ವೈಭವ್ ಸೂರ್ಯವಂಶಿ ಇಲ್ಲ ಅಂದ್ರೆ ಮ್ಯಾಚ್ ನೊಡಲ್ಲ!...ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್ | Vaibhav Sooryavanshi

Vaibhav Sooryavanshi | ವೈಭವ್ ಸೂರ್ಯವಂಶಿ ಇಲ್ಲ ಅಂದ್ರೆ ಮ್ಯಾಚ್ ನೊಡಲ್ಲ!...ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್
Vaibhav Sooryavanshi | ವೈಭವ್ ಸೂರ್ಯವಂಶಿ ಇಲ್ಲ ಅಂದ್ರೆ ಮ್ಯಾಚ್ ನೊಡಲ್ಲ!...ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್
Published on
Vaibhav Sooryavanshi: ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವಂಡರ್ ಕಿಡ್​ ವೈಭವ್ ಸೂರ್ಯವಂಶಿ ಅವರನ್ನು ಮತ್ತೊಮ್ಮೆ ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿರುವುದು ಟೀಮ್ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಡುತ್ತಿದ್ದಂತೆ ತಮ್ಮ ಛಾಪನ್ನು ಮೂಡಿಸಿದ್ದು, ಆಡಿರುವ ಆರು ಇನ್ನಿಂಗ್ಸ್‌ಗಳಲ್ಲಿ 189.21 ರ ಅದ್ಭುತ ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ. 15 ವರ್ಷದ ಈ ಯುವ ಆಟಗಾರ ಜಿಂಬಾಬ್ವೆ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಜಿಂಬಾಬ್ವೆ ಸರಣಿಯಲ್ಲಿ 196.10 ರ ಸ್ಟ್ರೈಕ್ ರೇಟ್‌ನಲ್ಲಿ 151 ರನ್ ಗಳಿಸಿದ್ದ ಸೂರ್ಯವಂಶಿ, ಸರಣಿ ಶ್ರೇಷ್ಠ. ಅಲ್ಲದೆ ಸರಣಿಯ ಅಂತಿಮ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು.
ಪಂದ್ಯದ ಆರಂಭಕ್ಕೂ ಮುನ್ನ ಸೂರ್ಯವಂಶಿ ಫೀಲ್ಡಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಇಂದು ವೈಭವ್ ಆಡಬಹುದೆಂದು ಅಭಿಮಾನಿಗಳು ಭಾವಿಸಿದ್ದರು, ಆದರೆ ಅದು ಸುಳ್ಳಾಗಿದೆ. ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲರಾದ ಸ್ಯಾಮ್ಸನ್ ಕೇವಲ 10 ರನ್‌ಗಳಿಗೆ ಔಟಾಗಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿ 15 ವರ್ಷದ ಯುವ ಆಟಗಾರನನ್ನು ಮತ್ತೆ ತಂಡಕ್ಕೆ ಕರೆತರಲಾಗುತ್ತದೆಯೇ ಎಂಬ ಕುತೂಹಲವಿತ್ತು, ಆದರೆ ಮ್ಯಾನೇಜ್‌ಮೆಂಟ್ ಆ ಸಾಹಸಕ್ಕೆ ಕೈಹಾಕದೆ ಹಿಂದೇಟು ಹಾಕಿತು.
ತಂಡದ ಈ ನಿರ್ಧಾರವು ಟೀಮ್​ ಇಂಡಿಯಾ ಅಭಿಮಾನಿಗಳನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಮತ್ತು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಸೂರ್ಯವಂಶಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಲ್ಲದಿರುವುದರಿಂದ ನಾವು ಪಂದ್ಯವನ್ನು ವೀಕ್ಷಿಸುತ್ತಿಲ್ಲ ಎಂದು ಹಲವು ಬೆಂಬಲಿಗರು ಹೇಳಿದರು. ಕೆಲವರಂತೂ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಇನ್ನು ಕೆಲವರು, ಯುವ ಆಟಗಾರ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶಗಳನ್ನು ನೀಡದಿದ್ದಕ್ಕಾಗಿ ಹೆಡ್​ ಕೋಚ್ ಗೌತಮ್ ಗಂಭೀರ್ ವಿರುದ್ಧ ಕೆಂಡಕಾರುತ್ತಿದ್ದಾರೆ.

