ಫಿಕ್ಸರ್​ಗಳು ಮಾತ್ರ ಐಪಿಎಲ್​... ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಪಾಕ್​ ಕ್ರಿಕೆಟಿಗ ಮೊಹಮ್ಮದ್​ ಅಮೀರ್​

ಪಾಕ್​ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಅಮೀರ್
ಪಾಕ್​ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಅಮೀರ್
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ ಶುರುವಿನ ಬೆನ್ನಲ್ಲೇ ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಪಾಕ್​ ಮಾಜಿ ಕ್ರಿಕೆಟಿಗ
  • ಐಪಿಎಲ್​ ಸಮಯದಲ್ಲೇ ಪಿಎಸ್​ಎಲ್​ ಶುರುವಾದ ಕಾರಣ ಅಪಪ್ರಚಾರಕ್ಕೆ ರೆಡಿ
  • ಫಿಕ್ಸರ್​ಗಳು ಮಾತ್ರ ಐಪಿಎಲ್​ ನೋಡುವುದು ಎಂದು ಹೇಳಿದ ಅಮೀರ್​
IPL 2026: ಇಂದಿನಿಂದ (ಮಾ.28) ಐಪಿಎಲ್​ 19ನೇ ಆವೃತ್ತಿ ಶುರುವಾಗಲಿದ್ದು, ಮೊದಲ ಪಂದ್ಯವೇ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವೆ ನಡೆಯಲಿದೆ. ಇವತ್ತಿನಿಂದ ಎರಡು ತಿಂಗಳ ಕಾಲ ಭರಪೂರ ಮನರಂಜನೆ ನೀಡಲಿರುವ ಐಪಿಎಲ್​ ನೋಡಲು ಕ್ರಿಕೆಟ್​ ಪ್ರಿಯರು ಭಾರೀ ಉತ್ಸುಕರಾಗಿದ್ದಾರೆ.
ಮತ್ತೊಂದೆಡೆ, ಐಪಿಎಲ್​ಗೆ ಟಕ್ಕರ್​ ಕೊಡಲೆಂದೇ ಶುರು ಮಾಡಿದ ಪಾಕಿಸ್ತಾನ ಸೂಪರ್​ ಲೀಗ್ ಸ್ಥಿತಿ ಈಗ ಅದೋ ಗತಿ ಎನ್ನುವಂತಾಗಿದೆ. ಭಾರತೀಯ ಕ್ರಿಕೆಟ್​ ಹಾಗೂ ಕ್ರಿಕೆಟಿಗರ ವಿರುದ್ಧ ಪ್ರತಿಬಾರಿ ಉರಿದುಬೀಳುತ್ತಿದ್ದ ಪಾಕ್​ ಕ್ರಿಕೆಟ್​ ಮಂಡಳಿಗೆ ಇದೀಗ ಭಾರೀ ಮುಖಭಂಗವೇ ಉಂಟಾಗಿದೆ. ಐಪಿಎಲ್​ಗೆ ಪೈಪೋಟಿ ಇರಲಿ, ಅದರ ಅರ್ಧದಷ್ಟು ಇಲ್ಲದ ಪಿಎಸ್​ಎಲ್​, ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ಲೀಗ್​ ನಡೆಸುತ್ತಿದ್ದು, ಅಭಿಮಾನಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ತಮ್ಮದೇ ಬುಡ ಸರಿ ಇಲ್ಲದಿದ್ದಾಗ, ಸಿಕ್ಕಾಪಟ್ಟೆ ಕ್ರೇಜ್​ ತುಂಬಿರುವ ಐಪಿಎಲ್​ ಬಗ್ಗೆ ಇದೀಗ ಪಾಕ್​ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಅಮೀರ್ ನಾಲಿಗೆ ಹರಿಬಿಟ್ಟಿದ್ದಾರೆ.
ಈ ಹಿಂದೆ ಭಾರತ ಟಿ20 ವಿಶ್ವಕಪ್​ ಸೆಮಿಫೈನಲ್​ಗೆ ಹೋಗಲ್ಲ, ಫೈನಲ್​ ಪ್ರವೇಶಿಸುವುದಿಲ್ಲ ಎಂದಿದ್ದ ಇದೇ ಅಮೀರ್​, ಟೀಮ್ ಇಂಡಿಯಾ ಚಾಂಪಿಯನ್ಸ್ ಪಟ್ಟ ಅಲಂಕರಿಸುತ್ತಿದ್ದಂತೆ ಮುಖ ಮುಚ್ಚಿಕೊಂಡಿದ್ದರು. ಈಗ ಐಪಿಎಲ್​ ಸಮಯಕ್ಕೆ ಪಿಎಸ್​ಎಲ್​ ಶುರು ಮಾಡಿರುವ ಹಿನ್ನೆಲೆ ತಮಗೆ ಹೆಚ್ಚಿನ ಮೈಲೇಜ್​ ಸಿಗಬೇಕು ಎಂಬ ಕಾರಣಕ್ಕೆ, ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಐಪಿಎಲ್ ಟೂರ್ನಿಯ ಮೂಲಕ ಆಟಗಾರರು ಕೋಟಿಗಟ್ಟಲೆ ಹಣ ಗಳಿಸುತ್ತಿದ್ದಾರೆ. ಇದರ ಹಿಂದೆ ಮ್ಯಾಚ್ ಫಿಕ್ಸಿಂಗ್ ಪಿತೂರಿ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ, ಆಟಗಾರರನ್ನು ಮಾತ್ರವಲ್ಲದೆ ಅಂಪೈರ್‌ಗಳನ್ನು ಸಹ ಹಣಕ್ಕಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಫಿಕ್ಸರ್‌ಗಳು ಮಾತ್ರ ಈ ಮ್ಯಾಚ್ ಫಿಕ್ಸಿಂಗ್ ಲೀಗ್​ ಅನ್ನು ನೋಡುವುದು. ಈ ಟೂರ್ನಿಯಲ್ಲಿ ಫಿಕ್ಸಿಂಗ್ ನಡೆಯುತ್ತದೆ ಎಂಬ ಸಂಗತಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೂ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net