ಮೈಸೂರು ವಾರಿಯರ್ಸ್ ಪ್ರತಿಭಾನ್ವೇಷಣೆ; 213 ಯುವ ಕ್ರಿಕೆಟಿಗರ ಸತ್ವಪರೀಕ್ಷೆ
ಮೈಸೂರು ವಾರಿಯರ್ಸ್ ಪ್ರತಿಭಾನ್ವೇಷಣೆ; 213 ಯುವ ಕ್ರಿಕೆಟಿಗರ ಸತ್ವಪರೀಕ್ಷೆ
Published on:
Copied
Follow Us
ಬೆಂಗಳೂರು: ಜೂನ್ 20ರಂದು ಆರಂಭವಾಗಲಿರುವ ಮಹಾರಾಜ ಟ್ರೋಫಿ (Maharaja Trophy) ಕೆಎಸ್‌ಸಿಎ ಟಿ20 ಟೂರ್ನಿಗಾಗಿ ಮಾಜಿ ಚಾಂಪಿಯನ್ `ಮೈಸೂರು ವಾರಿಯರ್ಸ್' (Mysore Warriors) ಫ್ರಾಂಚೈಸಿಯು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾನ್ವೇಷಣೆ ಶಿಬಿರಕ್ಕೆ ರಾಜ್ಯದ ಯುವ ಆಟಗಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಕರ್ನಾಟಕದ ವಿವಿಧ ಭಾಗಗಳಿಂದ ಒಟ್ಟು 213 ಉದಯೋನ್ಮುಖ ಕ್ರಿಕೆಟಿಗರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಕೌಶಲ್ಯ ಪ್ರದರ್ಶಿಸಿದರು. ಇದರಲ್ಲಿ 68 ಆಲ್ ರೌಂಡರ್ಸ್, 63 ಮಧ್ಯಮ ವೇಗದ ಬೌಲರ್‌ಗಳು, 45 ಬ್ಯಾಟರ್‌ಗಳು, 20 ವಿಕೆಟ್ ಕೀಪರ್‌ಗಳು ಹಾಗೂ 17 ಸ್ಪಿನ್ನರ್‌ಗಳು ಕಾಣಿಸಿಕೊಂಡಿದ್ದರು.
ಮೈಸೂರು ವಾರಿಯರ್ಸ್ ತಂಡದ ಮುಖ್ಯ ಕೋಚ್ ಆರ್.ಎಕ್ಸ್. ಮುರಳಿಧರ್, ಸಹಾಯಕ ಕೋಚ್ ವಿಜಯ್ ಮದ್ಯಾಳ್ಕರ್ ಮತ್ತು ಮಾಲೀಕ ಅರ್ಜುನ್ ರಂಗ ಅವರ ನೇತೃತ್ವದಲ್ಲಿ ಆಟಗಾರರ ಫಿಟ್‌ನೆಸ್ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಪ್ರಮುಖವಾಗಿ ಪರೀಕ್ಷಿಸಲಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದ 15 ಪ್ರತಿಭಾವಂತ ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಲು ತೀರ್ಮಾನಿಸಲಾಗಿದೆ. ಇಲ್ಲಿ ಆಯ್ಕೆಯಾದವರು ಮುಂಬರುವ ಮಹಾರಾಜ ಟ್ರೋಫಿ ಹರಾಜು ಪ್ರಕ್ರಿಯೆಗೆ ಪರಿಗಣಿಸುವಂತೆ ಕೆಎಸ್‌ಸಿಎಗೆ ಶಿಫಾರಸು ಮಾಡಲಾಗುವುದು ಎಂದು ಮೈಸೂರು ವಾರಿಯರ್ಸ್ ಫ್ರಾಂಚೈಸಿ ತಿಳಿಸಿದೆ.