ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್​ನಲ್ಲಿ ಹಲವು ದಾಖಲೆಗಳನ್ನು ಬರೆದ ಮಾನವ್​ ಸುಥಾರ್!

ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್​ನಲ್ಲಿ ಹಲವು ದಾಖಲೆಗಳನ್ನು ಬರೆದ ಮಾನವ್​ ಸುಥಾರ್!
ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್​ನಲ್ಲಿ ಹಲವು ದಾಖಲೆಗಳನ್ನು ಬರೆದ ಮಾನವ್​ ಸುಥಾರ್!
Published on

​ರಾಜಸ್ಥಾನದ 25 ವರ್ಷದ ಎಡಗೈ ಸ್ಪಿನ್ನರ್​ ಮಾನವ್ ಸುಥಾರ್ (

Manav Suthar

)​ ಭಾರತ ತಂಡದ ಪರ ಆಡಿದ ಮೊದಲ 2 ಟೆಸ್ಟ್​ ಪಂದ್ಯಗಳಲ್ಲೂ ಗೆಲುವಿನ ರೂವಾರಿ ಎನಿಸಿ ಗಮನಸೆಳೆದಿದ್ದಾರೆ. ಈ ಮೂಲಕ ಭಾರತೀಯ ಸ್ಪಿನ್​ ಬೌಲಿಂಗ್​ ವಿಭಾಗದ ಹೊಸ ತಾರೆ ಎನಿಸಿದ್ದಾರೆ. ಗಾಲೆ ಟೆಸ್ಟ್​ ಪಂದ್ಯದಲ್ಲಿ ಭಾರತದ 165 ರನ್​ ಗೆಲುವಿಗೆ ನೆರವಾದ ಅವರು, ಇದರೊಂದಿಗೆ ಹಲವಾರ ದಾಖಲೆಗಳನ್ನೂ ಬರೆದರು.

ಮಾನವ್​ ಸುಥಾರ್​ (131ಕ್ಕೆ 10) ವಿದೇಶಿ ನೆಲದ ಟೆಸ್ಟ್​ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್​ ನಿರ್ವಹಣೆ ತೋರಿದ ಭಾರತದ ಎಡಗೈ ಸ್ಪಿನ್ನರ್​ ಎನಿಸಿದರು. ಅವರು ಎಡಗೈ ಸ್ಪಿನ್​ ದಿಗ್ಗಜ ಬಿಷನ್​ ಸಿಂಗ್​ ಬೇಡಿ 1977ರಲ್ಲಿ ಆಸ್ಟ್ರೆಲಿಯಾದಲ್ಲಿ 194 ರನ್​ಗಳಿಗೆ 10 ವಿಕೆಟ್​ ಕಬಳಿಸಿದ್ದ ದಾಖಲೆ ಮುರಿದರು. ಆದರೆ ಬಾಪು ನಾಡಕರ್ಣಿ (43ಕ್ಕೆ 6) 1968ರಲ್ಲಿ ತೋರಿದ್ದ ಇನಿಂಗ್ಸ್​ ಒಂದರಲ್ಲಿ ಭಾರತದ ಎಡಗೈ ಸ್ಪಿನ್ನರ್​ನ ಶ್ರೇಷ್ಠ ನಿರ್ವಹಣೆಯ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ.
ಮಾನವ್​ ಸುಥಾರ್​ ಶ್ರೀಲಂಕಾದ ಟೆಸ್ಟ್​ ಪಂದ್ಯದಲ್ಲಿ 10 ವಿಕೆಟ್​ ಗೊಂಚಲು ಪಡೆದ 3ನೇ ಭಾರತೀಯರೆನಿಸಿದರು. ಹರ್ಭಜನ್​ ಸಿಂಗ್​ (2008ರಲ್ಲಿ 153ಕ್ಕೆ 10), ಆರ್​. ಅಶ್ವಿನ್​ (2015ರಲ್ಲಿ 160ಕ್ಕೆ 10) ಮೊದಲಿಬ್ಬರು ಸಾಧಕರು. ಸುಥಾರ್​ ಲಂಕಾದಲ್ಲಿ ಭಾರತೀಯ ಬೌಲರ್​ನ ಅತ್ಯುತ್ತಮ ಸಾಧನೆಯನ್ನೂ ದಾಖಲಿಸಿದರು.

ಮಾನವ್​ ಸುಥಾರ್​ ಭಾರತ ಪರ ಆಡಿದ ಮೊದಲ 2 ಟೆಸ್ಟ್​ಗಳಲ್ಲೂ 5 ವಿಕೆಟ್​ ಗೊಂಚಲು ಪಡೆದ 3ನೇ ಬೌಲರ್​. ನರೇಂದ್ರ ಹಿರ್ವಾನಿ ಮತ್ತು ಅಕ್ಷರ್​ ಪಟೇಲ್​ ಮೊದಲಿಬ್ಬರು.

ಮಾನವ್​ ಸುಥಾರ್​ ಭಾರತ ಪರ ಆಡಿದ ಮೊದಲ 2 ಟೆಸ್ಟ್​ಗಳಲ್ಲಿ 3ನೇ ಗರಿಷ್ಠ 17 ವಿಕೆಟ್​ ಕಬಳಿಸಿದ್ದಾರೆ. ಹಿರ್ವಾನಿ (24) ಮತ್ತು ಅಕ್ಷರ್​ (18) ಇದಕ್ಕಿಂತ ಅಧಿಕ ವಿಕೆಟ್​ ಗಳಿಸಿರುವ ಭಾರತೀಯರು. ಮಾನವ್​ ಸುಥಾರ್ ಹಾಲಿ ವರ್ಷ ಅಫ್ಘಾನಿಸ್ತಾನ ವಿರುದ್ಧ ಮೊಹಾಲಿಯಲ್ಲಿ ನಡೆದ ಏಕೈಕ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ್ದರು ಮತ್ತು 7 ವಿಕೆಟ್​ ಕಬಳಿಸಿ ಮಿಂಚಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net