! Shahid Afridi
ಇದೇ ನೋಡಿ ಟೀಮ್​ ಇಂಡಿಯಾದ ಗೆಲುವಿಗೆ ಅಸಲಿ ಕಾರಣ... ಅಚ್ಚರಿಯ ಹೇಳಿಕೆ ನೀಡಿದ ಶಾಹಿದ್​ ಅಫ್ರಿದಿ! Shahid Afridi
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಗೆಲ್ಲಲು ಕಾರಣ ಏನೆಂದು ತಿಳಿಸಿದ ಪಾಕಿಸ್ತಾನದ ಮಾಜಿ ನಾಯಕ
  • ಭಾರತ ತಂಡದ ಆಟಗಾರರನ್ನು ಮನಸೋಇಚ್ಛೆ ಕೊಂಡಾಡಿದ ಶಾಹಿದ್ ಆಫ್ರಿದಿ
  • ಈ ಪ್ರಶಸ್ತಿಗೆ ಭಾರತ ಅರ್ಹ ಮತ್ತು ಅದು ಶ್ರೇಷ್ಠವಾದ ಟೀಮ್​ ಕಾಂಬಿನೇಷನ್​ ಹೊಂದಿದೆ ಎಂದ ಅಫ್ರಿದಿ
Shahid Afridi : ಇಂದು ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವ ಟೀಮ್​ ಇಂಡಿಯಾ ಒಂದು ಹಂತದಲ್ಲಿ ಟೂರ್ನಿಯಿಂದಲೇ ಹೊರಬೀಳವ ಆತಂಕ ಎದುರಿಸಿತ್ತು. ಸೂಪರ್​ 8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿದ ಬಳಿಕ ಟೀಮ್​ ಇಂಡಿಯಾದ ವಿಶ್ವಕಪ್​ ಹಾದಿ ತುಂಬಾ ಕಠಿಣವಾಗಿತ್ತು. ಆದರೆ, ಸರಿಯಾದ ಸಮಯದಲ್ಲಿ​ ಸಂಜು ಸ್ಯಾಮ್ಸನ್​ ಅವರ ಬ್ಯಾಟಿಂಗ್​ ಮತ್ತು ಜಸ್​ಪ್ರೀತ್​ ಬುಮ್ರಾರ ಅದ್ಭುತ ಬೌಲಿಂಗ್​ ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲುವಲ್ಲಿ ಸಹಕಾರಿಯಾಯಿತು.
ನ್ಯೂಜಿಲೆಂಡ್​ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬರಿದ ಸಂಜು ಕೇವಲ 42 ಎಸೆತಗಳಲ್ಲಿ 89 ರನ್​ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇದರಿಂದಾಗಿಯೇ ಭಾರತ ನಿಗದಿತ 20 ಓವರ್​ಗಳಲ್ಲಿ 255 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು. ಅದೇ ರೀತಿ ಬುಮ್ರಾ ಅವರು ಕೇವಲ 15 ರನ್​ಗೆ ನಾಲ್ಕು ಪ್ರಮುಖ ವಿಕೆಟ್​ಗಳನ್ನು ಕಬಳಿಸಿದರು. ಈ ಮೂಲಕ ಟೀಮ್​ ಇಂಡಿಯಾ ಮೂರನೇ ಬಾರಿಗೆ ಪ್ರತಿಷ್ಠಿತ ಟಿ20 ವಿಶ್ವಕಪ್​ ಅನ್ನು ಗೆದ್ದುಕೊಂಡಿತು. 
ತಾಜಾ ಸಂಗತಿ ಏನೆಂದರೆ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್​ ಅಫ್ರಿದಿ, ಟೀಮ್​ ಇಂಡಿಯಾದ ಗೆಲುವಿಗೆ ಕಾರಣ ಏನು ಅನ್ನೋದನ್ನು ತಿಳಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಅಫ್ರಿದಿ, ಪ್ರಸ್ತುತ ವಿಶ್ವಕಪ್​ ಮುಗಿದಿದೆ. ನನ್ನ ಪ್ರಕಾರ ಈ ಪ್ರಶಸ್ತಿಗೆ ಭಾರತ ಅರ್ಹ. ಅದು ಶ್ರೇಷ್ಠವಾದ ಟೀಮ್​ ಕಾಂಬಿನೇಷನ್​ ಹೊಂದಿದೆ. ಬೆಂಚ್​ ಕಾಯುವ ಆಟಗಾರರು ಕೂಡ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಾಗ ಉತ್ತಮ ಆಟವಾಡುತ್ತಿದ್ದಾರೆ. ಅದಕ್ಕಗಿಯೇ ನಾನು ಯಾವಾಗಲೂ ನಿಮ್ಮ ಬೆಂಚ್​ ಬಲವಾಗಿರಬೇಕೆಂದು ಹೇಳುತ್ತೇನೆ. ಅದೇ ರೀತಿ ಇಂಡಿಯಾ ಬೆಂಚ್​ ಬಲವಾಗಿದೆ. ಆ ಬೆಂಚ್​ನಿಂದ ಅವರು ಯಾರನ್ನು ಬೇಕಾದರೂ ಹನ್ನೊಂದರ ಬಳಗಕ್ಕೆ ತೆಗೆದುಕೊಳ್ಳಬಹುದು. ಅವರು ಇಡೀ ಟೂರ್ನಮೆಂಟ್​ ಅನ್ನು ಚಾಂಪಿಯನ್ಸ್​ ರೀತಿಯಲ್ಲೇ ಆಡಿದರು ಎಂದು ಅಫ್ರಿದಿ ಹೊಗಳಿದರು.
