ರಸಿಖ್ ಮಾರಕ ದಾಳಿ, ಕೊಹ್ಲಿ ಅಬ್ಬರ; ಲಖನೌ ವಿರುದ್ಧ ಆರ್​​ಸಿಬಿಗೆ 5 ವಿಕೆಟ್‌ಗಳ ಭರ್ಜರಿ ಗೆಲುವು! | RCB VS LSG

RCB VS LSG
RCB VS LSG
Published on
RCB VS LSG: ತವರು ನೆಲದ ಅಭಿಮಾನಿಗಳ ಹರ್ಷೋದ್ಗಾರದ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಖನೌ ಸೂಪರ್ ಜಾಯಿಂಟ್ಸ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ 5 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಬುಧವಾರ ನಡೆದ ಐಪಿಎಲ್ 2026ರ ಈ ರೋಚಕ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಮೆರೆದ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ವಿರಾಟ್ ಕೊಹ್ಲಿ ಅಬ್ಬರ: ಸುಲಭವಾದ ಗುರಿ ಬೆನ್ನಟ್ಟಿದ ಆರ್‌ಸಿಬಿ

147 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ನೀಡಿದರು. ಪ್ರಾರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡರೂ, ಕೊಹ್ಲಿ ತಮ್ಮ ಎಂದಿನ ಶೈಲಿಯಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 34 ಎಸೆತಗಳಲ್ಲಿ 49 ರನ್ (6 ಬೌಂಡರಿ, 1 ಸಿಕ್ಸರ್) ಬಾರಿಸಿದ ಕೊಹ್ಲಿ ಅರ್ಧಶತಕದ ಹೊಸ್ತಿಲಲ್ಲಿ ಔಟಾದರು. ಇದಾದ ಬಳಿಕ ಬಂದ ಜಿತೇಶ್ ಶರ್ಮಾ (23 ರನ್, 9 ಎಸೆತ) ಮತ್ತು ನಾಯಕ ರಜತ್ ಪಾಟಿದಾರ್ (27 ರನ್, 13 ಎಸೆತ) ಲಖನೌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಅಂತಿಮವಾಗಿ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಜೋಡಿ 29 ಎಸೆತಗಳು ಬಾಕಿ ಇರುವಂತೆಯೇ ಜಯ ತಂದುಕೊಟ್ಟರು.

ಲಖನೌ ಬ್ಯಾಟರ್‌ಗಳ ವೈಫಲ್ಯ: ರಸಿಖ್ ಸಲಾಂ ಮಾರಕ ದಾಳಿ

ಟಾಸ್ ಗೆದ್ದ ಬೆಂಗಳೂರು ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರವನ್ನು ಸರಿ ಎಂದು ಸಾಬೀತುಪಡಿಸಿದ ಬೌಲರ್‌ಗಳು ಲಖನೌ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಯುವ ವೇಗಿ ರಸಿಖ್ ಸಲಾಂ ದಾರ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಕೇವಲ 24 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದ ಅವರು ಲಖನೌ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಲಖನೌ ಪರ ಮಿಚೆಲ್ ಮಾರ್ಷ್ (40 ರನ್) ಮತ್ತು ಮುಕುಲ್ ಚೌಧರಿ (39 ರನ್) ಸ್ವಲ್ಪ ಮಟ್ಟದ ಹೋರಾಟ ನೀಡಿದರೂ, ಉಳಿದ ಬ್ಯಾಟರ್‌ಗಳಿಂದ ಬೆಂಬಲ ಸಿಗಲಿಲ್ಲ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ 27 ರನ್‌ಗಳಿಗೆ 3 ವಿಕೆಟ್ ಕಿತ್ತು ಅನುಭವದ ಆಟ ಪ್ರದರ್ಶಿಸಿದರು. ಅಂತಿಮವಾಗಿ ಲಖನೌ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net