ಐಪಿಎಲ್ ಮುಗಿದ ಮೇಲೆ ಮಾನಸಿಕವಾಗಿ ಕುಗ್ಗಿಹೋದೆ!... LSG ಜತೆಗಿನ ಕಹಿ ಅನುಭವ ಬಿಚ್ಚಿಟ್ಟ ರಾಹುಲ್.. KL Rahul

KL Rahul (ಚಿತ್ರ X)
KL Rahul (ಚಿತ್ರ X)
Published on

KL Rahul: ಇಂಡಿಯನ್​ ಪ್ರೀಮಿಯರ್ ಲೀಗ್​ (ಐಪಿಎಲ್ ) ಪಂದ್ಯಾವಳಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವುದು ಎಷ್ಟು ಸವಾಲಿನ ಕೆಲಸ ಎಂಬ ಗಂಭೀರ ವಿಚಾರವನ್ನು ಭಾರತದ ಕ್ರಿಕೆಟಿಗ ಕೆ.ಎಲ್ ರಾಹುಲ್ ಮುಕ್ತವಾಗಿ ಹಂಚಿಕೊಂಡಿದ್ದಾರೆ. 'ಹ್ಯೂಮನ್ಸ್ ಆಫ್ ಬಾಂಬೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕಿಂತ ಎರಡು ತಿಂಗಳ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿರುವುದು ತಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ಬಳಲಿಸುತ್ತಿತ್ತು ಎಂದು ಹೇಳಿದ್ದಾರೆ.

ಮಾಲೀಕರಿಗೆ ಉತ್ತರಿಸುವುದೇ ದೊಡ್ಡ ಕಸರತ್ತು

ಐಪಿಎಲ್‌ನಲ್ಲಿ ಎದುರಾಗುವ ಸವಾಲುಗಳ ಕುರಿತು ಮಾತನಾಡಿದ ರಾಹುಲ್, "ಐಪಿಎಲ್‌ನಲ್ಲಿ ಒಬ್ಬ ನಾಯಕನಿಗೆ ನಿರಂತರ ಸಭೆಗಳು, ಪಂದ್ಯಗಳ ವಿಶ್ಲೇಷಣೆ ಹಾಗೂ ಪ್ರಮುಖವಾಗಿ ತಂಡದ ಮಾಲೀಕರಿಗೆ ಪ್ರತಿಯೊಂದು ವಿಷಯವನ್ನೂ ವಿವರಿಸಿ ಹೇಳುವುದು ಅತ್ಯಂತ ಆಯಾಸ ತರುವ ಕೆಲಸ. ಕ್ರಿಕೆಟ್ ಹಿನ್ನೆಲೆಯಿಂದ ಬಂದಿರುವ ಕೋಚ್‌ಗಳು ಮತ್ತು ಆಯ್ಕೆದಾರರಿಗೆ ಆಟದ ಸೂಕ್ಷ್ಮತೆಗಳು ಚೆನ್ನಾಗಿ ಅರ್ಥವಾಗುತ್ತವೆ. ಆದರೆ ಕ್ರೀಡೇತರ ಹಿನ್ನೆಲೆಯಿಂದ ಬಂದಿರುವ ಮಾಲೀಕರಿಗೆ ಸೋಲು-ಗೆಲುವಿನ ಕಾರಣಗಳನ್ನು ವಿವರಿಸುವುದು ನಿಜಕ್ಕೂ ದೊಡ್ಡ ಕಸರತ್ತು" ಎಂದಿದ್ದಾರೆ.

ಆದಾಗ್ಯೂ, ಪಂದ್ಯಗಳು ಸೋತ ನಂತರ ಎದುರಾಗುತ್ತಿದ್ದ ಪ್ರಶ್ನೆಗಳ ಬಗ್ಗೆ ವಿವರಣೆ ನೀಡಿದ ಅವರು, ಈ ಆಟಗಾರನಿಗೆ ಪ್ಲೇಯಿಂಗ್ 11ನಲ್ಲಿ ಏಕೆ ಅವಕಾಶ ನೀಡಿದ್ರಿ?, ಎದುರಾಳಿ ತಂಡ 200 ರನ್ ಗಳಿಸಿದರೆ, ನಾವು 120 ರನ್‌ಗಳಿಗೆ ಏಕೆ ಆಲ್ಔಟ್ ಆದೆವು?, ಅವರ ಬೌಲರ್‌ಗಳಿಗೆ ಸಿಕ್ಕ ತಿರುವು (Spin) ನಮ್ಮ ಬೌಲರ್‌ಗಳಿಗೆ ಏಕೆ ಸಿಗಲಿಲ್ಲ? ಎಂಬಂತಹ ಪ್ರಶ್ನೆಗಳನ್ನು ನಾಯಕ ಮತ್ತು ಕೋಚ್‌ಗಳಿಗೆ ಕೇಳಲಾಗುತ್ತದೆ. ಕ್ರಿಕೆಟ್‌ನಲ್ಲಿ ಎಷ್ಟೇ ಸಿದ್ಧತೆ ನಡೆಸಿದರೂ ಕೂಡಾ ಗೆಲುವು ಖಚಿತ ಎಂದು ಹೇಳಲಾಗುವುದಿಲ್ಲ. ಆದರೆ, ಈ ವಿಷಯಗಳನ್ನು ಮಾಲೀಕರಿಗೆ ಅರ್ಥೈಸುವುದೇ ನಾಯಕನಾದವನಿಗೆ ದೊಡ್ಡ ಸವಾಲು ಎಂದು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಹೊಸ ಅಧ್ಯಾಯ

ಲಕ್ನೋ ತಂಡದಲ್ಲಿದ್ದ ಸವಾಲುಗಳನ್ನು ದಾಟಿ ಬಂದಿರುವ ಕೆ.ಎಲ್. ರಾಹುಲ್, ಈಗ ಡೆಲ್ಲಿ ಕ್ಯಾಪಿಟಲ್ಸ್ ಪರ ತಮ್ಮ ಹಳೆಯ ವೈಭವಕ್ಕೆ ಮರಳಿದ್ದಾರೆ. ಪ್ರಸ್ತುತ ಐಪಿಎಲ್ 2026ರ ಆವೃತ್ತಿಯಲ್ಲಿ ಅವರು 174.41ರ ಭರ್ಜರಿ ಸ್ಟ್ರೈಕ್ ರೇಟ್ ಹಾಗೂ 45.61 ಸರಾಸರಿಯಲ್ಲಿ ಬರೋಬ್ಬರಿ 593 ರನ್ ಬಾರಿಸಿ ಫಾರ್ಮ್‌ಗೆ ಮರಳಿದ್ದಾರೆ.
ಇನ್ನೊಂದೆಡೆ, ಲಕ್ನೋ ತಂಡದ ನಾಯಕನಾಗಿ ಒತ್ತಡದಲ್ಲಿದ್ದ ಮತ್ತೊಬ್ಬ ತಾರೆ ರಿಷಭ್ ಪಂತ್ ಕೂಡ ಈಗ ಟ್ರೇಡಿಂಗ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದು, ರಾಹುಲ್ ಅವರೊಂದಿಗೆ ಕೈಜೋಡಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಪಂತ್‌ಗೆ ಈ ಹೊಸ ತಂಡ ಹಾಗೂ ವಾತಾವರಣ ಯಾವ ರೀತಿಯ ಯಶಸ್ಸು ನೀಡಲಿದೆ ಎಂಬುದನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net