ಧೋನಿಗೆ ಲಕ್ಕಿ ನಂ.7 ಅನ್ನೋದು ಮತ್ತೆ ಸಾಬೀತಾಯ್ತು.. ನಿನ್ನೆ ಇಡೀ ಪಂದ್ಯವನ್ನು ಆವರಿಸಿದ್ದು ಏಳನೇ ಸಂಖ್ಯೆ! MS Dhoni

ಧೋನಿಗೆ ಲಕ್ಕಿ ನಂ.7 ಅನ್ನೋದು ಮತ್ತೆ ಸಾಬೀತಾಯ್ತು.. ನಿನ್ನೆ ಇಡೀ ಪಂದ್ಯವನ್ನು ಆವರಿಸಿದ್ದು ಏಳನೇ ಸಂಖ್ಯೆ! MS Dhoni
ಧೋನಿಗೆ ಲಕ್ಕಿ ನಂ.7 ಅನ್ನೋದು ಮತ್ತೆ ಸಾಬೀತಾಯ್ತು.. ನಿನ್ನೆ ಇಡೀ ಪಂದ್ಯವನ್ನು ಆವರಿಸಿದ್ದು ಏಳನೇ ಸಂಖ್ಯೆ! MS Dhoni
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ
  • ಮಾರ್ಚ್ 8 ರಂದು ನಡೆಯಲಿರುವ ಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ
  • ನಿನ್ನೆ ಪಂದ್ಯದ ಆರಂಭದಿಂದ ಹಿಡಿದು ಪಂದ್ಯದ ಅಂತ್ಯದರೆಗೂ 7ನೇ ನಂಬರ್​ ಪ್ರಾಬಲ್ಯ ಸಾಧಿಸಿತು
MS Dhoni : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಹಾಲಿ ಚಾಂಪಿಯನ್ಸ್​ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಇನ್ನೊಂದು ಹೆಜ್ಜೆ ಬಾಕಿ ಇದೆ. ಗುರುವಾರ (ಮಾರ್ಚ್​ 05) ರಾತ್ರಿ ಇಂಗ್ಲೆಂಡ್ ತಂಡದ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿತು. ಕೇವಲ ಏಳು ರನ್‌ಗಳ ಅಂತರದಿಂದ ಗೆದ್ದು ಫೈನಲ್‌ ಪ್ರವೇಶಿಸಿದರು. ಮಾರ್ಚ್ 8 ರಂದು ನಡೆಯಲಿರುವ ಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಅಂದಹಾಗೆ, ನಿನ್ನೆಯ ಪಂದ್ಯದಲ್ಲಿ ವಿಶೇಷ ಗಮನ ಸೆಳೆದಿದ್ದು 7ನೇ ಸಂಖ್ಯೆ. ಹೇಳಬೇಕೆಂದರೆ, ಇಡೀ ಪಂದ್ಯವನ್ನು ಆವರಿಸಿದ್ದು, ಇದೇ 7ನೇ ನಂಬರ್. ಪಂದ್ಯದ ಆರಂಭದಿಂದ ಹಿಡಿದು ಪಂದ್ಯದ ಅಂತ್ಯದರೆಗೂ 7ನೇ ನಂಬರ್​ ಪ್ರಾಬಲ್ಯ ಸಾಧಿಸಿತು. ಅದು ಹೇಗೆ ಅಂತೀರಾ? ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ತಿಳಿಯುವ ಬಯಕೆ ಇದ್ದರೆ ಮುಂದೆ ಓದಿ.
