ವಿಜಯ್​ ಹಜಾರೆ ಟ್ರೋಫಿ: ದೇವದತ್​ ಪಡಿಕ್ಕಲ್​ 4ನೇ ಶತಕದಬ್ಬರ, ಕರ್ನಾಟಕಕ್ಕೆ ಸತತ 5ನೇ ಜಯ

ದೇವದತ್​ ಪಡಿಕ್ಕಲ್​ 4ನೇ ಶತಕದಬ್ಬರ, ಕರ್ನಾಟಕಕ್ಕೆ ಸತತ 5ನೇ ಜಯ
ದೇವದತ್​ ಪಡಿಕ್ಕಲ್​ 4ನೇ ಶತಕದಬ್ಬರ, ಕರ್ನಾಟಕಕ್ಕೆ ಸತತ 5ನೇ ಜಯ
Published on
ಅಹಮದಾಬಾದ್​: ಎಡಗೈ ಆರಂಭಿಕ ದೇವದತ್​ ಪಡಿಕ್ಕಲ್​ (108 ರನ್​, 120 ಎಸೆತ, 8 ಬೌಂಡರಿ, 3 ಸಿಕ್ಸರ್​) ಟೂರ್ನಿಯ 5 ಪಂದ್ಯಗಳಲ್ಲಿ ಸಿಡಿಸಿದ 4ನೇ ಶತಕದ ಬಲದಿಂದ ಹಾಲಿ ಚಾಂಪಿಯನ್​ ಕರ್ನಾಟಕ (Karnataka) ತಂಡ ವಿಜಯ್​ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಸತತ 5ನೇ ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಮಯಾಂಕ್​ ಅಗರ್ವಾಲ್​ ಪಡೆ ತ್ರಿಪುರ ವಿರುದ್ಧ 80 ರನ್​ಗಳಿಂದ ಸುಲಭ ಗೆಲುವು ದಾಖಲಿಸಿತು. ಇದರೊಂದಿಗೆ ಕರ್ನಾಟಕ ತಂಡ ಒಟ್ಟು 20 ಅಂಕ ಗಳಿಸಿ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ನಾಕೌಟ್​ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪುದುಚೇರಿ ಎದುರು ಆಘಾತ ಎದುರಿಸಿದ ಮಧ್ಯಪ್ರದೇಶ (16) 2ನೇ ಸ್ಥಾನಕ್ಕಿಳಿದಿದೆ.
ನಮೋ ಸ್ಟೇಡಿಯಂನಲ್ಲಿ ನಡೆದ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ, ಆರಂಭಿಕ ಆಘಾತ ಎದುರಿಸಿತು. ನಾಯಕ ಮಯಾಂಕ್​ ಅಗರ್ವಾಲ್​ (5) ಮತ್ತು ಕರುಣ್​ ನಾಯರ್​ (0) ಬೇಗನೆ ಔಟಾದರು. ಬಳಿಕ ಪಡಿಕ್ಕಲ್ (Devdutt Padikkal)​ ಶತಕದಾಟ ಮತ್ತು ಆರ್​. ಸ್ಮರಣ್​ (60 ರನ್​, 82 ಎಸೆತ, 8 ಬೌಂಡರಿ) ಮತ್ತು ಅಭಿನವ್​ ಮನೋಹರ್​ (79*ರನ್​, 43 ಎಸೆತ, 6 ಬೌಂಡರಿ, 4 ಸಿಕ್ಸರ್​) ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ 7 ವಿಕೆಟ್​ಗೆ 332 ರನ್​ ಕಲೆಹಾಕಿತು. ಪ್ರತಿಯಾಗಿ ಶ್ರೇಯಸ್​ ಗೋಪಾಲ್​ (33ಕ್ಕೆ 3) ಮತ್ತು ವೈಶಾಕ್​ ವಿಜಯ್​ಕುಮಾರ್​ (54ಕ್ಕೆ 3) ದಾಳಿಗೆ ನಲುಗಿದ ತ್ರಿಪುರ, ಸ್ವಪ್ನಿಲ್​ ಸಿಂಗ್​ (100 ರನ್​, 93 ಎಸೆತ, 7 ಬೌಂಡರಿ, 2 ಸಿಕ್ಸರ್​) ಶತಕದ ಪ್ರತಿರೋಧದ ನಡುವೆಯೂ 49 ಓವರ್​ಗಳಲ್ಲಿ 252 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು. 

