ನಿಮಗೂ ನಿಮ್ಮ ತಮ್ಮನಿಗೂ ಆಗಲ್ವಂತೆ ನಿಜಾನಾ? ಕೃನಾಲ್​ ಪಾಂಡ್ಯ ಕೊಟ್ಟ ಉತ್ತರ ವೈರಲ್​... Krunal Pandya

ನಿಮಗೂ ನಿಮ್ಮ ತಮ್ಮನಿಗೂ ಆಗಲ್ವಂತೆ ನಿಜಾನಾ? ಕೃನಾಲ್​ ಪಾಂಡ್ಯ ಕೊಟ್ಟ ಉತ್ತರ ವೈರಲ್​... Krunal Pandya
ನಿಮಗೂ ನಿಮ್ಮ ತಮ್ಮನಿಗೂ ಆಗಲ್ವಂತೆ ನಿಜಾನಾ? ಕೃನಾಲ್​ ಪಾಂಡ್ಯ ಕೊಟ್ಟ ಉತ್ತರ ವೈರಲ್​... Krunal Pandya
Published on

ಪ್ರಮುಖ ಮುಖ್ಯಾಂಶಗಳು

  • ಸಹೋದರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ನಡುವೆ ಬಿರುಕು ಮೂಡಿದೆ ಎಂಬ ವದಂತಿ
  • ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಔಟಾದ ಬೆನ್ನಲ್ಲೇ ಕೃನಾಲ್ ಮಾಡಿದ ಸಂಭ್ರಮಾಚರಣೆಯ ಬಳಿಕ ವದಂತಿ ಜೋರು
  • ಮಹಿಕಾ ಶರ್ಮಾ ಜೊತೆಗಿನ ಸಂಬಂಧದ ವಿಚಾರದಲ್ಲಿ ಹಾರ್ದಿಕ್​ ವಿರುದ್ಧ ಕೃನಾಲ್​ಗೆ ಅಸಮಾಧಾನವಿದೆ ಎಂಬ ಮಾತು
  • ಆರ್​ಸಿಬಿ ಪಾಡ್‌ಕಾಸ್ಟ್‌ನಲ್ಲಿ ಡ್ಯಾನಿಶ್ ಸೇಠ್​ ಜತೆ ಮಾತನಾಡುವಾಗ ಎಲ್ಲ ವದಂತಿಗೆ ಸ್ಪಷ್ಟನೆ ನೀಡಿದ ಕೃನಾಲ್​ ಪಾಂಡ್ಯ
Krunal Pandya : ಟೀಮ್​​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಟಗಾರ ಕೃನಾಲ್ ಪಾಂಡ್ಯ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಏಪ್ರಿಲ್​ 12ರಂದು ಮುಂಬೈ ಮತ್ತು ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಔಟಾದ ಬೆನ್ನಲ್ಲೇ ಕೃನಾಲ್ ಮಾಡಿದ ಸಂಭ್ರಮಾಚರಣೆಯ ಬಳಿಕ ಈ ವದಂತಿಗಳು ಜೋರಾಗಿ ಹರಡಿದವು. ಇದೀಗ ಕೃನಾಲ್​ ಪಾಂಡ್ಯ ವದಂತಿಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ.
ಆರ್​ಸಿಬಿ ಪಾಡ್‌ಕಾಸ್ಟ್‌ನಲ್ಲಿ ಡ್ಯಾನಿಶ್ ಸೇಠ್​ ಅವರೊಂದಿಗೆ ಮಾತನಾಡುವಾಗ ಹರಿದಾಡುತ್ತಿರುವ ವದಂತಿಗಳಿಗೆ ಕೃನಾಲ್ ಪಾಂಡ್ಯ ಬ್ರೇಕ್​ ಹಾಕಿದ್ದಾರೆ. ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆಯೇ ಅಥವಾ ಏನಾದರೂ ಜಗಳ ನಡೆದಿದೆಯೇ ಎಂದು ಡ್ಯಾನಿಶ್ ತಮಾಷೆಯಾಗಿ ಕೇಳಿದಾಗ, ಕೃನಾಲ್ ನಗುತ್ತಲೇ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಡ್ಯಾನಿಶ್ ಅವರು ಡಬ್ಲ್ಯೂಡಬ್ಲ್ಯೂಇ (WWE) ಖ್ಯಾತಿಯ 'ಕೇನ್ ಮತ್ತು ಅಂಡರ್ ಟೇಕರ್' ಕೂಡ ಆಗಾಗ ಜಗಳವಾಡುತ್ತಾರೆ ಎಂದು ಉದಾಹರಿಸಿದ್ದು ಕೇಳುಗರ ನಗು ಉಕ್ಕಿಸಿತು.
ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಮತ್ತು ಎಲ್ಲವೂ ಉತ್ತಮವಾಗಿದೆ ಎಂದು ಕೃನಾಲ್ ಸ್ಪಷ್ಟಪಡಿಸಿದರು. ಎಲ್ಲವೂ ಸರಿಯಿದೆಯೇ? ಎಂದು ಪದೇ ಪದೆ ಕೇಳಿದ ಪ್ರಶ್ನೆಗೆ, ಅವರು ನಗುತ್ತಲೇ "ಎಲ್ಲವೂ ಸರಿಯಾಗಿದೆ" (All ok) ಎಂದು ಉತ್ತರಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದರು. ಅತ್ಯಂತ ಸರಳ ಹಾಗೂ ಹಾಸ್ಯಭರಿತವಾಗಿ ಸಾಗಿದ ಈ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ.
