IPL-2026: ಈ ಬಾರಿ ಬಿಸಿಸಿಐಗೆ ಪಿಚ್​ ಕಂಟ್ರೋಲ್​! ಹೈಸ್ಕೋರಿಂಗ್​ಗೆ ಆದ್ಯತೆ

 ಈ ಬಾರಿ ಬಿಸಿಸಿಐಗೆ ಪಿಚ್​ ಕಂಟ್ರೋಲ್​! ಹೈಸ್ಕೋರಿಂಗ್​ಗೆ ಆದ್ಯತೆ
ಈ ಬಾರಿ ಬಿಸಿಸಿಐಗೆ ಪಿಚ್​ ಕಂಟ್ರೋಲ್​! ಹೈಸ್ಕೋರಿಂಗ್​ಗೆ ಆದ್ಯತೆ
Published on
ನವದೆಹಲಿ: ಹಾಲಿ ಐಪಿಎಲ್​ (IPL) ಆವೃತ್ತಿಯಲ್ಲಿ ಹಿಂದೆಂದಿಗಿಂತ ರನ್​, ಸಿಕ್ಸರ್​ಗಳ ಸುರಿಮಳೆಯಾಗುತ್ತಿದೆ. 200ಕ್ಕೂ ಅಧಿಕ ಮೊತ್ತ ಸುರಕ್ಷಿತವೆನಿಸಿಲ್ಲ. ಜಸ್​ಪ್ರೀತ್​ ಬುಮ್ರಾ ಸಹಿತ ಹಲವು ಸ್ಟಾರ್​ ಬೌಲರ್​ಗಳು ದುಬಾರಿಯಾಗುತ್ತಿದ್ದಾರೆ. ಈ ಬಾರಿ ಬಿಸಿಸಿಐ (BCCI), ರನ್​ಮಳೆಯಾಗುವಂಥ ಪಿಚ್​ಗಳನ್ನೇ ನಿರ್ಮಿಸಲು ಪ್ರಮುಖ ಆದ್ಯತೆ ನೀಡಿರುವುದು ಇದಕ್ಕೆ ಕಾರಣ.
ಈ ಬಾರಿ ಐಪಿಎಲ್​ ಪಂದ್ಯಗಳನ್ನು ಆಡುತ್ತಿರುವ ಬಹುತೇಕ ಎಲ್ಲ ಮೈದಾನಗಳಲ್ಲೂ ರನ್​ ಸರಾಗವಾಗಿ ಹರಿಯುತ್ತಿವೆ. ಈ ಎಲ್ಲ ಮೈದಾನಗಳ ಪಿಚ್​ ನಿರ್ಮಾಣದ ಕೆಲಸ ಸಂಪೂರ್ಣವಾಗಿ ಬಿಸಿಸಿಐ ನಿಯಂತ್ರಣದಲ್ಲಿರುವುದು ಇದಕ್ಕೆ ಕಾರಣ. ಸಾಮಾನ್ಯವಾಗಿ ಆಯಾ ಕ್ರಿಕೆಟ್​ ಮೈದಾನದ ಸ್ವಾಮ್ಯ ಹೊಂದಿರುವ ರಾಜ್ಯ ಕ್ರಿಕೆಟ್​ ಸಂಸ್ಥೆಗಳು ಅಥವಾ ಫ್ರಾಂಚೈಸಿ ಪಿಚ್​ ರೂಪಿಸುತ್ತವೆ. ಆದರೆ ಈ ಬಾರಿ ಎಲ್ಲ ಮೈದಾನದ ಪಿಚ್​ಗಳು ಸಂಪೂರ್ಣವಾಗಿ ಬಿಸಿಸಿಐ ನಿಯಂತ್ರಣದಲ್ಲಿವೆ. ಹೀಗಾಗಿ ಈ ಬಾರಿ ಪ್ರತಿ ಓವರ್​ಗೆ 9.68ರ ಸರಾಸರಿಯಲ್ಲಿ ರನ್​ ಸಿಡಿಯುತ್ತಿವೆ ಮತ್ತು ಪ್ರತಿ ಬ್ಯಾಟರ್​ ಸರಾಸರಿ 155.21ರ ಸ್ಟ್ರೈಕ್​ ರೇಟ್​ನಲ್ಲಿ ರನ್​ ಗಳಿಸುತ್ತಿದ್ದಾರೆ. ಮೊದಲ 49 ಪಂದ್ಯಗಳ ಪೈಕಿ 14ರಲ್ಲಿ 200 ಪ್ಲಸ್​ ಮೊತ್ತವನ್ನು ಬೆನ್ನಟ್ಟಲಾಗಿದೆ. 41 ಬಾರಿ 200 ಪ್ಲಸ್​ ಮೊತ್ತ ದಾಖಲಾಗಿವೆ.
