ಹೆಂಡತಿಗೆ ಕ್ಯಾನ್ಸರ್​... ಕ್ರಿಕೆಟ್​ ಪಂದ್ಯಗಳ ಮಧ್ಯೆ ಎದೆಯೊಳಗಿದ್ದ ನೋವನ್ನು ಬಿಚ್ಚಿಟ್ಟ ನ್ಯೂಜಿಲೆಂಡ್​ನ ಸ್ಟಾರ್​ ವೇಗಿ | Blair Tickner

Blair Tickner
ಹೆಂಡತಿಗೆ ಕ್ಯಾನ್ಸರ್​... ಕ್ರಿಕೆಟ್​ ಪಂದ್ಯಗಳ ಮಧ್ಯೆ ಎದೆಯೊಳಗಿದ್ದ ನೋವನ್ನು ಬಿಚ್ಚಿಟ್ಟ ನ್ಯೂಜಿಲೆಂಡ್​ನ ಸ್ಟಾರ್​ ವೇಗಿ | Blair Tickner
Published on: 

ನ್ಯೂಜಿಲೆಂಡ್​: ಪ್ರಸಕ್ತ ಕಿವೀಸ್​ ತವರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈಗಾಗಲೇ ಟಿ20 ಸರಣಿ ಗೆದ್ದಿರುವ ಭಾರತ, 50 ಓವರ್​ ಸರಣಿಯನ್ನೂ ವಶಪಡಿಸಿಕೊಳ್ಳಲು ಎದುರುನೋಡುತ್ತಿದೆ. ಅತ್ತ ಸಖತ್ ಕಮ್​ಬ್ಯಾಕ್​ ಮಾಡಲು ಮೈದಾನದಲ್ಲಿ ಕಸರತ್ತು ನಡೆಸುತ್ತಿರುವ ನ್ಯೂಜಿಲೆಂಡ್​ ತಂಡದ ವೇಗಿ ಬೌಲರ್ ಬ್ಲೇರ್ ಟಿಕ್ನರ್ ಆಡಿರುವ ಕೆಲವು ಭಾವುಕ ಮಾತುಗಳು ಸದ್ಯ ಹಲವರನ್ನು ಅಚ್ಚರಿಗೆ ದೂಡಿದೆ.

ತಂಡದ ಪರ ಅದ್ಭುತ ಪ್ರದರ್ಶನ ನೀಡಲು ಮೈದಾನದಲ್ಲಿ ಬೆವರಿಳಿಸುತ್ತಿರುವ ಬ್ಲೇರ್​, ಕ್ರಿಕೆಟ್​ ಹೊರತುಪಡಿಸಿದಾಗ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಕರ ಸಂದರ್ಭಗಳು ತಮ್ಮ ಆಲೋಚನೆಯ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿವೆ ಎಂದು ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಪತ್ನಿ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾಗ ಎದುರಿಸಿದ ಅನುಭವಗಳು ಇಂದು ಜೀವನದ ಮೇಲಿನ ನನ್ನ ದೃಷ್ಟಿಕೋನವನ್ನು ಬದಲಿಸಿದೆ ಎಂದಿದ್ದಾರೆ.

2019ರಲ್ಲಿ ಟಿಕ್ನರ್​, ನ್ಯೂಜಿಲೆಂಡ್‌ಗಾಗಿ ತಮ್ಮ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ನಂತರ 2022ರಲ್ಲಿ ಏಕದಿನ ಮತ್ತು 2023ರಲ್ಲಿ ಟೆಸ್ಟ್‌ಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದರು. ಆದಾಗ್ಯೂ, ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಭಾರಿ ಕಷ್ಟಕರ ಪರಿಸ್ಥಿತಿಯನ್ನು ಅನುಭವಿಸಿದರು. ಏಪ್ರಿಲ್ 2024ರಲ್ಲಿ, ಬ್ಲೇರ್​ ಪತ್ನಿ ಸಾರಾಗೆ ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ಇರುವುದು ದೃಢವಾಯಿತು. ಎಂಟು ತಿಂಗಳ ಕಾಲ ಆಕೆಗೆ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಯಿತು ಎಂದರು.