ಸೂರ್ಯವಂಶಿಗೆ ಟೀಮ್​ ಇಂಡಿಯಾದಿಂದ ಅನ್ಯಾಯ..?

ಭಾರತ ತಂಡದ ಮಾಜಿ ಆಯ್ಕೆಗಾರ ಕೆ ಶ್ರೀಕಾಂತ್ ಅವರು ಸೂರ್ಯವಂಶಿ ತಮ್ಮ ಮತ್ತು ತಮ್ಮ ಪತ್ನಿಯ ಮೇಲೆ ಬೀರಿದ ಪ್ರಭಾವದ ಬಗ್ಗೆ ಬಹಿರಂಗಪಡಿಸಿದ್ದಾರೆ. ಯುವ ಆಟಗಾರ ಪಂದ್ಯದಲ್ಲಿ ಆಡುತ್ತಿಲ್ಲ ಎಂಬ ವಿಷಯ ತಿಳಿದ ತಕ್ಷಣವೇ ನಾವು ಟಿವಿ ಚಾನೆಲ್ ಬದಲಿಸಿದೆವು ಎಂದು ಶ್ರೀಕಾಂತ್ ಹೇಳಿದ್ದಾರೆ.
ಸೂರ್ಯವಂಶಿ ಆಡುತ್ತಿಲ್ಲ ಎಂದು ತಿಳಿದ ಕ್ಷಣವೇ ನಾವು ಬೇರೆ ಚಾನೆಲ್ ವೀಕ್ಷಿಸಲು ಪ್ರಾರಂಭಿಸಿದೆವು. ನನ್ನ ಪತ್ನಿ ಕೂಡ ನನ್ನ ಬಳಿ, ಸೂರ್ಯವಂಶಿ ಆಡುತ್ತಿಲ್ಲವೇ..? ಇದೇನಿದು..? ಎಂದು ಕೋಪದಿಂದ ಪ್ರಶ್ನಿಸಿದಳು. ಹಿಂದಿನ ಸರಣಿಯಲ್ಲಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ ಮುಂದಿನ ಪಂದ್ಯದಲ್ಲೇ ಆಡಲು ಅವಕಾಶ ನೀಡಿಲ್ಲ ಎಂದರೆ ಹೇಗೆ ಎಂದು ಆಕೆ ಕೇಳುತ್ತಿದ್ದಾಳೆ ಎಂದು ಮೊದಲ ಟಿ20 ಪಂದ್ಯದ ನಂತರ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಸೂರ್ಯವಂಶಿ ಅವರನ್ನು ಭಾರತ ತಂಡದ ಮ್ಯಾನೇಜ್‌ಮೆಂಟ್ ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ ಎಂದು ಆರೋಪಿಸಿರುವ ಶ್ರೀಕಾಂತ್, ಒಂದು ವೇಳೆ ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಿದರೆ, ನಾನು ಈಗ ರನ್ ಗಳಿಸದಿದ್ದರೆ, ಮುಂದಿನ ಪಂದ್ಯದಿಂದ ನನ್ನನ್ನು ಕೈಬಿಡುತ್ತಾರೆಯೇ...? ಎಂಬ ಭಯದಲ್ಲೇ ಅವರು ಬ್ಯಾಟ್ ಮಾಡಬೇಕಾಗುತ್ತದೆ. ಅಲ್ಲಿ ಯಾವುದೇ ಸ್ಪಷ್ಟ ಸಂದೇಶಗಳಿಲ್ಲ ಎಂದು ಶ್ರೀಕಾಂತ್ ಅಸಮಾಧಾನ ಹೊರಹಾಕಿದ್ದಾರೆ.
ಸದ್ಯ ಪಂದ್ಯ ನಡೆಯುತ್ತಿದ್ದು, ಅಫ್ಘಾನಿಸ್ತಾನ ನಿಗದಿತ 20 ಓವರ್​​ಗಳಲ್ಲಿ ಎಂಟು ವಿಕೆಟ್​ ನಷ್ಟಕ್ಕೆ 159 ರನ್​ ಗಳಿಸಿದ್ದಾರೆ. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ಟೀಮ್​ ಇಂಡಿಯಾ 13 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 139 ರನ್ ಬಾರಿಸಿ ಗೆಲುವಿನ ಸನಿಹದಲ್ಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net