ಏಷ್ಯಾಕಪ್​ ವಿವಾದ ಇಲ್ಲಿ ರಿಪೀಟ್ ಆದರೆ ಮಾತ್ರ... ಇಂಡೋ-ಪಾಕ್ ಪಂದ್ಯ ಬೆನ್ನಲ್ಲೇ ಮೊಹಮ್ಮದ್​ ಹಫೀಜ್ ಬಿಚ್ಚುಮಾತು​

ಪಾಕ್ ಮಾಜಿ​ ಕ್ರಿಕೆಟಿಗ ಮೊಹಮ್ಮದ್​ ಹಫೀಜ್​
ಪಾಕ್ ಮಾಜಿ​ ಕ್ರಿಕೆಟಿಗ ಮೊಹಮ್ಮದ್​ ಹಫೀಜ್​
Published on

ಪ್ರಮುಖ ಮುಖ್ಯಾಂಶಗಳು

  • ಫೆ.15ರಂದು ನಡೆಯಲಿರುವ ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ
  • ಭಾರತ ವಿರುದ್ಧದ ಟಿ20 ವಿಶ್ವಕಪ್​ ಪಂದ್ಯವನ್ನಾಡಲು ಪಾಕ್​ ಓಕೆ
  • ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಹಫೀಜ್​ ಶಾಕಿಂಗ್ ಹೇಳಿಕೆ
ನವದೆಹಲಿ: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜನೆ ಮಾಡಿರುವ 2026ನೇ ಸಾಲಿನ ಟಿ20 ವಿಶ್ವಕಪ್ ಟೂರ್ನಮೆಂಟ್ ತುಂಬಾ ರೋಚಕತೆಯಿಂದ ಸಾಗುತ್ತಿದೆ. ಮತ್ತೊಂದೆಡೆ, ಪಂದ್ಯಗಳಿಗಿಂತಲೂ ಪಾಕ್​ ಮಾಡುತ್ತಿರುವ ಹೈಡ್ರಾಮಾ ಕ್ರಿಕೆಟ್​ ಲೋಕವನ್ನೇ ಕೆರಳಿಸಿದೆ. ಟಿ20 ವಿಶ್ವಕಪ್​ ಬಹಿಷ್ಕರಿಸುತ್ತೇವೆ ಎಂದಿದ್ದ ಪಾಕ್​ ಈಗ ದಿಢೀರ್ ಉಲ್ಟಾ ಹೊಡೆದಿದ್ದು, ಟೀಮ್ ಇಂಡಿಯಾ ವಿರುದ್ಧ ಆಡುವುದಿಲ್ಲ ಎಂದು ಮಾಡಿದ್ದ ನಿರ್ಧಾರದಿಂದ​ ಯೂಟರ್ನ್​ ಹೊಡೆದಿದೆ.

ಆಡಲು ಅಸ್ತು

ಬಿಸಿಬಿ ಮನವಿ ಹಾಗೂ ಐಸಿಸಿ ಎಚ್ಚರಿಕೆಯ ಬಳಿಕ ಫೆ.15ರಂದು ನಡೆಯಲಿರುವ ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ನಾವು ಆಡುತ್ತೇವೆ ಎಂದು ಪಾಕಿಸ್ತಾನ ತಿಳಿಸಿದೆ. ಪಿಸಿಬಿಯ ಈ ನಾಟಕಗಳಿಗೆ ಕಿಡಿಕಾರಿರುವ ಅನೇಕರು, ಪಾಕಿಸ್ತಾನವನ್ನು ಟೀಕಿಸಿ ಮಾತನಾಡುತ್ತಿದ್ದಾರೆ. ಈ ಬೆಳವಣಿಗೆಯ ನಡುವೆ ಪ್ರತಿಕ್ರಿಯಿಸಿರುವ ಮಾಜಿ ಪಾಕ್​ ಬ್ಯಾಟರ್​ ಮೊಹಮ್ಮದ್​ ಹಫೀಜ್​, ಈ ಬಾರಿಯ ಇಂಡೋ-ಪಾಕ್ ಪಂದ್ಯದಲ್ಲಿ ಏಷ್ಯಾಕಪ್​ ವಿವಾದ ಮರುಕಳಿಸಿದರೆ ಖಂಡಿತ ನಾನು ಮ್ಯಾಚ್​ ನೋಡೋದಿಲ್ಲ ಎಂದಿದ್ದಾರೆ.

