ಹುಬ್ಬಳ್ಳಿ ಮೈದಾನದ ಪೆವಿಲಿಯನ್​ ಬ್ಲಾಕ್​ಗೆ ಸುನೀಲ್​ ಜೋಶಿ ಹೆಸರು

ಹುಬ್ಬಳ್ಳಿ ಮೈದಾನದ ಪೆವಿಲಿಯನ್​ ಬ್ಲಾಕ್​ಗೆ ಸುನೀಲ್​ ಜೋಶಿ ಹೆಸರು
ಹುಬ್ಬಳ್ಳಿ ಮೈದಾನದ ಪೆವಿಲಿಯನ್​ ಬ್ಲಾಕ್​ಗೆ ಸುನೀಲ್​ ಜೋಶಿ ಹೆಸರು
Published on
ಬೆಂಗಳೂರು: ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್​ಸಿಎ ಕ್ರಿಕೆಟ್​ ಮೈದಾನದ (KSCA Cricket Grounds, Rajnagar, Hubballi) ಪೆವಿಲಿಯನ್​ ಬ್ಲಾಕ್​ಗೆ ಟೀಮ್​ ಇಂಡಿಯಾ ಪರ ಆಡಿರುವ ಕರ್ನಾಟಕದ ಮಾಜಿ ಸ್ಪಿನ್ನರ್​ ಸುನೀಲ್​ ಜೋಶಿ (Sunil Joshi) ಅವರ ಹೆಸರು ಇಡಲು ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (KSCA) ನಿರ್ಧರಿಸಿದೆ.
ಈ ಮೈದಾನದಲ್ಲಿ ಮಂಗಳವಾರದಿಂದ ನಡೆಯಲಿರುವ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಿನ ರಣಜಿ ಟ್ರೋಫಿ ಫೈನಲ್​ ಪಂದ್ಯಕ್ಕೆ ಮುನ್ನ ಈ ನಾಮಕರಣ ಸಮಾರಂಭ ನಡೆಯಲಿದೆ. ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ್​ ಪ್ರಸಾದ್​, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್​ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎಂದು ಕೆಎಸ್​ಸಿಎ ವಕ್ತಾರ ವಿನಯ್​ ಮೃತ್ಯುಂಜಯ್​ ತಿಳಿಸಿದ್ದಾರೆ.
ಸುನೀಲ್​ ಜೋಶಿ ಅವರು ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್​ಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಈ ಗೌರವ ಸಲ್ಲಿಸಲಾಗುತ್ತಿದೆ. ಗದಗ ಜಿಲ್ಲೆಯವರಾದ ಸುನೀಲ್​ ಜೋಶಿ ಉತ್ತರ ಕರ್ನಾಟಕದಿಂದ ಬಂದಿದ್ದು, ಹುಬ್ಬಳ್ಳಿಯಲ್ಲೂ ಕ್ರಿಕೆಟ್​ ಬೆಳವಣಿಗೆಯಲ್ಲಿ ಅವರ ಪಾತ್ರವಿದೆ ಎಂದು ಕೆಎಸ್​ಸಿಎ ತಿಳಿಸಿದೆ.
ಸುನೀಲ್​ ಜೋಶಿ ಎಡಗೈ ಸ್ಪಿನ್ನರ್​ ಆಗಿ ಭಾರತ ಪರ 15 ಟೆಸ್ಟ್​ ಮತ್ತು 69 ಏಕದಿನ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 41 ಮತ್ತು 69 ವಿಕೆಟ್​ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 6 ರನ್​ಗಳಿಗೆ 5 ವಿಕೆಟ್​ ಕಬಳಿಸಿದ್ದು ಅವರ ಅತ್ಯುತ್ತಮ ನಿರ್ವಹಣೆಯಾಗಿದೆ. ಐಪಿಎಲ್​ನಲ್ಲಿ ಅವರು ಆರ್​ಸಿಬಿ ಪರವಾಗಿಯೂ ಆಡಿದ್ದಾರೆ. ಸದ್ಯ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಸ್ಪಿನ್​ ಕೋಚ್​ ಆಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net