

Marco Jansen : ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಮತ್ತು ಮೈನವಿರೇಳಿಸುವ ಕ್ಯಾಚ್ ಒಂದನ್ನು ಹಿಡಿಯುವ ಮೂಲಕ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್-ರೌಂಡರ್ ಮಾರ್ಕೋ ಜಾನ್ಸೆನ್ ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಜಾನ್ಸೆನ್ ಅವರು ಮೈದಾನದಲ್ಲಿ ನಡೆಸಿದ ಈ ಅದ್ಭುತ ಸಾಹಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದವರು ಇದು ದಶಕದ ಬೆಸ್ಟ್ ಕ್ಯಾಚ್ ಎಂದು ಕೊಂಡಾಡುತ್ತಿದ್ದಾರೆ.
ಆಸ್ಟ್ರೇಲಿಯಾ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಈ ರೋಚಕ ಘಟನೆ ನಡೆಯಿತು. ಆಸ್ಟ್ರೇಲಿಯಾದ ಬ್ಯಾಟರ್ ಮ್ಯಾಟ್ ರೆನ್ಷಾ, ಆಫ್ರಿಕಾ ವೇಗಿ ಜೆರಾಲ್ಡ್ ಕೊಟ್ಜಿ ಎಸೆದ ಶಾರ್ಟ್ ಪಿಚ್ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ ಕಡೆಗೆ ಬಲವಾಗಿ ಪುಲ್ ಶಾಟ್ ಬಾರಿಸಿದರು. ಆ ಚೆಂಡು ಬೌಂಡರಿ ಗೆರೆ ದಾಟುವುದು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಾರ್ಕೊ ಜಾನ್ಸೆನ್ ಮಿಂಚಿನ ವೇಗದಲ್ಲಿ ಓಡಿಬಂದು, ಚೆಂಡಿನ ಹಾದಿಯನ್ನು ಸರಿಯಾಗಿ ಅಂದಾಜಿಸಿ ತಮ್ಮ ಕೈಯನ್ನು ಸಂಪೂರ್ಣ ಮುಂದೆ ಚಾಚಿ ಕೇವಲ ಒಂದೇ ಕೈಯಿಂದ ಅದ್ಭುತವಾಗಿ ಕ್ಯಾಚ್ ಹಿಡಿದರು. ಬೌಂಡರಿ ಗೆರೆಯ ಹತ್ತಿರ ಅವರು ತೋರಿದ ಈ ಸಾಹಸ ಪ್ರದರ್ಶನ ಮೈದಾನದಲ್ಲಿದ್ದವರನ್ನು ಮತ್ತು ವೀಕ್ಷಕರನ್ನು ನಿಬ್ಬೆರಗಾಗಿಸಿತು.
ಈ ಪಂದ್ಯದಲ್ಲಿ ಮಾರ್ಕೊ ಜಾನ್ಸೆನ್ ಕೇವಲ ಒಂದು ಅದ್ಭುತ ಕ್ಯಾಚ್‌ಗೆ ಮಾತ್ರ ಸೀಮಿತವಾಗಿರಲಿಲ್ಲ, ಒಟ್ಟಾರೆ ನಾಲ್ಕು ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಕೇವಲ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್ನಲ್ಲೂ ನನಗೆ ಕೌಶಲ್ಯ ಇದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಾನ್ಸೆನ್, 75 ರನ್‌ಗಳನ್ನು ಗಳಿಸಿ ಮ್ಯಾಥ್ಯೂ ಬ್ರಿಟ್ಜ್ಕೆ ಜೊತೆ ಸೇರಿ 107 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ನೀಡಿದರು. ಒಟ್ಟಾರೆಯಾಗಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಅದ್ಭುತ ಫೀಲ್ಡಿಂಗ್‌ನೊಂದಿಗೆ ಜಾನ್ಸೆನ್ ಈ ಪಂದ್ಯದ ಸಂಪೂರ್ಣ ಹೀರೋ ಆಗಿ ಹೊರಹೊಮ್ಮಿದರು.
ಸಾಮಾಜಿಕ ಜಾಲತಾಣಗಳಲ್ಲಿ ಜಾನ್ಸೆನ್ ಅವರ ಈ ಕ್ಯಾಚ್ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್‌ಗಳ ಸಾಲಿನಲ್ಲಿ ನಿಲ್ಲುತ್ತದೆ ಎಂದು ನೆಟ್ಟಿಗರು ಬಣ್ಣಿಸುತ್ತಿದ್ದಾರೆ. ಕೆಲವರು ಇದನ್ನು 'ದಶಕದ ಅತ್ಯುತ್ತಮ ಕ್ಯಾಚ್' ಎಂದು ಮುಕ್ತಕಂಠದಿಂದ ಕೊಂಡಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಈ ಕದನದಲ್ಲಿ ಜಾನ್ಸೆನ್ ಅವರ ಆಲ್‌ರೌಂಡ್ ಆಟವೇ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲದೆ, ಇಡೀ ತಂಡದ ಗೆಲುವಿಗೆ ಜಾನ್ಸೆನ್ ಅವರ ಈ ಪ್ರದರ್ಶನವೇ ಪ್ರಮುಖ ಆಧಾರವಾಯಿತು.
ಪಂದ್ಯದ ಫಲಿತಾಂಶದ ಬಗ್ಗೆ ನೋಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 297 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಸೌತ್ ಆಫ್ರಿಕಾದ ಕರಾರುವಾಕ್ ಬೌಲಿಂಗ್ ದಾಳಿಗೆ ಸಿಲುಕಿ 41.1 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟ್ ಆಯಿತು. ಕೇಶವ್ ಮಹಾರಾಜ್ ಕೇವಲ 20 ರನ್ ನೀಡಿ 4 ವಿಕೆಟ್ ಕಿತ್ತು ಗೆಲುವಿನ ಪ್ರಮುಖ ಶಿಲ್ಪಿಯಾದರು. ಕಾರ್ಬಿನ್ ಬಾಷ್ ಹಾಗೂ ಬ್ಯೋರ್ನ್ ಫಾರ್ಚುಯಿನ್ ತಲಾ ಎರಡು ವಿಕೆಟ್ ಪಡೆದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 67 ರನ್‌ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ, (ಏಜೆನ್ಸೀಸ್).