ಏಪ್ರಿಲ್&ಮೇ ಸಮಯದಲ್ಲೇ ನಡೆಯಲಿರುವ ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆಯ ವೇಳಾಪಟ್ಟಿ ಇನ್ನೂ ಪ್ರಕಟವಾಗದಿರುವ ಕಾರಣ ಬಿಸಿಸಿಐ, ಐಪಿಎಲ್ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಐಪಿಎಲ್ ಪಂದ್ಯ ನಿಗದಿಯಾದ ಸಮಯದಲ್ಲೇ ಕೋಲ್ಕತ, ಚೆನ್ನೈ, ಗುವಾಹಟಿಯಲ್ಲಿ ಪಂದ್ಯಗಳು ನಿಗದಿಯಾದರೆ, ಭದ್ರತಾ ಕಾರಣದಿಂದ ಪಂದ್ಯ ಸ್ಥಳಾಂತರಿಸಬೇಕಾಗುವ ತಾಪತ್ರಯವನ್ನು ತಪ್ಪಿಸುವುದು ಇದರ ಉದ್ದೇಶ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಅದಕ್ಕೆ ತಕ್ಕಂತೆ ಐಪಿಎಲ್ ಪಂದ್ಯ ನಿಗದಿಪಡಿಸುವುದು ಬಿಸಿಸಿಐ ಯೋಜನೆ. ಆದರೆ ಚುನಾವಣಾ ಆಯೋಗ ಯಾವಾಗ ದಿನಾಂಕ ಘೋಷಿಸಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಹೀಗಾಗಿ ಬಿಸಿಸಿಐ, ಎರಡು ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೊಳಿಸಲು ಚಿಂತಿಸಿದೆ. 2019ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲೂ ಬಿಸಿಸಿಐ ಇದೇ ರೀತಿ 2 ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿ ಪ್ರಕಟಿಸಿತ್ತು. ಮಾರ್ಚ್ ಮೊದಲ ವಾರದಲ್ಲಿ ಐಪಿಎಲ್ 19ನೇ ಆವೃತ್ತಿಯ ಭಾಗಶಃ ಅಥವಾ ಸಂಭಾವ್ಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ.