2011ರ ಐಪಿಎಲ್​ನಲ್ಲಿ ನಿಜಕ್ಕೂ ಆ ಫ್ರಾಂಚೈಸಿ ಮಾಲೀಕ ಮಾಟ-ಮಂತ್ರದಲ್ಲಿ ತೊಡಗಿದ್ದ! ಲಲಿತ್ ಮೋದಿ ಶಾಕಿಂಗ್​ ಹೇಳಿಕೆ

ಐಪಿಎಲ್​ ಪಂದ್ಯದಲ್ಲಿ ಮಾಟ-ಮಂತ್ರದ ಗೊಂದಲ
ಐಪಿಎಲ್​ ಪಂದ್ಯದಲ್ಲಿ ಮಾಟ-ಮಂತ್ರದ ಗೊಂದಲ
Published on

ಪ್ರಮುಖ ಮುಖ್ಯಾಂಶಗಳು

  • ಸಿಎಸ್​ಕೆ ಮತ್ತು ಎಸ್​ಆರ್​ಎಚ್​ ನಡುವಿನ ಐಪಿಎಲ್​ ಪಂದ್ಯ
  • ಸನ್​ರೈಸರ್ಸ್​ ಹೈದರಾಬಾದ್​ ಫ್ಯಾನ್​ ನಡೆಗೆ ಸಿಎಸ್​ಕೆ ದೂರಿನ ಪತ್ರ
  • ಇದೊಂದು ಫೇಕ್​ ಲೆಟರ್​ ಎಂದ ಲಲಿತ್ ಮೋದಿ
  • 2011ರಲ್ಲಿ ಆ ಫ್ರಾಂಚೈಸಿ ಮಾಲೀಕ ನಿಜಕ್ಕೂ ಮಾಟ-ಮಂತ್ರದಲ್ಲಿ ತೊಡಗಿದ್ದ ಎಂಬ ಆರೋಪ
ಹೈದರಾಬಾದ್​: ಶನಿವಾರ (ಏ.18) ಹೈದರಾಬಾದ್‌ನ ಉಪ್ಪಾಲ್​ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದಲ್ಲಿ ಇಶಾನ್​ ಕಿಶನ್​ ಪಡೆ 10 ರನ್​ಗಳ ರೋಚಕ ಗೆಲುವು ದಾಖಲಿಸಿತು. ಆದರೆ, ಪಂದ್ಯದ ವೇಳೆ ಎಸ್​ಆರ್​ಎಚ್​ ಅಭಿಮಾನಿಯೊಬ್ಬ ನಿಂಬೆ ಹಣ್ಣು ಹಿಡಿದು ಪಠಿಸಿದ ಮಂತ್ರದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗೊಂದಲ, ವಿವಾದ ಸೃಷ್ಟಿಸಿದೆ.  

ದುಬೆ ವಿಕೆಟ್​ ಪತನ

ಸಿಎಸ್​ಕೆ ಚೇಸಿಂಗ್​ನಲ್ಲಿದ್ದ ವೇಳೆ ಎಸ್​ಆರ್​ಎಚ್​ ಅಭಿಮಾನಿಗಳು ಕೈಯಲ್ಲಿ ನಿಂಬೆ ಹಣ್ಣು ಹಿಡಿದು, ಯಾವುದೋ ಮಂತ್ರ ಹೇಳುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ತಂಡವನ್ನು ಗೆಲ್ಲಿಸಲು ಕ್ರೀಸ್​ಗೆ ಅಂಟಿ ನಿಂತಿದ್ದ ಶಿವಂ ದುಬೆ, ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿದ್ದರು. ಇದೇ ವೇಳೆ, ಮೈದಾನದಲ್ಲಿದ್ದ ಸನ್​ರೈಸರ್ಸ್​ ಹೈದರಾಬಾದ್​ ಅಭಿಮಾನಿಯೊಬ್ಬರು, ಕೈಯಲ್ಲಿ ನಿಂಬೆ ಹಣ್ಣು ಹಿಡಿದು, ಮಂತ್ರ ಹೇಳಿಬಿಟ್ಟ ಕೂಡಲೇ ದುಬೆ ಅವರ ವಿಕೆಟ್​ ಪತನವಾಗುತ್ತದೆ. ಇದನ್ನು ಕಂಡ ಕ್ಷಣ ಅವರು ತೀರ ಖುಷಿಯಿಂದ ಸಂಭ್ರಮಿಸುತ್ತಾರೆ. ಈ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ ಸಿಎಸ್​ಕೆ ಬಿಸಿಸಿಐಗೆ ಪತ್ರದ ಮೂಲಕ ದೂರು ನೀಡಿದೆ ಎನ್ನಲಾದ ಒಂದು ಲೆಟರ್​ ಕೂಡ ಹರಿದಾಡಿದೆ.
ಪಂದ್ಯದ ವೇಳೆ ಸನ್​ರೈಸರ್ಸ್​ ಹೈದರಾಬಾದ್​ ಅಭಿಮಾನಿಗಳು ಇಂತಹ ಕೆಲಸ ಮಾಡಿರುವುದು ಒಪ್ಪುವಂತದ್ದಲ್ಲ. ಈ ನಡೆ ನಮಗೆ ಬೇಸರ ತಂದಿದೆ ಎಂದು ಸಿಎಸ್​ಕೆ ದೂರಿನ ಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ, ಅಸಲಿಗೆ ಈ ಪತ್ರ ಅಧಿಕೃತ ಅಲ್ಲವೇ ಅಲ್ಲ ಎನ್ನಲಾಗಿದೆ. ಕಾರಣ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ಈ ಕುರಿತಂತೆ ತಮ್ಮ ಯಾವುದೇ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ದೂರನ್ನು ವ್ಯಕ್ತಪಡಿಸಿಲ್ಲ.    