ಪಿಚ್​ ನಿರ್ಮಾಣ ಸಂಪೂರ್ಣವಾಗಿ ಬಿಸಿಸಿಐ ನಿಯಂತ್ರಣದಲ್ಲಿರುವುದರಿಂದ ಈ ಬಾರಿ ಯಾವುದೇ ತಂಡಕ್ಕೂ ತವರಿನ ಲಾಭ ಸಿಗುತ್ತಿಲ್ಲ. ತಂಡದ ಸಾಮರ್ಥ್ಯ-ದೌರ್ಬಲ್ಯಕ್ಕೆ ತಕ್ಕಂತೆ ತವರಿನ ಪಿಚ್​ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ.

ಇನ್ನು ಬಿಸಿಸಿಐ ಪಿಚ್​ ನಿರ್ಮಿಸುವಾಗಲೇ, ಬೌಲರ್​ಗಳಿಗೆ ಕಡಿಮೆ ನೆರವು ಸಿಗಬೇಕೆಂದು ಕ್ಯುರೇಟರ್​ಗಳಿಗೆ ಸೂಚಿಸುತ್ತಿದೆ. ಅದರಲ್ಲೂ ಸ್ಪಿನ್​ ಬೌಲರ್​ಗಳಿಗೆ ಪಿಚ್​ನಲ್ಲಿ ಹೆಚ್ಚಿನ ತಿರುವು ಸಾಧ್ಯವಾಗಬಾರದು. ಯಾವುದೇ ಮೈದಾನದಲ್ಲಿ ಬೌಂಡರಿ ಗೆರೆ 77 ಮೀಟರ್​ ದಾಟಬಾರದು ಎಂದೂ ಸೂಚಿಸಲಾಗಿದೆ. ಹೀಗಾಗಿ ಈ ಬಾರಿ ಐಪಿಎಲ್​ನಲ್ಲಿ ವೇಗಿಗಳಿಗಿಂತ (385) ಸ್ಪಿನ್ನರ್​ಗಳಿಗೆ (168) ಕಡಿಮೆ ವಿಕೆಟ್​ ಲಭಿಸಿವೆ.
*ಬಲಿಷ್ಠ ಸ್ಪಿನ್​ ವಿಭಾಗ ಹೊಂದಿರುವ ತಂಡಗಳು ಈ ಹಿಂದೆ ನಿಧಾನಗತಿಯ ಪಿಚ್​ಗೆ ಆದ್ಯತೆ ನೀಡುತ್ತಿದ್ದವು. ಬಲಿಷ್ಠ ವೇಗದ ಬೌಲಿಂಗ್​ ಹೊಂದಿರುವ ತಂಡಗಳು, ಹೊಸ ಚೆಂಡಿನಲ್ಲಿ ಬೌಲರ್​ಗಳಿಗೆ ಹೆಚ್ಚು ನೆರವಾಗುವ ಪಿಚ್​ ಸಿದ್ಧಪಡಿಸುತ್ತಿದ್ದವು. ಆದರೆ ಈ ಬಾರಿ ಎಲ್ಲ ಪಿಚ್​ಗಳೂ ಬಹುತೇಕ ಬ್ಯಾಟಿಂಗ್​ ಸ್ನೇಹಿಯಾಗಿವೆ. ಇದರಿಂದ ತವರಿನ ಮತ್ತು ಪ್ರವಾಸಿ ತಂಡಗಳ ನಡುವೆ ಬೇಧವಿಲ್ಲದಂತಾಗಿದೆ.
| ಫ್ರಾಂಚೈಸಿ ಅಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net