ಐಪಿಎಲ್​ನಿಂದ ಕೈಬಿಟ್ಟರೆ... BCCI ನಿರ್ಧಾರಕ್ಕೆ ಕಡೆಗೂ ತುಟಿಬಿಚ್ಚಿದ ಮುಸ್ತಾಫಿಜುರ್, ಐಸಿಸಿ ಮೊರೆ ಹೋದ ಬಾಂಗ್ಲಾ ಕ್ರಿಕೆಟ್​

ಮುಸ್ತಾಫಿಜುರ್ ರೆಹಮಾನ್
ಮುಸ್ತಾಫಿಜುರ್ ರೆಹಮಾನ್
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಕೆಕೆಆರ್​
  • ಕಡೆಗೂ ಪ್ರತಿಕ್ರಿಯೆ ನೀಡಿದ ಬಾಂಗ್ಲಾ ಆಟಗಾರ ಮುಸ್ತಾಫಿಜುರ್
  • ಐಸಿಸಿ ಮೊರೆ ಹೋದ ಬಾಂಗ್ಲಾ ಕ್ರಿಕೆಟ್​
ನವದೆಹಲಿ: ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್​ ಸೇರಿ ಒಂದಷ್ಟು ಕ್ರಿಕೆಟಿಗರನ್ನು ಐಪಿಎಲ್​ನಿಂದ ಕೈಬಿಡಿ ಎಂಬ ಕೂಗುಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಕಿಚ್ಚು ಹಚ್ಚಿತು. 
ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ಮಾಲೀಕ ಹಾಗೂ ನಟ ಶಾರುಖ್​ ಖಾನ್ ​ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಕೊಲೆ ಆಗುತ್ತಿರುವಾಗ, ಅಲ್ಲಿನ ಕ್ರಿಕೆಟಿಗರನ್ನು ಇಲ್ಲಿ ಆಡಿಸುವುದು ಎಷ್ಟು ಸರಿ? ಎಂದು ಕಿಡಿಕಾರಿದ್ದರು. ಅಂತೆಯೇ, ಬಿಸಿಸಿಐ ನಿರ್ದೇಶನದಂತೆ ಕೆಕೆಆರ್ ಇಂದು ಮುಸ್ತಾಫಿಜುರ್​ರನ್ನು 2026ರ ಐಪಿಎಲ್​ನಿಂದ ಕೈಬಿಟ್ಟಿತು. ಈ ನಿರ್ಧಾರಕ್ಕೆ ಕಡೆಗೂ ರೆಹಮಾನ್​ ಪ್ರತಿಕ್ರಿಯಿಸಿದ್ದಾರೆ. 
ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ ಭಾರತದಲ್ಲಿ ವ್ಯಾಪಕ ಆಕ್ರೋಶ ಸ್ಫೋಟಿಸಿತು. ಹಿಂದುಗಳ ಮೇಲಿನ ದೌರ್ಜನ್ಯ, ಸರಣಿ ಹತ್ಯೆಗಳು ಬಾಂಗ್ಲಾ ಕ್ರಿಕೆಟಿಗರನ್ನು ಭಾರತದ ಐಪಿಎಲ್​ನಲ್ಲಿ ಆಡಿಸುವುದು ಬೇಡ ಎಂಬ ಒತ್ತಾಯಗಳು ಕೇಳಿಬಂದ ಬೆನ್ನಲ್ಲೇ ಬಿಸಿಸಿಐ, ಕೆಕೆಆರ್​ಗೆ ಮುಸ್ತಾಫಿಜುರ್​ರನ್ನು ರಿಲೀಸ್​ ಮಾಡುವಂತೆ ನಿರ್ದೇಶಿಸಿತು. ಇದಕ್ಕೆ ಹೆಚ್ಚು ಮಾತನಾಡದ ಕೋಲ್ಕತ ಫ್ರಾಂಚೈಸಿ, ಅಸ್ತು ಎಂದಿತು. ಬಿಸಿಸಿಐನ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ರೆಹಮಾನ್​, ಅವರು ನನ್ನ ರಿಲೀಸ್​ ಮಾಡಿದ್ರೆ, ಅದಕ್ಕೆ ನಾನೇನು ಮಾಡಲಿ ಎಂದು ಹೇಳಿದ್ದಾರೆ.    
ಇನ್ನು ಬಿಸಿಸಿಐ ಕಟು ನಿರ್ಧಾರದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಇದೀಗ ಐಸಿಸಿ ಮೊರೆ ಹೋಗಿದೆ. ಫೆ.7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ ಟೂರ್ನಿಯ ಭಾಗವಾಗಿ ಬಾಂಗ್ಲಾ ಭಾರತದಲ್ಲಿ ಪಂದ್ಯಗಳನ್ನಾಡಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿ ಆಯೋಜನೆ ಮಾಡುತ್ತಿರುವ ಹಿನ್ನೆಲೆ ತಮ್ಮ ಆಟಗಾರರಿಗೆ ಭದ್ರತೆಯ ಕೋರಿ, ಸ್ಥಳಗಳ ಬದಲಾವಣೆಗೆ ಬಿಸಿಬಿ ಮನವಿ ಸಲ್ಲಿಸಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net