ಕಡೆಗೂ ಮೊಹಮ್ಮದ್​ ಅಮಿರ್​ ಆಡಿದ ಮಾತು ನಿಜವಾಯ್ತು! ಫ್ಲಾಪ್​ ಶೋ 'ಅಭಿ'​ಗೆ ಇನ್ನೊಂದು ಸಲಹೆ ಕೊಟ್ಟ ಪಾಕ್​ ಕ್ರಿಕೆಟಿಗ

ಅಭಿಷೇಕ್ ಶರ್ಮ, ಮೊಹಮ್ಮದ್ ಅಮೀರ್
ಅಭಿಷೇಕ್ ಶರ್ಮ, ಮೊಹಮ್ಮದ್ ಅಮೀರ್
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅಬ್ಬರಿಸದ ಅಭಿಷೇಕ್ ಶರ್ಮ
  • ಸತತ ಮೂರು ಪಂದ್ಯಗಳಲ್ಲಿ ಡಕ್​ ಔಟ್, ಸೂಪರ್​-8 ಮೊದಲ ಪಂದ್ಯದಲ್ಲಿಯೂ ಫ್ಲಾಪ್​​
  • ಅಭಿಷೇಕ್​ ಒಬ್ಬ ಟೆಕ್ನಿಕ್​ ಇಲ್ಲದೆ ಆಡುವ ಬ್ಯಾಟರ್​ ಎಂದ ಪಾಕ್​ ಆಟಗಾರ
Abhishek Sharma: ನಿನ್ನೆ (ಫೆ.22) ಅಹಮದಾಬಾದ್​ನಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯ ಎರಡನೇ ಸೂಪರ್​-8 ಹಂತದ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾಗೆ ಭಾರೀ ಟೀಕೆಗಳು ಹರಿದುಬಂದಿವೆ. ಗ್ರೂಪ್​ ಸ್ಟೇಜ್​ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಸರಣಿ ಜಯ ಸಾಧಿಸಿದ ಸೂರ್ಯಕುಮಾರ್ ಯಾದವ್​ ಪಡೆಗೆ ಸೌತ್ ಆಫ್ರಿಕಾ ಎದುರು ಗೆಲುವಿನ ಓಟ ಮುಂದುವರೆಸಲು ಆಗಲಿಲ್ಲ. ಒಂದೆಡೆ, ಭಾರತ 74 ರನ್​ಗಳ ಹೀನಾಯ ಸೋಲು ಅನುಭವಿಸಿದರೆ, ಮೂರು ಡಕ್​ಔಟ್​ ಬಳಿಕ ಮತ್ತೊಂದು ಪಂದ್ಯದಲ್ಲಿಯೂ ಫ್ಲಾಪ್​ ಶೋ ಮುಂದುವರಿಸಿದ ಅಭಿಷೇಕ್ ಶರ್ಮ ಮತ್ತೊಂದೆಡೆ.
ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಆಡುತ್ತಿದ್ದ ಅಭಿಷೇಕ್ ಶರ್ಮ, ಅದ್ಯಾಕೋ ಟಿ20 ವಿಶ್ವಕಪ್​ನಲ್ಲಿ ಮಾತ್ರ ಬ್ಯಾಕ್​ ಟು ಬ್ಯಾಕ್​ ಡಕ್​ಔಟ್​ ಆಗುತ್ತಿರುವುದು ಸದ್ಯ ಕ್ರಿಕೆಟ್​ ಪ್ರಿಯರನ್ನು ತೀವ್ರ ಕೆರಳಿಸಿದೆ. ಯುಎಸ್​ಎ, ಪಾಕಿಸ್ತಾನ ಮತ್ತು ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್​ ಆದ ಅಭಿಷೇಕ್​ಗೆ ಸೂಪರ್​-8 ಪಂದ್ಯದಲ್ಲಿ ಅವಕಾಶ ನೀಡುವುದಿಲ್ಲ. ಅವರ ಬದಲಿಗೆ ಸಂಜು ಸ್ಯಾಮ್ಸನ್​ ಆಡಿಸಬಹುದು ಎಂದೇ ಬಹುತೇಕರು ನಿರೀಕ್ಷಿಸಿದ್ದರು. ಆದ್ರೆ, ಮತ್ತೊಮ್ಮೆ ಅಭಿಷೇಕ್​ಗೆ ಅವಕಾಶ ಕೊಟ್ಟ ಮ್ಯಾನೇಜ್​ಮೆಂಟ್​ ನಡೆಗೆ ಇದೀಗ ಭಾರೀ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪಾಕಿಸ್ತಾನದ ಆಟಗಾರ ಮೊಹಮ್ಮದ್​ ಅಮೀರ್ ಮೊದಲೇ ಆಡಿದ್ದ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿದೆ.