ಕರ್ನಾಟಕ: 7 ವಿಕೆಟ್​ಗೆ 332 (ಮಯಾಂಕ್​ 5, ಪಡಿಕ್ಕಲ್​ 108, ಕರುಣ್​ 0, ಸ್ಮರಣ್​ 60, ರಾಹುಲ್​ 35, ಅಭಿನವ್​ 79*, ವಿದ್ಯಾಧರ್​ 1, ಶ್ರೇಯಸ್​ 29, ಅಭಿಜಿತ್​ ಸರ್ಕಾರ್​ 50ಕ್ಕೆ 4), ತ್ರಿಪುರ: 49 ಓವರ್​ಗಳಲ್ಲಿ 252 (ತೇಜಸ್ವಿ ಜೈಸ್ವಾಲ್​ 25, ವಿಜಯ್​ ಶಂಕರ್​ 1, ರಜತ್​ ಡೇ 66, ಸ್ವಪ್ನಿಲ್​ ಸಿಂಗ್​ 100, ಶ್ರೇಯಸ್​ 33ಕ್ಕೆ 3, ವೈಶಾಕ್​ 54ಕ್ಕೆ 3, ಪ್ರಸಿದ್ಧಕೃಷ್ಣ 47ಕ್ಕೆ 1, ವಿದ್ಯಾಧರ್​ 44ಕ್ಕೆ 1, ಶ್ರೀಶ 38ಕ್ಕೆ 1). ಪಂದ್ಯಶ್ರೇಷ್ಠ: ದೇವದತ್​ ಪಡಿಕ್ಕಲ್​.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಯಾವಾಗ: ಮಂಗಳವಾರ
ಎದುರಾಳಿ: ರಾಜಸ್ಥಾನ
ಆರಂಭ: ಬೆಳಗ್ಗೆ 9.00
ಎಲ್ಲಿ: ಅಹಮದಾಬಾದ್​
ಪಡಿಕ್ಕಲ್​ ರನ್​ಬೇಟೆ
25 ವರ್ಷದ ದೇವದತ್​ ಪಡಿಕ್ಕಲ್​ ಹಾಲಿ ಋತುವಿನ ಭರ್ಜರಿ ಫಾರ್ಮ್​ ಮುಂದುವರಿಸಿದ್ದು, ವಿಜಯ್​ ಹಜಾರೆ ಟ್ರೋಫಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಶತಕ ಸಿಡಿಸುವ ಮೂಲಕ ಒಟ್ಟಾರೆ 514 ರನ್​ ಕಲೆಹಾಕಿದ್ದಾರೆ. ಈ ಮೂಲಕ ಟೂರ್ನಿಯ ಗರಿಷ್ಠ ಸ್ಕೋರರ್​ ಪಟ್ಟ ಕಾಯ್ದುಕೊಂಡಿದ್ದಾರೆ. 38 ಲಿಸ್ಟ್​ ಎ ಪಂದ್ಯಗಳಲ್ಲಿ ಇದು ಅವರ 13ನೇ ಶತಕವಾಗಿದೆ. ಜತೆಗೆ 12 ಅರ್ಧಶತಕ ಗಳಿಸಿದ್ದಾರೆ. ಆದರೂ ಮುಂಬರುವ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಅವರಿಗೆ ಸ್ಥಾನ ಲಭಿಸದೆ ನಿರಾಸೆ ಅನುಭವಿಸಿದರು. 
*8: ಕರುಣ್​ ನಾಯರ್​ ದೇಶೀಯ ಏಕದಿನ ಟೂರ್ನಿಯಲ್ಲಿ 8ನೇ ಬಾರಿ ಸೊನ್ನೆ ಸುತ್ತಿದರು. ಇದರೊಂದಿಗೆ ಕರ್ನಾಟಕ ಪರ ಏಕದಿನದಲ್ಲಿ ಗರಿಷ್ಠ ಶೂನ್ಯ ಗಳಿಸಿದ ಕೆ.ಗೌತಮ್​(7) ಅನಪೇಕ್ಷಿತ ದಾಖಲೆ ಮುರಿದರು.
ಕೆಎಲ್​ ರಾಹುಲ್​ ಕಣಕ್ಕೆ
ವಿಜಯ್​ ಹಜಾರೆ ಟ್ರೋಫಿಯಲ್ಲಿ ಕಡ್ಡಾಯವಾಗಿ 2 ಪಂದ್ಯ ಆಡಬೇಕೆಂಬ ಬಿಸಿಸಿಐ ಸೂಚನೆಯನ್ವಯ, ಟೀಮ್​ ಇಂಡಿಯಾ ಬ್ಯಾಟರ್​ ಕೆಎಲ್​ ರಾಹುಲ್​ ಕರ್ನಾಟಕ ಪರ ಮೊದಲ ಪಂದ್ಯವಾಡಿದರು. ವಿಕೆಟ್​ ಕೀಪಿಂಗ್​ ಜತೆಗೆ 5ನೇ ಕ್ರಮಾಂಕದ ಬ್ಯಾಟರ್​ ಆಗಿ ಆಡಿದ ಅವರು, 28 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಿತ 35 ರನ್​ ಗಳಿಸಿ ಔಟಾದರು. ಭಾರತ ಏಕದಿನ ತಂಡ ಸೇರಿಕೊಳ್ಳುವ ಮುನ್ನ ರಾಜಸ್ಥಾನ ವಿರುದ್ಧ ಮುಂದಿನ ಪಂದ್ಯದಲ್ಲೂ ಅವರು ಆಡುವ ನಿರೀೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net