ಈ ಸೋಲು ಇಲ್ಲಿಗೆ ಮುಗಿಯಲ್ಲ... ಮೊಹ್ಸಿನ್​ ನಖ್ವಿ ಮುಖಕ್ಕೆ ಹೊಡೆದಂತೆ ಹೇಳಿದ ಮೊಹಮ್ಮದ್​ ಯೂಸಫ್​!

ಪಾಕ್​ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಯೂಸಫ್​ (ಎಡ), ಮೊಹ್ಸಿನ್ ನಖ್ವಿ (ಬಲ)
ಪಾಕ್​ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಯೂಸಫ್​ (ಎಡ), ಮೊಹ್ಸಿನ್ ನಖ್ವಿ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • ಹೈವೋಲ್ಟೇಜ್ ​ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲು
  • ಟಿ20 ವಿಶ್ವಕಪ್​ ಪಂದ್ಯದಲ್ಲಿ ಭಾರೀ ಮುಖಭಂಗ ಅನುಭವಿಸಿದ ಪಾಕ್
  • ಮೊಹ್ಸಿನ್​ ನಖ್ವಿ ವಿರುದ್ಧ ಪಾಕ್​ ಕ್ರಿಕೆಟಿಗರಿಂದಲೇ ಛೀಮಾರಿ
IND vs PAK: ನಿನ್ನೆ (ಫೆ.15) ಕೊಲೊಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 61 ರನ್​ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಮತ್ತೆ ಪಾಕ್​ ತಂಡಕ್ಕೆ ಹೀನಾಯ ಸೋಲುಣಿಸಿದ ಭಾರತಕ್ಕೆ ಇದು 8ನೇ ಗೆಲುವು. ಸೂರ್ಯಕುಮಾರ್ ಯಾದವ್ ಪಡೆ ವಿರುದ್ಧ ಸೋತ ಬೆನ್ನಲ್ಲೇ ಪಾಕ್​ನಲ್ಲಿ ಮಾಜಿ ಕ್ರಿಕೆಟಿಗರ ಆಕ್ರೋಶ ಭುಗಿಲೆದ್ದಿದೆ.
ಶಾಹಿದ್​ ಆಫ್ರಿದಿ, ವಾಸಿಮ್​ ಅಕ್ರಂ, ಶೋಯೆಬ್​ ಅಕ್ತರ್​ ಬಳಿಕ ಪಿಸಿಬಿ ವಿರುದ್ಧ ಕಿಡಿಕಾರಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಯೂಸಫ್​, "ರಾಜಕೀಯ ಲೆಕ್ಕಾಚಾರ ಮತ್ತು ವೈಯಕ್ತಿಕ ದಾಳಿಗಳನ್ನು ತೆಗೆದುಹಾಕದಿದ್ದರೆ ಪಾಕಿಸ್ತಾನ ಇನ್ಯಾವುತ್ತೂ ಮೇಲೇರುವುದಿಲ್ಲ. ಇದು ನಮ್ಮ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕರಾಳ ಸಮಯ. ಅನರ್ಹರು ಅಧಿಕಾರದಲ್ಲಿದ್ದರೆ, ತಂಡದ ಗತಿ ಹೀಗೆ ಮುಂದುವರಿಯುತ್ತದೆ ಎಂದರು. ಈ ಹೇಳಿಕೆಗಳ ಮೂಲಕ ಪರೋಕ್ಷವಾಗಿ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಕುಟುಕಿದರು.
ಪಾಕ್​ ಸೋಲಿಗೆ ನಖ್ವಿ ನಿರ್ಧಾರಗಳೇ ಕಾರಣ!
ವಾಸ್ತವವಾಗಿ, ಪಾಕ್​ ತಂಡಕ್ಕೆ ಭಾರತ ವಿರುದ್ಧ ಆಡಲು ಯಾವುದೇ ತಕರಾರು ಇರಲಿಲ್ಲ. ಆದರೆ, ನಖ್ವಿ ತೆಗೆದುಕೊಂಡ ನಿರ್ಧಾರಗಳು ಇಲ್ಲಸಲ್ಲದ ತಗಾದೆಗೆ ಕಾರಣವಾಯಿತು. ಬಾಂಗ್ಲಾ ಕ್ರಿಕೆಟ್​ ತಮ್ಮ ತಂಡವನ್ನು ಭಾರತಕ್ಕೆ ಕಳಿಸೋದಿಲ್ಲ ಎಂದ ಕಾರಣ, ಐಸಿಸಿ ಅವರನ್ನು ಟಿ20 ಟೂರ್ನಿಯಿಂದಲೇ ಕಿತ್ತುಬಿಸಾಡಿತು. ಇದು ಅಸಲಿಗೆ ಬಾಂಗ್ಲಾ ಸಮಸ್ಯೆ. ಆದರೆ, ಇಲ್ಲಿ ಅನವಶ್ಯಕವಾಗಿ ಮೂಗು ತೂರಿದ ಪಿಸಿಬಿ ಮುಖ್ಯಸ್ಥ ನಖ್ವಿ, ರಾಜಕೀಯ ಒತ್ತಡಗಳನ್ನು ಹೇರಿದ್ದೇ ಪಾಕಿಸ್ತಾನ ತಂಡಕ್ಕೆ ಕಂಟಕವಾಯಿತು. ಆಡಲ್ಲ ಎಂದು ಪಂದ್ಯ ಬಹಿಷ್ಕರಿಸಿ, ಆ ನಂತರ ಆಡಲು ಬಂದಿದ್ದು ಇಡೀ ಪಾಕ್​ ಕ್ರಿಕೆಟ್​ಗೆ ನಾಚಿಕೆ ತರುವಂತೆ ಮಾಡಿತು.
2025ರ ಏಷ್ಯಾಕಪ್ ಸಮಯದಲ್ಲಿಯೂ ಟೀಮ್ ಇಂಡಿಯಾ ಮುಂಚೆಯೇ ಹೇಳಿದಂತೆ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಈ ವಿಷಯ ತಿಳಿಯುತ್ತಿದ್ದಂತೆ ವೇದಿಕೆಯಿಂದ ಟ್ರೋಫಿ ಹೊತ್ತೊಯ್ದರು. ಇದು ದೊಡ್ಡ ವಿವಾದಕ್ಕೆ ಸಾಕ್ಷಿಯಾಯಿತು. ಇಂದಿಗೂ ಏಷ್ಯಾಕಪ್​ ಹಸ್ತಾಂತರಿಸದ ನಖ್ವಿ, ಈಗ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ತನ್ನ ನರಿಬುದ್ಧಿ ಮುಂದುವರಿಸಿರುವುದೇ ಇದೀಗ ಪಾಕ್​ಗೆ ಆರ್ಥಿಕ ಸಂಕಷ್ಟದ ಜತೆಗೆ ಸಾಲು ಸಾಲು ಟೀಕೆ, ಛೀಮಾರಿಗೆ ತುತ್ತಾಗುವಂತೆ ಮಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net