ಫೇಕ್​ ದೂರಿನ ಲೆಟರ್​

ಮತ್ತೊಂದೆಡೆ, ಮಾಜಿ ಕ್ರಿಕೆಟಿಗ, ಐಪಿಎಲ್​ ಅಧ್ಯಕ್ಷರಾದ ಲಲಿತ್ ಮೋದಿ ಪ್ರತಿಕ್ರಿಯಿಸಿ, ಎಸ್​ಆರ್​ಎಚ್​ ಅಭಿಮಾನಿಯೊಬ್ಬರು ಮೈದಾನದಲ್ಲಿ ನಿಂಬೆ ಹಣ್ಣು ಹಿಡಿದು ಮಾಟ-ಮಂತ್ರದ ದೃಶ್ಯ ಎಂದು ಹೇಳಲಾದ ವಿಡಿಯೋವನ್ನು ನಾನೂ ಕೂಡ ನೋಡಿದೆ. ಅಸಲಿಗೆ, ಇಲ್ಲಿ ಸಿಎಸ್​ಕೆ ದೂರು ಸಲ್ಲಿಸಿದೆ ಎಂದು ಹರಿದಾಡುತ್ತಿರುವ ಪತ್ರ ಸುಳ್ಳು. ಇದೊಂದು ಫೇಕ್ ಲೆಟರ್ ಆಗಿದೆ ಎಂದು ಹೇಳಿದ್ದಾರೆ. 
ಇದು ಸುಳ್ಳು. ಆದರೆ, ಇದೇ ರೀತಿ 2011ರ ಐಪಿಎಲ್​ ಲೀಗ್​ನಲ್ಲಿ ಒಬ್ಬ ಫ್ರಾಂಚೈಸಿಯ ಮಾಲೀಕ ಮಾಟ-ಮಂತ್ರದಲ್ಲಿ ತೊಡಗಿದ್ದರು ಎಂದು ಲಲಿತ್​ ಆರೋಪಿಸಿರುವುದು ಸದ್ಯ ಹಲವರ ಹುಬ್ಬೇರಿಸಿದೆ. ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿರುವ ಲಲಿತ್​ ಮೋದಿ, ನನಗೆ ನೆನಪಿದೆ. ಎದುರಾಳಿ ತಂಡಕ್ಕೆ ಮತ್ತೊಂದು ಫ್ರಾಂಚೈಸಿ ಮಾಲೀಕ ಮಾಡುತ್ತಿದ್ದ ಕೆಲಸಗಳ ಕುರಿತು ನಾನು ಎಚ್ಚರಿಸಿದ್ದೆ. ಎದುರಾಳಿ ತಂಡದ ಡ್ರೆಸ್ಸಿಂಗ್​ ರೂಮ್​ ಮುಂದೆ ಇಂತಹ ಅಭ್ಯಾಸಗಳನ್ನು ಆತ ರೂಢಿಸಿಕೊಂಡಿದ್ದ ಎಂದು ಆರೋಪಿಸಿದ್ದಾರೆ. ಅಸಲಿಗೆ, ಅದು ಯಾರು? ಯಾವ ಫ್ರಾಂಚೈಸಿ ಎಂಬುದನ್ನು ಮಾತ್ರ ಲಲಿತ್ ಬಾಯ್ಬಿಟ್ಟಿಲ್ಲ ಎಂಬುದು ಗಮನಾರ್ಹ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net