ವೈಭವ್ ಸೂರ್ಯವಂಶಿ​ ಬೇಕಿದ್ರೆ ಕಾಯಲಿ... ಸಂಜು ಸ್ಯಾಮ್ಸನ್​ ಬೆನ್ನಿಗೆ ನಿಂತ ಮಾಜಿ ಬಿಸಿಸಿಐ ಆಯ್ಕೆಗಾರ | Vaibhav Sooryavnshi

 ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ
ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ಸಂಜು ಸ್ಯಾಮ್ಸನ್​ ಬದಲಿಗೆ ವೈಭವ್​ಗೆ ಅವಕಾಶ
  • ವೈಭವ್​ ಬದಲಿಗೆ ಸಂಜುರನ್ನೇ ಆಡಿಸಿ ಎಂದ ಮಾಜಿ ಬಿಸಿಸಿಐ ಆಯ್ಕೆಗಾರ
Vaibhav Sooryavnshi: ಐರ್ಲೆಂಡ್​ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್​ ವಾಶ್​ ಆದ ಟೀಮ್ ಇಂಡಿಯಾ, ಈಗ ಇಂಗ್ಲೆಂಡ್​ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದೆ. ಇದರಲ್ಲಿ ಗೆಲುವು ಕಾಣಲು ಸಾಧ್ಯವಾಗದಿದ್ದರೂ ಐರಿಶ್​ ಪಡೆ ಎದುರು ತೋರಿದ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನೇ ಆಂಗ್ಲರ ಮಣ್ಣಿನಲ್ಲಿ ಮುಂದುವರಿಸಿರುವ ಶ್ರೇಯಸ್​ ಅಯ್ಯರ್​ ಪಡೆಗೆ ಸದ್ಯ ಕ್ರಿಕೆಟ್​ ಪ್ರೇಮಿಗಳಿಂದ ಮಹತ್ವದ ಬದಲಾವಣೆ ಮಾಡಿಕೊಳ್ಳುವಂತೆ ಒತ್ತಾಯಗಳು ಕೇಳಿಬಂದಿವೆ.
ಈಗಾಗಲೇ ಆಡಿರುವ ಮೂರು ಟಿ20 ಪಂದ್ಯಗಳಲ್ಲಿ ಒಂದಂಕಿ ರನ್​ಗಳನ್ನು ಬಾರಿಸಿರುವ ಸಂಜು ಸ್ಯಾಮ್ಸನ್​, ತಮ್ಮ ಸಹ ಆರಂಭಿಕ ಬ್ಯಾಟರ್​ ಅಭಿಷೇಕ್ ಶರ್ಮ ಅವರಿಗೆ ಸರಿಯಾದ ಸಾಥ್​ ನೀಡುತ್ತಿಲ್ಲ. ಇದು ಕ್ರಿಕೆಟ್​ ಪ್ರೇಮಿಗಳನ್ನು ಕೆರಳಿಸಿದೆ. ಮೊದಲೇ ಟೀಮ್ ಇಂಡಿಯಾ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಗೆ ಅವಕಾಶ ನೀಡದ ಮ್ಯಾನೇಜ್​ಮೆಂಟ್​ ವಿರುದ್ಧ ಕಿಡಿಕಾರಿರುವ ಫ್ಯಾನ್ಸ್​, ಸ್ಯಾಮ್ಸನ್​ರ ಫ್ಲಾಪ್​ ಶೋ ನಡುವೆಯೂ ವೈಭವ್​ಗೆ ಚಾನ್ಸ್ ಕೊಡದೆ, ಇನ್ನೂ ಸಂಜುರನ್ನೇ ಆಡಿಸುತ್ತಿರುವುದು ತಾಳ್ಮೆಯನ್ನು ಕಳೆದುಕೊಳ್ಳುವಂತೆ ಮಾಡಿದೆ.
ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯ ಓಕೆ. ಆದರೆ, ಎರಡನೇ ಟಿ20 ಪಂದ್ಯದಿಂದ ಯಾವುದೇ ಕಾರಣಕ್ಕೂ ಸಂಜುಗೆ ಅವಕಾಶ ಕೊಡಬೇಡಿ ಎಂದು ಫ್ಯಾನ್ಸ್​, ಹೆಡ್​ ಕೋಚ್​ ಗೌತಮ್ ಗಂಭೀರ್​ ಮ್ಯಾನೇಜ್​ಮೆಂಟ್​ ಮೇಲೆ ಒತ್ತಾಯ ಹೇರಿದ್ದಾರೆ. ಕೆಲವರು, ವೈಭವ್​ರನ್ನು ಇನ್ನೂ ಆಡಿಸಲು ಹಿಂದೇಟು ಹಾಕಿದರೆ ಖಂಡಿತ ಐರ್ಲೆಂಡ್​ ಎದುರು ಕ್ಲೀನ್ ​ಸ್ವೀಪ್​ ಆದಂತೆಯೇ ಆಂಗ್ಲರ ವಿರುದ್ಧವೂ ವೈಟ್​ ವಾಶ್​ ಆಗ್ತಾರೆ ಎಂದು ಟೀಕಿಸಿದ್ದಾರೆ.
ಈ ಟೀಕೆಗಳ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಬೆನ್ನಿಗೆ ನಿಂತ ಬಿಸಿಸಿಐನ ಮಾಜಿ ಆಯ್ಕೆಗಾರ ಸಬಾ ಕರೀಮ್, ಮೂರು ಪಂದ್ಯಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಕಳಪೆ ಪ್ರದರ್ಶನ ನೀಡಿದ್ದರೂ ಯಾವುದೇ ಕಾರಣಕ್ಕೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜುರನ್ನು ಮುಂದಿನ ಪಂದ್ಯದಿಂದ ಕೈಬಿಡಬಾರದು. ಈ ಹಂತದಲ್ಲಿ ಸ್ಯಾಮ್ಸನ್ ತುಂಬಾ ಮುಖ್ಯ. ಆತನೊಬ್ಬ ಅದ್ಭುತ ಕ್ರಿಕೆಟಿಗ ಮತ್ತು ಪಂದ್ಯ ವಿಜೇತ ಆಟಗಾರ. ಐಪಿಎಲ್​ ಮತ್ತು ಅದಕ್ಕೂ ಮೊದಲು, 2026ರ ಟಿ20 ವಿಶ್ವಕಪ್‌ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸ್ಟಾರ್​ ಬ್ಯಾಟರ್​. ಹೀಗಿರುವಾಗ, ಹೇಗೆ ಅವರನ್ನು ತೆಗೆಯುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ವೈಭವ್​ ಕಾಯಲಿ...

ವೈಭವ್​ ಸೂರ್ಯವಂಶಿ ಇನ್ನೂ ಚಿಕ್ಕವನು. ತಂಡದಲ್ಲಿ ಸೇರಿಕೊಳ್ಳುವ ಮೂಲಕ ಬಹಳಷ್ಟು ಕಲಿಯುತ್ತಿದ್ದಾರೆ. ಈ ಸಮಯದಲ್ಲಿ, ವೈಭವ್​​ಕಲಿಕೆಗೆ ಆದ್ಯತೆ ನೀಡಬೇಕು ಮತ್ತು ತನ್ನ ಪಾಲಿಗೆ ಅವಕಾಶಗಳು ಬರುವವರೆಗೂ ಕಾಯಬೇಕು. ಆತ ತುಂಬಾ ಪ್ರತಿಭಾನ್ವಿತ ನಿಜ. ಆದರೆ, ಟೀಮ್ ಇಂಡಿಯಾ ಸ್ಥಾನಗಳಿಗೆ ಪೈಪೋಟಿ ಇದ್ದಾಗ, ನೀವು ನಿಮ್ಮ ಸರದಿಗಾಗಿ ಕಾಯಲೇ ಬೇಕು" ಎಂದು ಹೇಳಿದ್ದಾರೆ. ಕರೀಮ್​ ಅವರ ಈ ಮಾತುಗಳು ಸದ್ಯ ವಂಡರ್​ ಕಿಡ್​ ಅಭಿಮಾನಿಗಳ ಪಿತ್ತವನ್ನು ನೆತ್ತಿಗೇರಿಸಿದೆ ಎಂಬುದರಲ್ಲಿ ಅನುಮಾನವೇ ಬೇಡ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net