ವಿರಾಟ್​ ಕೊಹ್ಲಿ - ಗೌತಮ್​​ ಗಂಭೀರ್ ನಡುವೆ ಮನಸ್ತಾಪ: ಅಚ್ಚರಿ ಹೇಳಿಕೆ ನೀಡಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್! Virat Kohli

ವಿರಾಟ್​ ಕೊಹ್ಲಿ - ಗೌತಮ್​​ ಗಂಭೀರ್ ನಡುವೆ ಮನಸ್ತಾಪ: ಅಚ್ಚರಿ ಹೇಳಿಕೆ ನೀಡಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್! Virat Kohli
ವಿರಾಟ್​ ಕೊಹ್ಲಿ - ಗೌತಮ್​​ ಗಂಭೀರ್ ನಡುವೆ ಮನಸ್ತಾಪ: ಅಚ್ಚರಿ ಹೇಳಿಕೆ ನೀಡಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್! Virat Kohli
Published on

ಪ್ರಮುಖ ಮುಖ್ಯಾಂಶಗಳು

  • ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಭಿನ್ನಾಭಿಪ್ರಾಯ ವದಂತಿಗಳಿಗೆ ಬ್ರೇಕ್ ಹಾಕಿದ ಕೋಚ್
  • ಕೊಹ್ಲಿ ಗಂಭೀರ್ ಮಧ್ಯೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್
  • ಇಬ್ಬರ ನಡುವೆ ಮಾತುಕತೆ ನಡೆಸಲು ಯಾರೂ ಸೇತುವೆಯಾಗುವ ಅಗತ್ಯವಿಲ್ಲ ಎಂದ ಕೋಟಕ್
  • ಕೊಹ್ಲಿ ಗಂಭೀರ್ ಜಗಳದ ವದಂತಿಗಳು ಎಲ್ಲಿಂದ ಹುಟ್ಟಿಕೊಳ್ಳುತ್ತವೆಯೋ ಗೊತ್ತಿಲ್ಲ ಎಂದ ಬ್ಯಾಟಿಂಗ್ ಕೋಚ್
ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ( Virat Kohli ) ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ( Gautam Gambhir ) ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಹೊಸದೇನಲ್ಲ. ಬಹಳ ಹಿಂದಿನಿಂದಲೂ ಈ ವಿಚಾರ ಹೆಚ್ಚು ಚರ್ಚೆಯಾಗುತ್ತಿದ್ದು, ಈಗಲೂ ಆ ವದಂತಿ ಜೀವಂತವಾಗಿದೆ. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ( Sitanshu Kotak ) ತೆರೆ ಎಳೆದಿದ್ದಾರೆ.
ನೀವೆಲ್ಲ ಅಂದುಕೊಂಡ ಹಾಗೇ ಇಬ್ಬರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ, ಅವರಿಬ್ಬರೂ ಸದಾ ಸಂಪರ್ಕದಲ್ಲಿದ್ದಾರೆ ಮತ್ತು ಅವರ ವೃತ್ತಿಪರ ಬಾಂಧವ್ಯ ಅತ್ಯುತ್ತಮವಾಗಿದೆ ಎಂದು ಕೋಟಕ್ ಸ್ಪಷ್ಟಪಡಿಸಿದ್ದಾರೆ. ಅಸಲಿಗೆ ಇಂತಹ ಸುಳ್ಳು ವದಂತಿಗಳು ಎಲ್ಲಿಂದ ಹುಟ್ಟಿಕೊಳ್ಳುತ್ತವೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಕೋಟಕ್​ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗಿನಿಂದಲೂ, ಮುಖ್ಯ ಕೋಚ್ ಗಂಭೀರ್ ಮತ್ತು ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮುನ್ನಾದಿನದಂದು ನಡೆದ ಅಭ್ಯಾಸದ ವೇಳೆಯಲ್ಲಿ ಕೊಹ್ಲಿ ಮತ್ತು ಗಂಭೀರ್ ಪರಸ್ಪರ ಮಾತನಾಡದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕೊಹ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಗಂಭೀರ್ ಅದನ್ನು ಹತ್ತಿರದಿಂದ ಗಮನಿಸುತ್ತಿದ್ದರಾದರೂ, ಇಬ್ಬರ ನಡುವೆ ಯಾವುದೇ ಸಂಭಾಷಣೆ ನಡೆದಿರಲಿಲ್ಲ. ಆ ಸಮಯದಲ್ಲಿ ಬ್ಯಾಟಿಂಗ್ ಕೋಚ್ ಕೋಟಕ್ ಮಾತ್ರ ಕೊಹ್ಲಿ ಜೊತೆ ಮಾತನಾಡುತ್ತಿರುವುದು ಕಂಡುಬಂದಿತ್ತು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಗಾಸಿಪ್‌ಗಳಿಗೆ ಕಾರ್ಡಿಫ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಕೋಟಕ್ ಉತ್ತರ ನೀಡಿದ್ದಾರೆ. ಪಂದ್ಯದ ಅವಧಿಯಲ್ಲಿ ಕೊಹ್ಲಿ ಮತ್ತು ಗಂಭೀರ್ ಕನಿಷ್ಠ 10 ಬಾರಿಯಾದರೂ ಪರಸ್ಪರ ಮಾತನಾಡಿದ್ದಾರೆ ಎಂದು ಕೋಟಕ್​ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಅವರಿಬ್ಬರ ನಡುವೆ ಮಾತುಕತೆ ನಡೆಸಲು ಯಾರೋ ಒಬ್ಬರು ಸೇತುವೆಯಾಗುವ ಅಗತ್ಯವಿಲ್ಲ ಎಂದು ಕೋಟಕ್​ ಅವರು ಮಾಧ್ಯಮದವರಿಗೆ ನಗುತ್ತಲೇ ಉತ್ತರಿಸಿದ್ದಾರೆ.
ಇದೇ ವೇಳೆ, ಒಬ್ಬ ಬ್ಯಾಟಿಂಗ್ ಕೋಚ್ ಆಗಿ ವಿರಾಟ್ ಕೊಹ್ಲಿ ಅವರಂತಹ ಶ್ರೇಷ್ಠ ಆಟಗಾರ ಉತ್ತಮ ರಿದಮ್‌ನಲ್ಲಿರುವಾಗ ಅವರಿಗೆ ಅನಗತ್ಯ ಸಲಹೆಗಳನ್ನು ನೀಡಿ ಗೊಂದಲಕ್ಕೀಡು ಮಾಡಬಾರದು ಎಂದು ಕೋಟಕ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಬ್ಯಾಟಿಂಗ್‌ಗೆ ಹೋಗುವ ಮೊದಲು ಕೆಲವೊಂದು ವಿಷಯಗಳ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೊಹ್ಲಿಗೆ ಯಾವುದಾದರೂ ಸಮಸ್ಯೆ ಅನಿಸುವವರೆಗೆ ಅಥವಾ ನಮಗೆ ಏನಾದರೂ ಪ್ರಮುಖ ದೋಷ ಕಾಣಿಸುವವರೆಗೆ ಅವರ ಬ್ಯಾಟಿಂಗ್ ಶೈಲಿಗೆ ನಾವು ತೊಂದರೆ ಕೊಡಬಾರದು. ಅವರ ಬ್ಯಾಟಿಂಗ್ ಅದ್ಭುತವಾಗಿದೆ. ಕೇವಲ ಅವರ ಫುಟ್‌ವರ್ಕ್ ಹೇಗೆ ಸಾಗುತ್ತಿದೆ ಎಂಬ ಬಗ್ಗೆ ಪಂದ್ಯದ ಮುನ್ನ ಹಾಗೂ ನೆಟ್ಸ್ ಅಭ್ಯಾಸದ ಬಳಿಕ ನನ್ನೊಂದಿಗೆ ಮಾತನಾಡಿದ್ದರು ಎಂದು ತಿಳಿಸಿದ್ದಾರೆ.
ಕಾರ್ಡಿಫ್ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 66 ಎಸೆತಗಳಲ್ಲಿ 65 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿರುವ ಮುನ್ಸೂಚನೆ ನೀಡಿದರು. ಅವರ ಜೊತೆಗೆ ಶ್ರೇಯಸ್ ಅಯ್ಯರ್ ಕೂಡ ಅರ್ಧಶತಕ ಬಾರಿಸಿದರು. ಆದರೆ ಭಾರತದ ಉಳಿದ ಬ್ಯಾಟಿಂಗ್ ಕ್ರಮಾಂಕವು ವೈಫಲ್ಯ ಅನುಭವಿಸಿದ ಕಾರಣ ಟೀಮ್ ಇಂಡಿಯಾ ಕೇವಲ 233 ರನ್‌ಗಳಿಗೆ ಸೀಮಿತವಾಯಿತು. ಇಂಗ್ಲೆಂಡ್ ತಂಡದ ಜೋ ರೂಟ್ ಅಜೇಯ 99 ರನ್ ಗಳಿಸುವ ಮೂಲಕ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟು ಸರಣಿಯನ್ನು 1-1 ರಿಂದ ಸಮಬಲಗೊಳಿಸಿದರು. ಪಂದ್ಯದ ವೇಳೆ ಕೊಹ್ಲಿ ಕ್ರೀಸ್‌ನಲ್ಲಿದ್ದಾಗ ಪಿಚ್‌ನ ಪರಿಸ್ಥಿತಿಯ ಬಗ್ಗೆ ಗಂಭೀರ್ ಹಾಗೂ ಡ್ರೆಸ್ಸಿಂಗ್ ರೂಮ್‌ಗೆ ಪ್ರಮುಖ ಸಂದೇಶಗಳನ್ನು ರವಾನಿಸುತ್ತಿದ್ದರು ಎಂದು ಕೋಟಕ್ ಹೇಳಿದ್ದಾರೆ.
ಪಿಚ್‌ನಲ್ಲಿ ಶಾರ್ಟ್ ಬಾಲ್‌ಗಳು ಸರಿಯಾಗಿ ಬ್ಯಾಟ್‌ಗೆ ಬರುತ್ತಿಲ್ಲ ಎಂಬ ಮಹತ್ವದ ಮಾಹಿತಿಯನ್ನು ಕೊಹ್ಲಿ ನಮಗೆ ಮತ್ತು ಹೆಡ್ ಕೋಚ್‌ಗೆ ತಲುಪಿಸಿದ್ದರು ಎಂದು ಕೋಟಕ್ ತಿಳಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಏಕದಿನ ಸರಣಿಯ ನಿರ್ಣಾಯಕ ಹಾಗೂ ಅಂತಿಮ ಪಂದ್ಯವು ಜುಲೈ 19 ರ ಭಾನುವಾರದಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಸದ್ಯ ಸರಣಿ ಸಮಬಲಗೊಂಡಿರುವುದರಿಂದ ಲಾರ್ಡ್ಸ್ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net