Mukul Choudhary: ನನ್ನ ತಂದೆಯ ಮದುವೆಗೂ ಮೊದಲೇ ಶುರುವಾಗಿತ್ತು ನನ್ನ ಕ್ರಿಕೆಟ್ ಕನಸು! LSG ಹೀರೋ ಮುಕುಲ್ ಚೌಧರಿ ಭಾವುಕ ಮಾತು

Mukul Choudhary
Mukul Choudhary
Published on
ಕೋಲ್ಕತ್ತಾ: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೆಕೆಆರ್ ವಿರುದ್ಧ ಅಸಾಧ್ಯ ಗೆಲುವು ತಂದುಕೊಟ್ಟ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಸಂಚಲನ ಮುಕುಲ್ ಚೌಧರಿ (Mukul Choudhary) ಈಗ ಇಡೀ ದೇಶದ ಗಮನ ಸೆಳೆದಿದ್ದಾರೆ. ಪಂದ್ಯ ಗೆಲ್ಲಿಸಿದ ಬಳಿಕ ತಮ್ಮ ಜೀವನದ ಕಠಿಣ ಹಾದಿ ಮತ್ತು ತಂದೆಯ ಕನಸಿನ ಬಗ್ಗೆ ಮುಕುಲ್ ಹಂಚಿಕೊಂಡಿರುವ ಮಾತುಗಳು ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿವೆ.
ಪಂದ್ಯ ಪುರುಷ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಮುಕುಲ್, "ನನ್ನ ಕ್ರಿಕೆಟ್ ಪಯಣ ನಿಜವಾಗಿ ಶುರುವಾಗಿದ್ದು ನನ್ನ ತಂದೆಯ ಮದುವೆಗೂ ಮೊದಲು! ನನ್ನ ಮಗ ಕ್ರಿಕೆಟಿಗನಾಗಬೇಕು ಎಂಬುದು ಅವರ ದೊಡ್ಡ ಕನಸಾಗಿತ್ತು. ಆರಂಭದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೇನು ಚೆನ್ನಾಗಿರಲಿಲ್ಲ. ಆದರೂ ನನ್ನ ಕನಸಿಗೆ ತಂದೆ ನೀರೆರೆದರು" ಎಂದು ಸ್ಮರಿಸಿದ್ದಾರೆ.
ರಾಜಸ್ಥಾನದ ಜುಂಜುನು ಎಂಬ ಸಣ್ಣ ಜಿಲ್ಲೆಯವರಾದ ಮುಕುಲ್, 12-13ನೇ ವಯಸ್ಸಿನಲ್ಲಿ ಕ್ರಿಕೆಟ್ ಆರಂಭಿಸಿದರು. ಸ್ಥಳೀಯವಾಗಿ ಉತ್ತಮ ಅಕಾಡೆಮಿಗಳಿಲ್ಲದ ಕಾರಣ ಜೈಪುರಕ್ಕೆ ಸ್ಥಳಾಂತರಗೊಂಡರು. ಟಿ20 ಕ್ರಿಕೆಟ್‌ನ ವೇಗಕ್ಕೆ ಹೊಂದಿಕೊಳ್ಳಲು ಗುರಗಾಂವ್‌ನಲ್ಲಿ ತಿಂಗಳುಗಟ್ಟಲೆ ಕಠಿಣ ಅಭ್ಯಾಸ ನಡೆಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಜೀವನ ಬದಲಿಸಿದ ಆ ಒಂದು ಪಂದ್ಯ

ತಮ್ಮ ವೃತ್ತಿಜೀವನದ ಟರ್ನಿಂಗ್ ಪಾಯಿಂಟ್ ಬಗ್ಗೆ ವಿವರಿಸಿದ ಅವರು, "ಯುಪಿ ವಿರುದ್ಧ ನಡೆದ ಅಂಡರ್-19 ಪಂದ್ಯವೊಂದು ನನ್ನ ಲಕ್ ಬದಲಿಸಿತು. ಅದೊಂದು ಲೋ ಸ್ಕೋರಿಂಗ್ ಮ್ಯಾಚ್ ಆಗಿದ್ದರೂ ನಾನು ರನ್ ಗಳಿಸಿದ್ದೆ. ಆ ಕ್ಷಣದಲ್ಲಿ ನನ್ನ ಮಗ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ನನ್ನ ತಂದೆಗೆ ನಂಬಿಕೆ ಬಂದಿತು" ಎಂದಿದ್ದಾರೆ.
ಒತ್ತಡವನ್ನೇ ಅವಕಾಶವನ್ನಾಗಿ ಬದಲಿಸಿದ ಯುವ ಕಿಶೋರ
ಕೊನೆಯ ಓವರ್‌ಗಳಲ್ಲಿ ಎದುರಾದ ಒತ್ತಡದ ಬಗ್ಗೆ ಮಾತನಾಡಿದ ಅವರು, "ಒತ್ತಡ ಯಾವಾಗಲೂ ಇರುತ್ತದೆ. ಆದರೆ ದೇವರು ನಮಗೆ ಇದೊಂದು ಅವಕಾಶ ನೀಡಿದ್ದಾನೆ ಎಂದು ನಾನು ಭಾವಿಸುತ್ತೇನೆ. ನಾನು ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದರೆ ಪಂದ್ಯ ಗೆಲ್ಲಿಸಬಹುದು ಎಂಬ ನಂಬಿಕೆ ನನಗಿತ್ತು. ನನ್ನ ಏರಿಯಾಗೆ ಬಾಲ್ ಬಂದರೆ ಸಿಕ್ಸರ್ ಎತ್ತುವುದು ಒಂದೇ ನನ್ನ ಪ್ಲಾನ್ ಆಗಿತ್ತು" ಎಂದು ತಮ್ಮ ಬ್ಯಾಟಿಂಗ್ ಗುಟ್ಟು ಬಿಟ್ಟುಕೊಟ್ಟರು.

ದಾಖಲೆಯ ಜೊತೆಯಾಟ!

ಕುತೂಹಲಕಾರಿ ವಿಷಯವೆಂದರೆ, ಮುಕುಲ್ ಚೌಧರಿ ಮತ್ತು ಅವೇಶ್ ಖಾನ್ ನಡುವಿನ 54 ರನ್‌ಗಳ ಅಜೇಯ ಜೊತೆಯಾಟ ಐಪಿಎಲ್ ಇತಿಹಾಸದಲ್ಲೇ 8ನೇ ವಿಕೆಟ್ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಯಶಸ್ವಿ ಚೇಸಿಂಗ್ ವೇಳೆ ದಾಖಲಾದ ಗರಿಷ್ಠ ರನ್ ಎಂಬ ದಾಖಲೆ ಬರೆದಿದೆ. ವಿಶೇಷವೆಂದರೆ ಈ 54 ರನ್‌ಗಳಲ್ಲಿ 52 ರನ್ ಮುಕುಲ್ ಅವರ ಬ್ಯಾಟ್‌ನಿಂದಲೇ ಬಂದಿದೆ!

ಪಂದ್ಯದ ಹೈಲೈಟ್ಸ್

ಕೆಕೆಆರ್: 181/4 (ರಘುವಂಶಿ 45, ರಹಾನೆ 41)
ಎಲ್ಎಸ್‌ಜಿ: 182/7 (ಮುಕುಲ್ ಚೌಧರಿ 54*, ಆಯುಷ್ ಬದೋನಿ 54)
ಫಲಿತಾಂಶ: ಲಕ್ನೋಗೆ 3 ವಿಕೆಟ್‌ಗಳ ರೋಚಕ ಜಯ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net