ವೈಭವ್ ಸೂರ್ಯವಂಶಿ ಇನ್ನಷ್ಟು ಅಪಾಯಕಾರಿ ಆಗಬಲ್ಲರು: ಜಸ್ಟಿನ್​ ಲ್ಯಾಂಗರ್​ ಭವಿಷ್ಯ!

ವೈಭವ್ ಸೂರ್ಯವಂಶಿ ಇನ್ನಷ್ಟು ಅಪಾಯಕಾರಿ ಆಗಬಲ್ಲರು: ಜಸ್ಟಿನ್​ ಲ್ಯಾಂಗರ್​ ಭವಿಷ್ಯ!
ವೈಭವ್ ಸೂರ್ಯವಂಶಿ ಇನ್ನಷ್ಟು ಅಪಾಯಕಾರಿ ಆಗಬಲ್ಲರು: ಜಸ್ಟಿನ್​ ಲ್ಯಾಂಗರ್​ ಭವಿಷ್ಯ!
Published on
ಜೈಪುರ: ಪ್ಯಾಟ್​ ಕಮ್ಮಿನ್ಸ್​ ಬಳಿಕ ಆಸ್ಟ್ರೆಲಿಯಾದ ಮತ್ತೋರ್ವ ಕ್ರಿಕೆಟ್​ ತಾರೆ, ಭಾರತದ ಜೆನ್​ ಝೀ ಬ್ಯಾಟಿಂಗ್​ ಸೆನ್ಸೇಶನ್​ ವೈಭವ್​ ಸೂರ್ಯವಂಶಿ (Vaibhav Sooryavanshi) ಬ್ಯಾಟಿಂಗ್​ಗೆ ಮನಸೋತಿದ್ದಾರೆ. ಅವರೇ 100ಕ್ಕೂ ಅಧಿಕ ಟೆಸ್ಟ್​ ಆಡಿರುವ ಮಾಜಿ ಬ್ಯಾಟರ್​ ಜಸ್ಟಿನ್​ ಲ್ಯಾಂಗರ್ (Justin Langer)​. ಲಖನೌ ಸೂಪರ್​ಜೈಂಟ್ಸ್​ ತಂಡದ ಮುಖ್ಯ ಕೋಚ್​ ಆಗಿರುವ ಲ್ಯಾಂಗರ್​, ಮಂಗಳವಾರ 15 ವರ್ಷದ ವೈಭವ್​ ತಮ್ಮ ತಂಡದ ವಿರುದ್ಧವೇ ಆಡಿದ ಮ್ಯಾಚ್​ ವಿನ್ನಿಂಗ್​ ಆಟವನ್ನು ನೋಡಿ ಬೆರಗಾಗಿದ್ದಾರೆ. ಅಲ್ಲದೆ ವೈಭವ್​ ಆಟ ಮುಂದೆ ಇನ್ನಷ್ಟು ಸುಧಾರಣೆ ಕಾಣಲಿದೆ ಮತ್ತು ವಿಶ್ವ ಕ್ರಿಕೆಟ್​ಗೆ ಭಯ ಹುಟ್ಟಿಸಲಿದ್ದಾರೆ ಎಂದು ಭವಿಷ್ಯವನ್ನೂ ನುಡಿದಿದ್ದಾರೆ.
ಲಖನೌದ 220 ರನ್​ ಸವಾಲಿಗೆ ಪ್ರತಿಯಾಗಿ ರಾಜಸ್ಥಾನ, 19.1 ಓವರ್​ಗಳಲ್ಲಿ 3 ವಿಕೆಟ್​ಗೆ 225 ರನ್​ ಗಳಿಸಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿ, ಪ್ಲೇಆಫ್​​ ಆಸೆ ಹೆಚ್ಚಿಸಿಕೊಂಡಿದೆ. ವೈಭವ್​ 38 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್​ ಸಹಿತ 93 ರನ್​ ಸಿಡಿಸಿ ಆರ್​ಆರ್​ ಗೆಲುವಿನ ರೂವಾರಿ ಎನಿಸಿದರು. ಯಶಸ್ವಿ ಜೈಸ್ವಾಲ್​ (43) ಮತ್ತು ಧ್ರುವ ಜುರೆಲ್​ (53*) ಉತ್ತಮ ಸಾಥ್​ ನೀಡಿದರು.

ಪಂದ್ಯದ ಬಳಿಕ ವೈಭವ್​ ಬಳಿ ಹೋಗಿ ತಮ್ಮ ಜತೆ ಫೋಟೋಗೆ ಪೋಸ್​ ನೀಡುವಂತೆ ಕೇಳಿಕೊಳ್ಳುವಷ್ಟರ ಮಟ್ಟಿಗೆ ಅವರ ಅಭಿಮಾನಿಯಾದ ಲ್ಯಾಂಗರ್​, 35 ವರ್ಷಗಳ ನನ್ನ ಕ್ರಿಕೆಟ್​ ನಂಟಿನಲ್ಲಿ ಕೆಲ ಅಮೋ ಆಟಗಾರರನ್ನು ನೋಡಿರುವೆ. ಆದರೆ ಇಷ್ಟು ಸಣ್ಣ ವಯಸ್ಸಿನಲ್ಲೇ ಈ ರೀತಿ ಬ್ಯಾಟಿಂಗ್​ ಮಾಡುತ್ತಿರುವುದನ್ನು ನೋಡಿದರೆ ಬೆರಗಾಗುತ್ತಿದೆ. ಕಳೆದ ಪಂದ್ಯದಲ್ಲಿ ಮಿಚೆಲ್​ ಸ್ಟಾರ್ಕ್​ಗೂ ಆತ ಸಿಕ್ಸರ್​ ಸಿಡಿಸಿದ್ದನ್ನು ನೋಡಿದ್ದೆ. ಮಾಜಿ ಬ್ಯಾಟರ್​ ಆಗಿ ನನಗೂ ಬ್ಯಾಟಿಂಗ್​ ಎಷ್ಟು ಕಷ್ಟವಿದೆ ಎಂಬುದು ಗೊತ್ತಿದೆ. ವೈಭವ್​ಗೆ ಹೇಗೆ ರನ್​ ಗಳಿಸಬೇಕೆಂದು ಗೊತ್ತಿದೆ. ಆತನ ಬ್ಯಾಟಿಂಗ್​ ನೋಡಿದ್ದೇ ನನ್ನ ಭಾಗ್ಯ' ಎಂದು ಕೊಂಡಾಡಿದ್ದಾರೆ. ಅಲ್ಲದೆ, ವೈಭವ್​ರ ಅತ್ಯುತ್ತಮ ಆಟ ಇನ್ನೂ ಬಂದಿಲ್ಲ. ಭವಿಷ್ಯದಲ್ಲಿ ಅವರು ಇನ್ನಷ್ಟು ಅಪಾಯಕಾರಿ ಆಗಲಿದ್ದಾರೆ ಎಂದೂ ಲ್ಯಾಂಗರ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net