"ನನ್ನ ಜೀವನವು ಏರಿಳಿತಗಳಿಂದ ತುಂಬಿದೆ. ಈ ಪ್ರಯಾಣದಲ್ಲಿ ಸಾರಾ ಮತ್ತು ನನ್ನ ಕುಟುಂಬವು ನನಗೆ ದೊಡ್ಡ ಮಟ್ಟದ ಸಾಥ್​ ಕೊಟ್ಟ ಬಗ್ಗೆ ತುಂಬಾ ಸಂತಸ ಹಾಗೂ ಹೆಮ್ಮೆಯಿದೆ. ನಾನು ಈಗ ನನ್ನ ಕ್ರಿಕೆಟ್ ಕರಿಯರ್​ ಅನ್ನು ಆನಂದಿಸಲು ಬಯಸುತ್ತಿದ್ದೇನೆ. ನಾನು ಈಗ ಮೊದಲಿಗಿಂತ ಹೆಚ್ಚು ಸ್ವಾಭಾವಿಕವಾಗಿ ಮತ್ತು ಮುಕ್ತ ಮನಸ್ಸಿನಿಂದ ಆಡುತ್ತಿದ್ದೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ, ನಾನು ಪ್ರದರ್ಶನದ ಬಗ್ಗೆ ತುಂಬಾ ಒತ್ತಡದಲ್ಲಿ ಸಿಲುಕಿದ್ದೆ. ಆ ಬಳಿಕ, ಸಾರಾಗೆ ಕಾಣಿಸಿಕೊಂಡ ಕ್ಯಾನ್ಸರ್ ಕಾಯಿಲೆ ಆಘಾತ ನೀಡಿತು. ಅವಳ ಚಿಕಿತ್ಸೆಯ ಸಮಯದಲ್ಲಿ ಸಾಕಷ್ಟು ಕಷ್ಟಕರ ಸಂದರ್ಭಗಳನ್ನು ಎದುರಿಸಿದ್ದೇನೆ" ಎಂದು ಹೇಳಿದರು.

Also Read
ಒಂದೇ ಒಂದು ದುರಂತಕ್ಕೆ ಇಡೀ ಊರೇ ಸರ್ವನಾಶ! 40 ವರ್ಷಗಳ ಹಿಂದೆಯೇ ಮೌನಕ್ಕೆ ಜಾರಿದ ನಗರವಿದು | Pripyat
Blair Tickner

"ಪ್ರತಿ ಕ್ಷಣವನ್ನು ಆನಂದಿಸುವುದು ಎಷ್ಟು ಮುಖ್ಯ ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಅನುಭವಗಳು ಕಲಿಸಿವೆ. ನಾನು ಈಗ ನನ್ನ ವೃತ್ತಿಜೀವನದ ಅಂತಿಮ ಹಂತಕ್ಕೆ ಕಾಲಿಟ್ಟಿದ್ದೇನೆ. ನಾನು ನನ್ನ ಮುಖದಲ್ಲಿ ಸದಾ ನಗುವಿನೊಂದಿಗೆ ಕ್ರಿಕೆಟ್ ಆಡಲು ಪ್ರಯತ್ನಿಸುವೆ. ಜೀವನದಲ್ಲಿ ಕ್ರಿಕೆಟ್‌ಗಿಂತ ಮುಖ್ಯವಾದ ವಿಷಯಗಳಿವೆ. ಈ ಆಟವು ನನಗೆ ಬಹಳಷ್ಟು ಕಲಿಸಿದೆ. ಆದರೆ, ದಿನದ ಕೊನೆಯಲ್ಲಿ, ನಾನು ಮನೆಗೆ ಹೋದಾಗ, ನನ್ನ ಹೆಂಡತಿ ಮತ್ತು ಮಗಳಿದ್ದಾಳೆ. ಅವರೊಂದಿಗೆ ಇರುವುದು ನನ್ನ ಅದೃಷ್ಟ. ಹೀಗಾಗಿಯೇ ನನಗೆ ಕ್ರಿಕೆಟ್‌ಗಿಂತ ಕುಟುಂಬವೇ ಮುಖ್ಯ" ಎಂದು ಟಿಕ್ನರ್ ಭಾವುಕರಾಗಿ ಮಾತನಾಡಿದ್ದಾರೆ,(ಏಜೆನ್ಸೀಸ್).