ಪಂತ್​ ಮಿಸ್ಟೇಕ್​ನಿಂದಲೇ ಸೋಲುಂಡಿತು ತಂಡ! ಐಪಿಎಲ್​ ರೂಲ್ಸ್​ಗೆ ಕಟ್ಟುಬಿದ್ದು ಎಡವಟ್ಟು ಮಾಡಿದ್ರಾ ಎಲ್​ಎಸ್​ಜಿ ಕ್ಯಾಪ್ಟನ್​? | LSG vs KKR

LSG vs KKR ಪಂದ್ಯ
LSG vs KKR ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ (ಏ.26) ಎಲ್​ಎಸ್​ಜಿ ಮತ್ತು ಕೆಕೆಆರ್​ ನಡುವೆ ಐಪಿಎಲ್​ ಪಂದ್ಯ
  • ಲಖನೌ ಸೂಪರ್ ಜೈಂಟ್ಸ್​ ಪರ ಐದು ವಿಕೆಟ್​ ಪಡೆದು ಮಿಂಚಿದ ವೇಗಿ ಮೊಹ್ಸಿನ್ ಖಾನ್
  • ಸೂಪರ್​ ಓವರ್​ ತಲುಪಿದ ರೋಚಕ ಪಂದ್ಯದಲ್ಲಿ ಕೆಕೆಆರ್​ಗೆ ಗೆಲುವು
  • 5 ವಿಕೆಟ್​ ಕಬಳಿಸಿದ ಬೌಲರ್​ಗೆ ಕೊಡಲಿಲ್ಲ ಎಲ್​ಎಸ್​ಜಿ ಬೌಲಿಂಗ್​
LSG vs KKR: 19ನೇ ಆವೃತ್ತಿಯ ಐಪಿಎಲ್​ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡವು, ನಿನ್ನೆ (ಏ.26) ನಡೆದ ಲಖನೌ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಸೂಪರ್​ ಓವರ್​ನಲ್ಲಿ ರೋಚಕ ಜಯ ಸಾಧಿಸಿದ್ದು ವಿಶೇಷ.
ಸೂಪರ್ ಓವರ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಮಣಿಸಿದ ಕೆಕೆಆರ್​ಗೆ​ ರಿಂಕು ಸಿಂಗ್ ಅವರ ಬ್ಯಾಟಿಂಗ್‌ನಲ್ಲಿ 83 ರನ್‌ಗಳ ಅಜೇಯ ಇನ್ನಿಂಗ್ಸ್ ಮತ್ತು ಫೀಲ್ಡಿಂಗ್‌ನಲ್ಲಿ ಹಿಡಿದ 5 ಕ್ಯಾಚ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇದಕ್ಕಾಗಿ, ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಸ್ವೀಕರಿಸಿದರು. ಆದರೆ, ಎಲ್​ಎಸ್​ಜಿ ಹೀನಾಯ ಸೋಲಿಗೆ ಕ್ಯಾಪ್ಟನ್ ರಿಷಭ್ ಪಂತ್​ ತೆಗೆದುಕೊಂಡ ಆ ನಿರ್ಧಾರವೇ ದೊಡ್ಡ ಕಾರಣ ಎಂಬ ಮಾತುಗಳು ಸದ್ಯ ಫ್ರಾಂಚೈಸಿ ಅಭಿಮಾನಿಗಳ ಭಾರೀ ಬೇಸರಕ್ಕೆ ಕಾರಣವಾಗಿದೆ. 
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು. ಕೆಕೆಆರ್ ಬ್ಯಾಟ್ಸ್‌ಮನ್‌ಗಳಲ್ಲಿ, ರಿಂಕು ಸಿಂಗ್ (ಅಜೇಯ 83 ರನ್​, 7 ಬೌಂಡರಿ, 51 ಎಸೆತಗಳಲ್ಲಿ 5 ಸಿಕ್ಸರ್) ಅರ್ಧಶತಕ ಗಳಿಸಿದರೆ, ಕ್ಯಾಮರೂನ್ ಗ್ರೀನ್ (34 ರನ್, 21 ಎಸೆತ, 3 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಇನ್ನು ಲಖನೌ ಬೌಲರ್‌ಗಳಲ್ಲಿ, ಮೊಹ್ಸಿನ್ ಖಾನ್ ಐದು ವಿಕೆಟ್‌ಗಳನ್ನು ಪಡೆದರೆ, ಜಾರ್ಜ್ ಲಿಂಡೆ ಒಂದು ವಿಕೆಟ್ ಕಬಳಿಸಿದರು.
ಈ ಗುರಿಯನ್ನು ಬೆನ್ನತ್ತಿದ ಎಲ್​ಎಸ್​ಜಿ ಪಡೆಗೆ ಪಂತ್​ (38 ಎಸೆತಗಳಲ್ಲಿ 42 ರನ್), ಐಡೆನ್ ಮಾರ್ಕ್ರಾಮ್ (27 ಎಸೆತಗಳಲ್ಲಿ 31 ರನ್), ಮತ್ತು ಆಯುಷ್ ಬದೋನಿ (19 ಎಸೆತಗಳಲ್ಲಿ 24 ರನ್) ಬ್ಯಾಟಿಂಗ್​ ಪ್ರದರ್ಶನದಿಂದ ಎದುರಾಳಿ ತಂಡ ನೀಡಿದ ಗುರಿಯನ್ನು ಸಮಬಲ ಮಾಡುವ ಮೂಲಕ ಸೂಪರ್ ಓವರ್‌ಗೆ ಕಾರಣವಾಯಿತು. ಸೂಪರ್ ಓವರ್‌ನಲ್ಲಿ, ಸ್ಪಿನ್ನರ್ ಸುನಿಲ್ ನರೈನ್ ಅದ್ಭುತ ಬೌಲಿಂಗ್ ಮಾಡಿದರು. ಎರಡು ವಿಕೆಟ್ ಕಳೆದುಕೊಂಡು ಕೇವಲ 1 ರನ್ ಗಳಿಸಲಷ್ಟೇ ಎಲ್​ಎಸ್​ಜಿಗೆ ಸಾಧ್ಯವಾಯಿತು.
ಕೇವಲ 2 ರನ್​ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್​ ಬ್ಯಾಟರ್​ಗಳನ್ನು ಕಟ್ಟಿಹಾಕಲು ಎಡವಿದ ಎಲ್​ಎಸ್​ಜಿ, ಐದು ವಿಕೆಟ್​ ಪಡೆದಿದ್ದ ಮೊಹ್ಸಿನ್​ ಅವರನ್ನು ಬಿಟ್ಟು, ವೇಗಿ ಪ್ರಿನ್ಸಿ ಯಾದವ್​ಗೆ ಸೂಪರ್​ ಓವರ್​ ಜವಾಬ್ದಾರಿ ನೀಡಿದರು. ಆದರೆ, ಮೊದಲ ಎಸೆತದಲ್ಲಿ ಅವರು ಬೌಂಡರಿ ಕೊಡುವ ಮೂಲಕ ರಹಾನೆ ಪಡೆಯ ಗೆಲುವಿಗೆ ಕಾರಣರಾದರು. ಕೇವಲ ಒಂದೇ ಬಾಲ್​ನಲ್ಲಿ ಗೆಲುವು ನಿರ್ಧಾರವಾಗಿದ್ದು, ಲಖನೌ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿತು.  

