ಭಾರತ ವಿರುದ್ಧ ಆಡ್ಬೇಕಾ? ಹಾಗಾದ್ರೆ ಈ 3 ಕಂಡೀಷನ್​ಗೆ ಒಪ್ಪಿಕೊಳ್ಳಿ... ಐಸಿಸಿ ಮುಂದೆ ಪಾಕ್ ಹೈಡ್ರಾಮ​! Pak Demand ICC

ಭಾರತದ ವಿರುದ್ಧ ಮೂರು ಕಂಡೀಷನ್​ ಹಾಕಿದ ಪಾಕಿಸ್ತಾನ
ಭಾರತದ ವಿರುದ್ಧ ಮೂರು ಕಂಡೀಷನ್​ ಹಾಕಿದ ಪಾಕಿಸ್ತಾನ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಆಡಲ್ಲ ಎಂದಿರುವ ಪಾಕಿಸ್ತಾನ
  • ಐಸಿಸಿ ಖಡಕ್​ ಎಚ್ಚರಿಕೆಯ ಬೆನ್ನಲ್ಲೇ ಮೆತ್ತಗಾದ ಪಾಕ್​ನಿಂದ ಮತ್ತೊಂದು ಖ್ಯಾತೆ
  • ಭಾರತದ ವಿರುದ್ಧ ಆಡಬೇಕಾದರೆ ಮೂರು ಷರತ್ತುಗಳನ್ನು ಪೂರೈಸುವಂತೆ ಪಾಕ್​ ಆಗ್ರಹ
Pak Demand ICC : ಫೆಬ್ರವರಿ 7ರಿಂದ ಟಿ20 ವಿಶ್ವಕಪ್ ಆರಂಭವಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ.​ ಈ ಟೂರ್ನಿಯ ಆರಂಭಕ್ಕೂ ಮುನ್ನ ಮತ್ತು ಆರಂಭದ ನಂತರವೂ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಇನ್ನಿಲ್ಲದ ಡ್ರಾಮ ಮಾಡುತ್ತಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕ್​, ಐಸಿಸಿ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಟಿ20 ವಿಶ್ವಕಪ್ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿತು. ಐಸಿಸಿ ಮತ್ತು ಭಾರತ, ಬಾಂಗ್ಲಾದೇಶವನ್ನು ಕೆಟ್ಟದಾಗಿ ನಡೆಸಿಕೊಂಡಿರುವುದನ್ನು ಉಲ್ಲೇಖಿಸಿ ಪಾಕಿಸ್ತಾನ ಬಹಿಷ್ಕಾರದ ಬೆದರಿಕೆ ಹಾಕಿತು. ಇದಾದ ನಂತರ, ಪಾಕಿಸ್ತಾನ ಪಂದ್ಯಾವಳಿಯನ್ನು ಆಡಲು ಸೈಲೆಂಟ್​ ಆಗಿ ಕೊಲಂಬೊಗೆ ಬಂದಿತು. ಐಸಿಸಿಯಿಂದ ಬ್ಯಾನ್ ಆಗುವ ಭೀತಿಯಿಂದಾಗಿ ಬಹಿಷ್ಕಾರದ ಬೆದರಿಕೆಯಿಂದ ಹಿಂದೇಟು ಹಾಕಿತು. ಈ ಮೂಲಕ ವಿಶ್ವ ಕ್ರಿಕೆಟ್​ ಜಗತ್ತಿನ ಎದುರು ಪಾಕ್​ ಮುಖಭಂಗ ಅನುಭವಿಸಿತು.
ಆದರೆ, ಪಾಕಿಸ್ತಾನ​ ತನ್ನ ವರಸೆಯನ್ನು ಇಷ್ಟಕ್ಕೆ ನಿಲ್ಲಿಸಲಿಲ್ಲ. ಫೆಬ್ರವರಿ 15 ರಂದು ಭಾರತದ ವಿರುದ್ಧ ನಡೆಯಬೇಕಿರುವ ಹೈವೋಲ್ಟೇಜ್​ ಪಂದ್ಯವನ್ನು ಆಡದೆ ಹೊಸ ನಾಟಕವನ್ನು ಈಗಾಗಲೇ ಆರಂಭಿಸಿದೆ. ಭಾರತ ವಿರುದ್ಧ ಆಡುವುದಿಲ್ಲ ಎಂದು ಪಾಕ್​ ಹೇಳುತ್ತಿದೆ. ಆದಾಗ್ಯೂ, ಐಸಿಸಿ ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕ್​ ಕೊಂಚ ಮೆತ್ತಗಾಗಿದೆ. ಇದರ ನಡುವೆ, ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಇತ್ತೀಚೆಗಷ್ಟೇ ಐಸಿಸಿಯ ಮುಂದೆ ಮೂರು ಷರತ್ತುಗಳನ್ನು ಇಟ್ಟಿದೆ ಎಂಬ ವರದಿ ಇದೆ.