ನಿಮಗೆ ಗೊತ್ತು ಕೂಲ್​ ಕ್ಯಾಪ್ಟನ್​ ಖ್ಯಾತಿಯ ಎಂ.ಎಸ್​. ಧೋನಿಯವರ ಲಕ್ಕಿ ನಂಬರ್​ 7 ಅನ್ನೋದು. ಅವರ ಜರ್ಸಿ ನಂಬರ್​ ಕೂಡ ಅದೇ. ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್​ ಪಂದ್ಯವನ್ನು ನೋಡಲು ಧೋನಿ ಅವರು ತಮ್ಮ ಪತ್ನಿಯ ಜತೆ ಆಗಮಿಸಿದ್ದರು. ಇಡೀ ಪಂದ್ಯವನ್ನು ವೀಕ್ಷಿಸಿದರು. ಧೋನಿ ಬಂದಿದ್ದೇ ತಡ, ಇಡೀ ಪಂದ್ಯಕ್ಕೆ 7ರ ನಂಟು ಬೆಸೆದುಕೊಂಡಿತು. ಅದು ಹೇಗೆಂದು ವಿವರಿಸುತ್ತೇನೆ ಮುಂದೆ ಓದಿ.
ನಿನ್ನೆಯ ಪಂದ್ಯ ಶುರುವಾಗಿದ್ದು 7 ಗಂಟೆಗೆ. ಈ ಪಂದ್ಯಲ್ಲಿ ಭಾರತ ಕಳೆದುಕೊಂಡಿದ್ದು 7 ವಿಕೆಟ್​. ಅದೇ ರೀತಿ ಇಂಗ್ಲೆಂಡ್​ ಕೂಡ 7 ವಿಕೆಟ್​ ಕಳೆದುಕೊಂಡಿತು. ಭಾರತದ ಸ್ಫೋಟಕ ಇನ್ನಿಂಗ್ಸ್​ ಆಡಿದ ಸಂಜು ಸ್ಯಾಮ್ಸನ್​ (42 ಎಸೆತ 89 ರನ್​) 7 ಸಿಕ್ಸರ್​ ಬಾರಿಸಿದರು. ಅತ್ತ ಇಂಗ್ಲೆಂಡ್​ ಪರ ಅಮೋಘ ಬ್ಯಾಟಿಂಗ್​ ಪ್ರದರ್ಶನ ನೀಡಿದ ಜಾಕೋಬ್​ ಬೆಥೆಲ್​ ( 48 ಎಸೆತ 105 ರನ್​) ಕೂಡ 7 ಸಿಕ್ಸರ್​ ಬಾರಿಸಿದರು. ಈ 7ರ ನಂಟು ಇಷ್ಟಕ್ಕೆ ನಿಲ್ಲುವುದಿಲ್ಲ, ಅಭಿಷೇಕ್​ ಶರ್ಮಾ 7 ಎಸೆತಗಳನ್ನು ಆಡಿದರು. ಅದೇ ರೀತಿ ತಿಲಕ್​ ವರ್ಮಾ ಕೂಡ 7 ಎಸೆತಗಳನ್ನು ಆಡಿದರು. ಇಂಗ್ಲೆಂಡ್​ ತಂಡದ ನಾಯಕ ಹ್ಯಾರಿ ಬ್ರೂಕ್​ 7 ರನ್​ಗಳಿಗೆ ಔಟಾದರು. ಆರಂಭಿಕ ಆಟಗಾರ ಫಿಲ್​ ಸಾಲ್ಟ್​ ಇನ್ನಿಂಗ್ಸ್​ನ 7ನೇ ಎಸೆತಕ್ಕೆ ಔಟಾದರು. ಅಂತಿಮವಾಗಿ ಟೀಮ್​ ಇಂಡಿಯಾ ಗೆಲುವು ಕಂಡಿದ್ದು ಕೂಡ 7 ರನ್​ಗಳಿಂದ.