ವದಂತಿ ಹರಡಲು ಕಾರಣವೇನು?
ಸಾಮಾನ್ಯವಾಗಿ ಮೈದಾನದಲ್ಲಿ ಎದುರಾಳಿ ತಂಡಗಳ ಪರ ಆಡುವಾಗಲೂ ತುಂಬಾ ಸ್ನೇಹಪರ ಮತ್ತು ಪ್ರೀತಿಯಿಂದ ವರ್ತಿಸುವ ಈ ಇಬ್ಬರೂ ಸಹೋದರರು, ಏಪ್ರಿಲ್​ 12ರಂದು ಪಂದ್ಯದ ಸಮಯದಲ್ಲಿ ಅಂತರ ಕಾಯ್ದುಕೊಂಡರು. ಪರಸ್ಪರ ಮಾತನಾಡಿದ ಒಂದು ದೃಶ್ಯವೂ ಲಭ್ಯವಾಗಲಿಲ್ಲ. ಹೀಗಾಗಿ ಸಾಕಷ್ಟು ಅನುಮಾನಗಳು ಸೃಷ್ಟಿಯಾಯಿತು. ಅಂದು, ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಜಾಕೋಬ್ ಡಫಿ ಬೌಲಿಂಗ್‌ನಲ್ಲಿ ಹಾರ್ದಿಕ್​ ಶಾಟ್​ ಆಡಿದರು. ಈ ವೇಳೆ ಚೆಂಡು ಗಾಳಿಯಲ್ಲಿ ಹಾರಿ ರೊಮಾರಿಯೊ ಶೆಫರ್ಡ್ ಕೈಸೇರಿತು. ನಿರ್ಣಾಯಕ ಹಂತದಲ್ಲಿ ಹಾರ್ದಿಕ್​ ವಿಕೆಟ್​ ಬೀಳುತ್ತಿದ್ದಂತೆ ಕೃನಾಲ್ ಪಾಂಡ್ಯ ಅವರು ಶೆಫರ್ಡ್ ಕಡೆಗೆ ಓಡಿ ಬಂದು ಸಂತೋಷದಿಂದ ಜಿಗಿದು ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ವಾಸ್ತವವಾಗಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಸಂಭ್ರಮಿಸುವುದಿಲ್ಲ. ಬದಲಾಗಿ, ಹಾರ್ದಿಕ್ ಔಟ್ ಆದಾಗ ಅವರ ಬಳಿಗೆ ಓಡಿ ಬಂದು ಸಾಂತ್ವನ ಹೇಳುವಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿವೆ. ಆದರೆ, ಅಂದು ಕೃನಾಲ್​ ಸಂಭ್ರಮಾಚರಣೆ ಮಾಡಿದರು. ಹೀಗಾಗಿ, ಅಣ್ಣ-ತಮ್ಮನ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿ ಹರಿದಾಡಿತು. ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಟ್ಟ ನಂತರ, ಹಾರ್ದಿಕ್ ಮಹಿಕಾ ಶರ್ಮಾ ಜೊತೆ ಸಂಬಂಧ ಬೆಳೆಸಿದ್ದಾರೆ. ಈ ಸಂಬಂಧದ ಬಗ್ಗೆ ಕೃನಾಲ್​ಗೆ ಅಸಮಾಧಾನ ಇದೆ. ಹೀಗಾಗಿ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇದೀಗ ಕೃನಾಲ್​ ಆ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ.
ಇನ್ನೂ ಈ ಸೀಸನ್‌ನಲ್ಲಿ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಕೃನಾಲ್, ತಂಡದ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದ್ದಾರೆ. ತಮ್ಮ ಸ್ಪಿನ್ ಬೌಲಿಂಗ್‌ನಲ್ಲಿ ಹೊಸ ಕೌಶಲಗಳನ್ನು ಅಳವಡಿಸಿಕೊಂಡಿರುವ ಅವರು, ವಿಶೇಷವಾಗಿ ಬೌನ್ಸರ್‌ಗಳ ಮೂಲಕ ಬ್ಯಾಟರ್‌ಗಳನ್ನು ಅಚ್ಚರಿಗೊಳಿಸುತ್ತಿದ್ದಾರೆ. ಆರ್‌ಸಿಬಿ ಈ ಬಾರಿ ಉತ್ತಮ ಆರಂಭವನ್ನು ಪಡೆದಿದ್ದು, ತಮ್ಮ ಆಲ್‌ರೌಂಡ್ ಪ್ರದರ್ಶನದ ಮೂಲಕ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದು ಮತ್ತೆ ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿ ಕೃನಾಲ್ ಇದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net