ಫೆಬ್ರವರಿ 15 ರಂದು ಭಾರತ ವಿರುದ್ಧದ ಪಂದ್ಯವನ್ನು ಆಡಲು ಪಾಕಿಸ್ತಾನ ಮೂರು ಷರತ್ತುಗಳನ್ನು ವಿಧಿಸಿದೆ. ಇವುಗಳಲ್ಲಿ ಮೊದಲನೆಯದು, ಟಿ20 ವಿಶ್ವಕಪ್ 2026ರ ಟೂರ್ನಮೆಂಟ್‌ನ ಭಾಗವಾಗಿ ಎಲ್ಲ ತಂಡಗಳಿಗಿಂತ ಹೆಚ್ಚಿನ ಆದಾಯದ ಪಾಲನ್ನು ತಮಗೆ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಕೇಳಿದೆ.
ಎರಡನೇಯದಾಗಿ ಭಾರತದೊಂದಿಗೆ ಪಂದ್ಯ ನಡೆದರೆ, ಕಡ್ಡಾಯವಾಗಿ ಹ್ಯಾಂಡ್‌ಶೇಕ್ ಇರಬೇಕು ಎಂದಿದೆ. ಈ ಹಿಂದೆ, ಏಷ್ಯಾ ಕಪ್ 2025ರ ಟೂರ್ನಮೆಂಟ್ ಸಮಯದಲ್ಲಿ, ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡುತ್ತಿರಲಿಲ್ಲ. ಅಂತಹ ದೃಶ್ಯಗಳು ಈಗ ಪುನರಾವರ್ತನೆಯಾಗಬಾರದು ಎಂದಿದೆ.
ಮೂರನೆಯದು ತುಂಬಾ ವಿಚಿತ್ರವಾಗಿದೆ. ಅದೇನೆಂದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ವಾತಾವರಣ ಯಾವಾಗಲೂ ಇದ್ದೇ ಇರುತ್ತದೆ. ಅದನ್ನು ಬದಿಗಿಟ್ಟು, ದ್ವಿಪಕ್ಷೀಯ ಸರಣಿ ನಡೆಸಲು ಬಿಸಿಸಿಐ ಅನ್ನು ಮನವೊಲಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಬಳಿ ಬೇಡಿಕೆ ಇಟ್ಟಿದೆ.
ಈ ಮೂರು ಷರತ್ತುಗಳನ್ನು ಪೂರೈಸಿದರೆ, ಫೆಬ್ರವರಿ 15 ರಂದು ಭಾರತ ವಿರುದ್ಧ ಪಂದ್ಯವನ್ನು ಆಡುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಹಿರಂಗಪಡಿಸಿದೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ, ಐಸಿಸಿ ಮುಂದೆ ಮೂರು ಷರತ್ತುಗಳನ್ನು ಇಟ್ಟಿರುವ ಪಾಕಿಸ್ತಾನಕ್ಕೆ ಶಾಕ್ ನೀಡಲು ಬಿಸಿಸಿಐ ಸಜ್ಜಾಗಿದೆ. ಪಾಕಿಸ್ತಾನಿ ಆಟಗಾರರೊಂದಿಗೆ ಯಾವುದೇ ಕಾರಣಕ್ಕೂ ಕೈಕುಲುಕುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅಲ್ಲದೆ, ಪಾಕಿಸ್ತಾನದಂತಹ ಭಯೋತ್ಪಾದಕ ದೇಶದಲ್ಲಿ ತನ್ನ ತಂಡವನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಐಸಿಸಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net