ಧೋನಿ, ಕೊಹ್ಲಿ, ರೋಹಿತ್​ ಇವರಾರು ಅಲ್ಲ! ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಲಾದ ಕ್ರಿಕೆಟಿಗ ಈತನೇ ನೋಡಿ

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಧೋನಿ, ಕೊಹ್ಲಿ, ರೋಹಿತ್‌ ಮೀರಿಸಿದ ಟೀಮ್​ ಇಂಡಿಯಾದ ಯುವ ಕ್ರಿಕೆಟಿಗ
  • 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ
  • ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಲಾದ ಕ್ರಿಕೆಟಿಗ
ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಿಗೆ ಅಪಾರ ಸಂಖ್ಯೆಯ ಹಾಗೂ ವಿಶೇಷ ಅಭಿಮಾನಿ ಬಳಗವಿದೆ. ಈ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುವ ಅಭಿಮಾನಿಗಳು, ಅವರು ನಿವೃತ್ತಿ ಹೊಂದಿದರೆ ಕೇವಲ ಸೋಷಿಯಲ್ ಮೀಡಿಯಾ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ನೋಡಿ ಸಂಭ್ರಮಿಸುತ್ತಾರೆ. 'ಕ್ಯಾಪ್ಟನ್​ ಕೂಲ್​' ಮಹೇಂದ್ರ ಸಿಂಗ್​ ಧೋನಿ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ, ಇದೀಗ ಐಪಿಎಲ್​ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಇಂದಿಗೂ ಅವರ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ ಎಂಬುದಕ್ಕೆ ಅವರು ಮೈದಾನಕ್ಕಿಳಿದಾಗ ಸ್ಪಷ್ಟವಾಗುತ್ತದೆ. ಮತ್ತೊಂದೆಡೆ, 'ರೋಕೊ' ಜೋಡಿ ಪ್ರಸ್ತುತ ಏಕದಿನ ಫಾರ್ಮೆಟ್​ನಲ್ಲಿ ಮಾತ್ರ ಆಡುತ್ತಿರುವುದರಿಂದ, ಅವರನ್ನು ಸಂಭ್ರಮಿಸುವ ಬಳಗ ಬಹಳ ದೊಡ್ಡದಿದೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ಈ ವರ್ಷ, ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಲಾದ ಕ್ರಿಕೆಟಿಗರ ಪೈಕಿ ಈತನ ಹೆಸರು ಮುಂಚೂಣಿಯಲ್ಲಿದೆ.
ಕೊಹ್ಲಿ, ರೋಹಿತ್​, ಧೋನಿ ಅವರಂತಹ ದಿಗ್ಗಜರ ಹೆಸರುಗಳನ್ನೇ ಹಿಂದಿಕ್ಕಿ, ತನ್ನ ಹೆಸರನ್ನು ನೆಟ್ಟಿಗರು ಅತಿ ಹೆಚ್ಚಾಗಿ ಗೂಗಲ್​ನಲ್ಲಿ ಹುಡುಕುವಂತೆ ಮಾಡಿರುವ ಆಟಗಾರ ಬೇರಾರು ಅಲ್ಲ, ಆತನೇ ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ವೈಭವ್​ ಸೂರ್ಯವಂಶಿ. 14 ವರ್ಷ ವಯಸ್ಸಿನ ವೈಭವ್, ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್​ ಆದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಐಪಿಎಲ್, ಭಾರತ 'ಎ' ಪಂದ್ಯಗಳು ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಈ ಯುವ ಬ್ಯಾಟರ್​, ಟೀಮ್​ ಇಂಡಿಯಾದ ಭರವಸೆಯ ಓಪನರ್​ ಎಂಬ ಬಲವಾದ ನಂಬಿಕೆಗೆ ಅರ್ಹರಾಗಿದ್ದಾರೆ.
ತಮ್ಮ ಬ್ಯಾಟಿಂಗ್ ಶೈಲಿಯ ಮೂಲಕವೇ ಇಂದು ಅನೇಕರ ಗಮನ ಸೆಳೆದಿರುವ ವೈಭವ್​, 12ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯುವ ಕ್ರಿಕೆಟಿಗ. ಈ ಮೂಲಕ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಈಗ, ಗೂಗಲ್ ಇಯರ್ ಇನ್ ಸರ್ಚ್ 2025 ವರದಿಯ ಪ್ರಕಾರ, ವೈಭವ್ ಹೆಸರು ಮೊದಲ ಸ್ಥಾನದಲ್ಲಿದೆ. ಮತ್ತೊಬ್ಬ ಯುವ ಕ್ರಿಕೆಟಿಗ ಪಂಜಾಬ್ ಕಿಂಗ್ಸ್ ಆಟಗಾರ ಪ್ರಿಯಾಂಶ್ ಆರ್ಯ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರ ನಂತರ, ಅಭಿಷೇಕ್ ಶರ್ಮ ಮತ್ತು ಶೇಖ್ ರಶೀದ್ ಇದ್ದಾರೆ. ಅದೇ ರೀತಿ, ಮಹಿಳಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಮಿಮಾ ರೋಡ್ರಿಗಸ್ ಹೆಸರು ಕೂಡ ಗೂಗಲ್‌ನಲ್ಲಿ ಸರ್ಚ್​ ಆಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net