ಪಾಕ್​ ಆಟಗಾರ ಹೇಳಿದ್ದೇನು?

"ಅಭಿಷೇಕ್​ ಒಬ್ಬ ಅದ್ಭುತ ಬ್ಯಾಟರ್​ ಏನಲ್ಲ. ಆತ ಸ್ಲಾಗರ್​ (ಟೆಕ್ನಿಕ್​ ಇಲ್ಲದೆ ಆಡುವ ಕ್ರಿಕೆಟಿಗ). ಅಭಿಷೇಕ್​ರನ್ನು ನಾನು ನಮ್ಮದೇ ತಂಡದ ಬ್ಯಾಟರ್​ ಸೈಮ್​ ಆಯುಬ್​ಗೆ ಹೋಲಿಸುತ್ತೇನೆ. ಕಾರಣ, ಆಯುಬ್​ ಬಂದಾಗ ಅವನಿಗೆ ಯಾವ ಕಡೆ ಹೊಡೆಯಬೇಕು ಅನ್ನೋದೇ ಗೊತ್ತಿರಲಿಲ್ಲ. ಆಡಬಾರದ ಜಾಗದಲ್ಲಿ ಆಡ್ತಿದ್ದ. ಲೆಗ್​ಸೈಡ್​ ರನ್​ಗಳನ್ನು ಕಲೆಹಾಕುತ್ತಿದ್ದ. ಬಾಲ್​ ನಾಲ್ಕನೇ ಅಥವಾ ಐದನೇ ಸ್ಟಂಪ್​ನತ್ತ ಬಂದರೆ ಅವನಿಗೆ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಭಿಷೇಕ್ ಕೂಡ ಹಾಗೆಯೇ" ಎಂದಿದ್ದರು.
ಈಗ ಹೇಳಿರುವುದೇನು ಅಮೀರ್?
ಪಾಕಿಸ್ತಾನಿ ಟಿವಿಯಲ್ಲಿ ಮಾತನಾಡಿದ ಅಮೀರ್​, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧ. ಇಲ್ಲಿ ಅಭಿಷೇಕ್​ ಶರ್ಮರನ್ನು ಕೆಳಗೆ ಹಾಕಿ ಮಾತಾಡಬೇಕು ಅಥವಾ ಟೀಕಿಸಬೇಕು ಅಂತ ಸ್ಲಾಗರ್​ ಪರ ಬಳಸಲಿಲ್ಲ. ಅವರ ಬಗ್ಗೆ ಆ ರೀತಿ ಹೇಳುತ್ತಿದ್ದದ್ದು ಕೇವಲ ಒಬ್ಬ ಬೌಲರ್ ದೃಷ್ಟಿಯಲ್ಲಿ ಮಾತ್ರ. ಸೂಪರ್​-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಅವರ ವಿಫಲರಾಗಿದ್ದಾರೆ. ಕೇವಲ 14 ರನ್​ ಗಳಿಸಿದ್ದಾರೆ. ಇಷ್ಟು ರನ್​ ಅನ್ನು ಒಂದೇ ಸೈಡ್​ನಲ್ಲಿ ಅವರು ಕಲೆಹಾಕಿದ್ದಾರೆ. ಅಭಿಷೇಕ್ ಆಡಿದ್ದೆಲ್ಲ ಕೆಟ್ಟ ಬಾಲ್​ಗಳೇ. ಯಾವಾಗ ರಬಾಡ ಉತ್ತಮ ಬೌಲಿಂಗ್ ದಾಳಿಗೆ ಮುಂದಾದರೋ, ಆಗ ಹೇಗೆ ಆಡಬೇಕು ಅನ್ನೋದೇ ಆತನಿಗೆ ತಿಳಿಯಲಿಲ್ಲ ಎಂದರು.

ನನ್ನ ಮಾತು ಕೇಳೋದಾದ್ರೆ...

ಒಬ್ಬ ಹಿರಿಯ ಆಟಗಾರನಾಗಿ ನನ್ನ ಸಲಹೆಯನ್ನು ಅವರು ಕೇಳಿಸಿಕೊಳ್ಳುವುದಾದರೆ, ಈ ಸಂದೇಶ ಅಭಿಷೇಕ್​ಗೆ. ನಿಮ್ಮ ಟೆಕ್ನಿಕ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೆತ್ತಲಾಗಿದೆ. ತಾಳ್ಮೆ ಹಾಗೂ ಜಾಣ್ಮೆಯಿಂದ ಬಾಲ್​ಗಳನ್ನು ಆಡುವುದಾದರೆ ಉತ್ತಮ ಎಂದು ಅಮೀರ್ ಯುವ ಬ್ಯಾಟರ್​ಗೆ​ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net