ಹಫೀಜ್​ ಮಾತು

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಿಗೆ ಸದಾ ನನ್ನ ಬೆಂಬಲವಿದೆ. ಕಾರಣ, ಈ ಎರಡೂ ತಂಡಗಳ ನಡುವಿನ ಹಣಾಹಣಿ ಇಡೀ ಜಗತ್ತಿಗೆ ಸ್ಪೂರ್ತಿ ನೀಡುತ್ತದೆ. ಕೇವಲ ಇದೊಂದು ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಈ ಮಾತು ಹೇಳ್ತಿಲ್ಲ. ನಿಜಕ್ಕೂ ಪ್ರತಿಯೊಂದು ಇಂಡೋ-ಪಾಕ್ ಪಂದ್ಯಕ್ಕೂ ಇದೇ ಬೆಂಬಲವಿದೆ. ಅದರಲ್ಲೂ, ಯಾವುದೇ ರಾಜಕೀಯ ಉದ್ವಿಗ್ನವಿಲ್ಲದೇ ಹಾಗೂ ಹಸ್ತಕ್ಷೇಪವಿಲ್ಲದೆ ಆಗಾಗ್ಗೆ ಪಂದ್ಯಗಳು ನಡೆಯುತ್ತಿರಬೇಕು ಎಂದಿದ್ದಾರೆ ಹಫೀಜ್.
"ಎರಡೂ ರಾಷ್ಟ್ರಗಳು ಕ್ರಿಕೆಟ್‌ನ ಬೆಳವಣಿಗೆ ಮತ್ತು ಪ್ರಚಾರಕ್ಕೆ ಸಂಪೂರ್ಣವಾಗಿ ಕೊಡುಗೆ ನೀಡಲು ಮುಕ್ತವಾಗಿರಬೇಕು. ಭಾರತ ಮತ್ತು ಪಾಕಿಸ್ತಾನ ಪಂದ್ಯಗಳ ಸುತ್ತ ಏನೇ ಇರಲಿ, ಅದು ಆಟದ ಸಮಗ್ರತೆ ಮತ್ತು ಉತ್ಸಾಹಕ್ಕೆ ಎಂದಿಗೂ ತೊಂದರೆ ತಂದಿಡಬಾರದು. ಬದಲಿಗೆ ಆದ್ಯತೆ ನೀಡಬೇಕು. ಏಷ್ಯಾಕಪ್​ನಲ್ಲಿ ಆದ ವಿವಾದಗಳು (ಹ್ಯಾಂಡ್​ಶೇಕ್​) ಟಿ20 ವಿಶ್ವಕಪ್​ ಪಂದ್ಯದಲ್ಲಿ ನಡೆಯದಿದ್ದರೆ ಒಳಿತು ಎಂದು ಹಫೀಜ್ ಹೇಳಿದ್ದಾರೆ.

ಏಷ್ಯಾಕಪ್​ನಲ್ಲಿ ಆಗಿದ್ದೇನು?

ಕಳೆದ ವರ್ಷ ನಡೆದ ಏಷ್ಯಾಕಪ್​ ಟೂರ್ನಿಯಲ್ಲಿ ಮೂರು ಬಾರಿ ಪಾಕಿಸ್ತಾನ ತಂಡದೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ, ಪಹಲ್ಗಾಮ್ ದಾಳಿಯಲ್ಲಿ ಪಾಕ್​ ಉಗ್ರರ ಕೈವಾಡವನ್ನು ಖಂಡಿಸಿ ಪಾಕ್​ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಮುಂದಾಗಲಿಲ್ಲ. ದುಬೈನಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಪಾಕ್​ ಆಟಗಾರರಿಗೆ ಹ್ಯಾಂಡ್​ಶೇಕ್​ ಮಾಡದ ಟೀಮ್ ಇಂಡಿಯಾ ವಿರುದ್ಧ ಪಿಸಿಬಿ ಭಾರೀ ಅಸಮಾಧಾನ ವ್ಯಕ್ತಪಡಿಸಿತ್ತು. ಇದನ್ನೇ ಈ ಸಂದರ್ಭದಲ್ಲಿ ನೆನಪಿಸಿದ ಹಫೀಜ್​, ಆ ಕ್ಷಣ ಮತ್ತೆ ಮರುಕುಳಿಸದಿರಲಿ ಎಂದು ಇಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net