ಒಟ್ಟಾರೆಯಾಗಿ ನಿನ್ನೆಯ ಪಂದ್ಯ ಏಳನೇ ನಂಬರ್​ಗಳಿಂದಲೇ ತುಂಬಿತ್ತು. ಎಲ್ಲ ಏಳನೇ ಸಂಖ್ಯೆಯ ಡಾಟ್​ ಕನೆಕ್ಟ್​ ಮಾಡಿದರೆ ಅದು ನೇರವಾಗಿ ಕನೆಕ್ಟ್​ ಆಗೋದು ದಿಗ್ಗಜ ಆಟಗಾರ ಎಂ.ಎಸ್​. ಧೋನಿ ಅವರಿಗೆ. ಅಲ್ಲಿಗೆ, ಎಂ.ಎಸ್​. ಧೋನಿ ಅವರಿಗೆ ನಂಬರ್​ 7 ಲಕ್ಕಿ ಅನ್ನೋದು ಮತ್ತೊಮ್ಮೆ ಸಾಬೀತಾಯ್ತು ಅಂತಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.
ಪಂದ್ಯದ ಹೈಲೈಟ್ಸ್​
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್​, ಭಾರತಕ್ಕೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ (42 ಎಸೆತ 89 ರನ್​) ಇಶಾನ್ ಕಿಶನ್ (39), ​ಶಿವಂ ದುಬೆ (43) ಮತ್ತು ಹಾರ್ದಿಕ್​ ಪಾಂಡ್ಯ (27) ಅವರ ಸ್ಪೋಟಕ ಇನ್ನಿಂಗ್ಸ್​ ತಂಡದ ಮೊತ್ತವನ್ನು 250ರ ಗಡಿದಾಟಿಸಿತು. 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ ಭಾರತ 253 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್​ಗೆ ಆರಂಭದಲ್ಲೇ ಫಿಲ್​ ಸಾಲ್ಟ್​ ಅವರ ವಿಕೆಟ್​ ದೊಡ್ಡ ಸಂಕಷ್ಟಕ್ಕೆ ದೂಡಿತು. ಅವರ ನಂತರದಲ್ಲಿ, ಜಾಸ್​ ಬಟ್ಲರ್​ ಮತ್ತು ನಾಯಕ ಹ್ಯಾರಿ ಬ್ರೂಕ್​ ವಿಕೆಟ್​ಗಳು ಆಂಗ್ಲರಿಗೆ ಸೋಲಿನ ಭೀತಿ ತಂದಿಟ್ಟಿತು. ಇಲ್ಲಿಗೆ ಭಾರತ ಗೆಲ್ಲುವುದು ಬಹುತೇಕ ಖಚಿತ ಎಂದು ಕ್ರಿಕೆಟ್​ ಪ್ರಿಯರು ಖುಷಿಯಾಗಿದ್ದರು. ಆದರೆ, ಟೀಮ್ ಇಂಡಿಯಾ ಅಭಿಮಾನಿಗಳಿಗೆ ಜಾಕೆಬ್​ ಬೆಥಲ್​ ಮತ್ತು ವಿಲ್​ ಜ್ಯಾಕ್ಸ್​ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬಿಗ್​ ಶಾಕ್ ನೀಡಿದರು. ಆದರೆ, ಅಂತಿಮ ಘಟ್ಟದಲ್ಲಿ ಬುಮ್ರಾ ಮತ್ತು ಹಾರ್ದಿಕ್​ ಪಾಂಡ್ಯ ಬೌಲಿಂಗ್ ದಾಳಿ ಆಂಗ್ಲರ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿತು.
ಕೊನೆಯ ಓವರ್​ವರೆಗೂ ಹೋದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದು, ಕ್ರೀಡಾಂಗಣದಲ್ಲಿ ತುಂಬಿದ್ದ ಕ್ರಿಕೆಟ್​ ಪ್ರೇಮಿಗಳು ಮತ್ತು ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಸೇರಿದಂತೆ ಕ್ರಿಕೆಟ್​ ದಿಗ್ಗಜರ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಪಂದ್ಯವನ್ನು ಕೇವಲ 7 ರನ್​ಗಳಿಂದ ಗೆದ್ದ ಭಾರತ ಈಗ ಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಟಿ20 ವಿಶ್ವಕಪ್​​ ಪಟ್ಟಕ್ಕಾಗಿ ಸೆಣಸಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net