ಸಂಜು ಸ್ಯಾಮ್ಸನ್ ಅವರು​ ಅದ್ಭುತ ಪ್ರದರ್ಶನ ನೀಡಿದರು. ಸಾಕಷ್ಟು ವಿರಾಮದ ಬಳಿಕ ಒಂದು ಅವಕಾಶ ಪಡೆದ ಸಂಜು, ತನ್ನ ಸೂಕ್ಷ್ಮ ಹೊಡೆತಗಳು ಮತ್ತು ಇನ್ನಿಂಗ್ಸ್​ ಬೆಳೆಸುವ ತನ್ನ ಸಾಮರ್ಥ್ಯದಿಂದಲೇ ಸೊಗಸಾಗಿ ಬ್ಯಾಟ್​ ಬೀಸಿದರು. ಅದೇ ರೀತಿ, ಅಭಿಷೇಕ್​ ಶರ್ಮಾ ಫೈನಲ್​ನಲ್ಲಿ ಉತ್ತಮ ಆಟವಾಡಿದರು. ಮತ್ತೊಬ್ಬ ಯುವ ಆಟಗಾರ ಇಶಾನ್​ ಕಿಶನ್, ಪಾಕಿಸ್ತಾನದ ವಿರುದ್ಧ ಆಡಿದಂತೆಯೇ ಭರ್ಜರಿ ಪ್ರದರ್ಶನ ನೀಡಿದರು​. ಬುಮ್ರಾ ಅವರು ಟೀಮ್​ ಇಂಡಿಯಾದ ಬೆನ್ನಲುಬು. ತನ್ನ ಗಮನಾರ್ಹ ಪ್ರದರ್ಶನದಿಂದ ದೀರ್ಘಕಾಲದಿಂದ ಭಾರತವನ್ನು ತನ್ನ ಬೆನ್ನ ಮೇಲೆ ಹೊತ್ತು ಸಾಗುತ್ತಿದ್ದಾರೆ. ಹೊಸ ಚೆಂಡಾಗಿರಲಿ, ಹಳೆಯ ಚೆಂಡಾಗಿರಲಿ, ಸ್ಲೋವರ್​ ಬೌಲಿಂಗ್​ ಆಗಿರಲಿ ಅಥವಾ ಯಾರ್ಕರ್ ಆಗಿರಲಿ, ನನ್ನ ಅಭಿಪ್ರಾಯದಲ್ಲಿ ಬುಮ್ರಾ ಅವರು ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎಂದು ಅಫ್ರಿದಿ ಕೊಂಡಾಡಿದ್ದಾರೆ. 
ಇದೇ ಸಂದರ್ಭದಲ್ಲಿ ಭಾರತದ ಆಟಗಾರರು ಒತ್ತಡದಲ್ಲಿ ಪ್ರದರ್ಶನ ನೀಡಲು ಒಗ್ಗಿಕೊಂಡಿರುವುದರಿಂದ ಭಾರತದ ಗೆಲುವು ಅಚ್ಚರಿಯೆನಿಸಲಿಲ್ಲ ಎಂದು ಮಾಜಿ ನಾಯಕ ರಶೀದ್ ಲತೀಫ್ ಹೇಳಿದ್ದಾರೆ. ನೀವು ನಿಯಮಿತವಾಗಿ ದೊಡ್ಡ ಈವೆಂಟ್‌ಗಳ ಫೈನಲ್‌ಗಳನ್ನು ತಲುಪಿದಾಗ ಆಟಗಾರರು ಸಹ ಗೆಲ್ಲಲು ಒಗ್ಗಿಕೊಳ್ಳುತ್ತಾರೆ ಎಂದು ಲತೀಫ್​ ಹೇಳಿದರು.
ಆಗಾಗ ಪಾಕಿಸ್ತಾನ ತಂಡದಲ್ಲಿ ನಡೆಯುವ ಬದಲಾವಣೆಗಳು ಮತ್ತು ತಂಡದಲ್ಲಿನ ಅಸಹನೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಆದರೆ, ಇದಕ್ಕೆ ಭಿನ್ನವಾಗಿ ಭಾರತೀಯ ಕ್ರಿಕೆಟ್ ಇದೆ. ಆ ತಂಡದ ಯಶಸ್ಸಿಗೆ ಅದರಲ್ಲಿರುವ ನಿರಂತರತೆ ಮತ್ತು ಸ್ಥಿರತೆಯೇ ಪ್ರಮುಖ ಕಾರಣಗಳಾಗಿವೆ ಎಂದು ಲತೀಫ್​ ಅವರು ತಿಳಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net