ಐಪಿಎಲ್​ ನಿಯಮವೇ ಕಾರಣ?

ಈ ಪಂದ್ಯದಲ್ಲಿ, ಎಲ್​ಎಸ್​ಜಿ ತಂಡವು ಐದು ವಿಕೆಟ್ ಪಡೆದು ಉತ್ತಮ ಫಾರ್ಮ್‌ನಲ್ಲಿರುವ ಮೊಹ್ಸಿನ್ ಖಾನ್ ಬದಲಿಗೆ ಪ್ರಿನ್ಸ್ ಯಾದವ್ ಅವರನ್ನು ಸೂಪರ್ ಓವರ್‌ನಲ್ಲಿ ಕಣಕ್ಕಿಳಿಸಲು ನಿರ್ಧರಿಸಿತು. ಇದಕ್ಕೆ ಕಾರಣ ಐಪಿಎಲ್ ನಿಯಮ ಎನ್ನಲಾಗಿದೆ. ಬೌಲಿಂಗ್ ಕೋಟಾ ಮುಗಿದ ನಂತರ, ಮೋಸಿನ್ ಖಾನ್ ಬದಲಿಗೆ ಕ್ಯಾಮರೂನ್ ಗ್ರೀನ್ ಪ್ರಭಾವಿ ಆಟಗಾರನಾಗಿ ಮೈದಾನಕ್ಕೆ ಬಂದರು. ಹೀಗಾಗಿ, ಪಂದ್ಯದಲ್ಲಿ ಮೊಹ್ಸಿನ್​ ಪ್ರಯಾಣ ಅಂತ್ಯಗೊಂಡಿತು. ಆದ್ದರಿಂದ, ಅವರು ಸೂಪರ್ ಓವರ್‌ನಲ್ಲಿ ಬೌಲಿಂಗ್ ಮಾಡಲು ಅರ್ಹತೆ ಪಡೆಯಲಿಲ್ಲ,(ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net