ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್​ ಶುಭಾರಂಭ

ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್​ ಶುಭಾರಂಭ
ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್​ ಶುಭಾರಂಭ
Published on
ವಿಜಯವಾಣಿ ಸುದ್ದಿಜಾಲ ಮೈಸೂರು
ಭುವನ್​ ಎಂ.ರಾಜು(56 ರನ್​, 29 ಎಸೆತ, 3 ಬೌಂಡರಿ, 4 ಸಿಕ್ಸರ್​) ಹಾಗೂ ಎ.ರೋಹನ್​ ಪಾಟೀಲ್​(31) ಜೋಡಿಯ ಬಿರುಸಿನ ಆರಂಭ ಮತ್ತು ಕಡೆಯ 5 ಓವರ್​ಗಳಲ್ಲಿ ನಾಯಕ ಶುಭಾಂಗ್​ ಹೆಗ್ಡೆ(36* ರನ್​, 26 ಎಸೆತ, 2 ಬೌಂಡರಿ, 1 ಸಿಕ್ಸರ್​ ಮತ್ತು 44ಕ್ಕೆ2) ಹಾಗೂ ಪ್ರವಿಣ್​ ದುಬೆ(*32) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ (Bengaluru Blasters)​ ತಂಡ 5ನೇ ಆವೃತ್ತಿಯ ಮಹಾರಾಜ ಟ್ರೋಫಿ ( Maharaja Trophy KSCA T20 2026) ಕೆಎಸ್​ಸಿಎ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಶುಭಾರಂಭ ಕಂಡಿತು.
ವಿದ್ಯಾಕಾಶಿ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​ ಮೈದಾನದಲ್ಲಿ ಶನಿವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಟಾರ್​ ಬ್ಯಾಟರ್​ ಮನೀಷ್​ ಪಾಂಡೆ ನಾಯಕತ್ವದ ಮಾಜಿ ಚಾಂಪಿಯನ್​ ಗುಲ್ಬರ್ಗ ಮಿಸ್ಟಿಕ್ಸ್​ (Gulbarga Mystics) ತಂಡವನ್ನು 6 ವಿಕೆಟ್​ಗಳಿಂದ ಮಣಿಸಿತು. ಇದರೊಂದಿಗೆ 2022ನೇ ಆವೃತ್ತಿಯ ಫೈನಲ್​ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿತು.

ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್​ ತಂಡ ಪ್ರಖರ್​ ಚರ್ತುವೇದಿ (64 ರನ್​, 38 ಎಸೆತ, 6 ಬೌಂಡರಿ, 4 ಸಿಕ್ಸರ್​) ಹಾಗೂ ಆರವ್​ ಮಹೇಶ್​(63 ರನ್​, 41 ಎಸೆತ, 6 ಬೌಂಡರಿ, 3 ಸಿಕ್ಸರ್​) ಭರ್ಜರಿ ಅರ್ಧ ಶತಕದ ನೆರವಿನಿಂದ 5 ವಿಕೆಟ್​ಗೆ 201ರನ್​ ಪೇರಿಸಿತು. ಪ್ರತಿಯಾಗಿ ಬೆಂಗಳೂರು ತಂಡ ಭರ್ತಿ 20 ಓವರ್​ಗಲ್ಲಿ 4 ವಿಕೆಟ್​ಗೆ 202 ಬಾರಿಸಿ ಜಯದ ದಡ ಸೇರಿತು.

ಕಡೆಯ ಓವರ್​ನಲ್ಲಿ ಬೆಂಗಳೂರು ಗೆಲ್ಲಲು 11 ರನ್​ ಬೇಕಿತ್ತು. ಮೊದಲ ಎಸೆತ ಎದುರಿಸಿದ ಪ್ರವಿಣ್​ ದುಬೆ ಸಿಂಗಲ್​ ಪಡೆದರೆ, ನಂತರದ ಎಸೆತವನ್ನು ಬೌಂಡರಿ ಬಾರಿಸಿದ ನಾಯಕ ಶುಭಾಂಗ್​ ಚೇಸಿಂಗ್​ನ ಒತ್ತಡ ಕಡಿಮೆ ಮಾಡಿದರು. ನಂತರದ ಎಸೆತದಲ್ಲಿ ಸಿಂಗಲ್​ ಪಡೆದರು. ಬಳಿಕ ಸತತ ಎರಡು ಎಸೆತಗಳಲ್ಲಿ ತಲಾ ಎರಡು ರನ್​ ಕಲೆಹಾಕಿದ ಪ್ರವಿಣ್​ ದುಬೆ ಕಡೆ ಎಸೆತದಲ್ಲಿ ಸಿಂಗಲ್​ ಪಡೆದು ತಂಡದ ಗೆಲುವಿಗೆ ಕಾರಣರಾದರು.

ಗುಲ್ಬರ್ಗ ಮಿಸ್ಟಿಕ್ಸ್​: 5 ವಿಕೆಟ್​ಗೆ 201 (ಲೋಚನ್​ ಎಸ್​. ಗೌಡ 17, ಪ್ರಖರ್​ ಚರ್ತುವೇದಿ 64, ಆರವ್​ ಮಹೇಶ್​ 63, ಮನೀಶ್​ ಪಾಂಡೆ 19, ತಿಪ್ಪ ರೆಡ್ಡಿ 20*, ಶುಭಾಂಗ್​ ಹೆಗ್ಡೆ 44ಕ್ಕೆ 2, ಶ್ರೀವತ್ಸ ಆರ್​.ಆಚಾರ್​ 36ಕ್ಕೆ 2, ಸಮಿತ್​ 31ಕ್ಕೆ 1), ಬೆಂಗಳೂರು ಬ್ಲಾಸ್ಟರ್ಸ್​: 4 ವಿಕೆಟ್​ಗೆ 202 (ಭುವನ್​ ಎಂ.ರಾಜು 56, ರೋಹನ್​ 31, ಶ್ರೀಜಿತ್​ 22, ಶುಭಾಂಗ್​ 36*, ಸುಮಿತ್​ 11, ಪ್ರವಿಣ್​ 32*, ಪಾರಸ್​ 34ಕ್ಕೆ 2, ಮ್ಯಾಕ್ನೀಲ್​ ನೊರೊನ್ಹಾ 27ಕ್ಕೆ 1, ಧ್ರುವ್​ 29ಕ್ಕೆ). ಪಂದ್ಯಶ್ರೇಷ್ಠ: ಶುಭಾಂಗ್​ ಹೆಗ್ಡೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net