18, 11, 25... ಏನಿದು ನಂಬರ್ ಲೆಕ್ಕಾಚಾರ? ಮೊದಲನೇ ಏಕದಿನ ಪಂದ್ಯದಲ್ಲಿ ದಿಗ್ಗಜರ ದಾಖಲೆ ಮುರಿಯಲು 'ಕಿಂಗ್​' ರೆಡಿ | Virat Kohli

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಆರಂಭ
  • ಮೊದಲ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮೇಲೆ ಭಾರೀ ನಿರೀಕ್ಷೆ
  • ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್​, ಕುಮಾರ್​ ಸಂಗಕ್ಕಾರ ವಿಶ್ವ ದಾಖಲೆಗಳನ್ನು ಮುರಿಯುವತ್ತ ಕೊಹ್ಲಿ ಚಿತ್ತ
ಗುಜರಾತ್​: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭಗೊಳ್ಳಲಿದ್ದು, ಮೊದಲ ಏಕದಿನ ಪಂದ್ಯವು ವಡೋದರಾದಲ್ಲಿ ನಡೆಯಲಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಅಖಾಡಕ್ಕಿಳಿಯಲಿರುವ ಟೀಮ್ ಇಂಡಿಯಾಗೆ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಅವರ ಕಮ್​ಬ್ಯಾಕ್​ ತಂಡದಲ್ಲಿ ಇನ್ನಷ್ಟು ಬಲ ಮತ್ತು ಉತ್ಸಾಹ ತುಂಬಿದೆ. ಮೊದಲನೇ ಪಂದ್ಯದಲ್ಲಿಯೇ ಕ್ರಿಕೆಟ್​ ದಿಗ್ಗಜರಾದ ಸಚಿನ್ ತೆಂಡೂಲ್ಕರ್​ ಮತ್ತು ಕುಮಾರ್​ ಸಂಗಕ್ಕಾರ ಅವರ ವಿಶ್ವ ದಾಖಲೆಗಳನ್ನು ಮುರಿಯಲು ಕೊಹ್ಲಿ ಸಜ್ಜಾಗಿರುವುದು ಸದ್ಯ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.

ದಾಖಲೆಗಳ ಸರದಾರ

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​, ದಾಖಲೆಗಳ ಸರದಾರ, 'ರನ್​ಮಷಿನ್'​ ಆಗಿರುವ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಇಂದಿನ ಮ್ಯಾಚ್​ನಲ್ಲಿ ಅವರು ಕೇವಲ 25 ರನ್ ಗಳಿಸಿದರೆ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಅಸಲಿಗೆ, ಜ.11 ವಿರಾಟ್​ಗೆ ವಿಶೇಷ ದಿನವಾಗಿದ್ದು, ಇದೇ ದಿನ ಅವರು ಐತಿಹಾಸಿಕ ದಾಖಲೆ ನಿರ್ಮಿಸಿದರೆ, ಅದು ನಿಜಕ್ಕೂ ಕೊಹ್ಲಿ ಕುಟುಂಬಕ್ಕೆ ಹಾಗೂ ಅವರ ನೆಚ್ಚಿನ ಅಭಿಮಾನಿಗಳ ಬಳಗಕ್ಕೆ ದೊಡ್ಡ ಗಿಫ್ಟ್​ ಆಗಿರಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,000 ರನ್‌ಗಳನ್ನು ಪೂರ್ಣಗೊಳಿಸಲು ವಿರಾಟ್​ಗೆ ಕೇವಲ 25 ರನ್‌ಗಳ ಅಗತ್ಯವಿದೆ. ಇಂದಿನ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ, ಆ 25 ರನ್‌ಗಳನ್ನು ಬಾರಿಸಿದರೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,000 ರನ್‌ಗಳನ್ನು ದಾಖಲಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ರೆಕಾರ್ಡ್​ಗೆ ಸಾಕ್ಷಿಯಾಗಲಿದ್ದಾರೆ. ಇಲ್ಲಿಯವರೆಗೆ, ಈ ದಾಖಲೆಗಳು ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಕುಮಾರ್ ಸಂಗಕ್ಕಾರ ಹೆಸರಿನಲ್ಲಿವೆ.
'ಕಿಂಗ್​ ಕೊಹ್ಲಿ' ಅಂತ ಸುಮ್ಮನೆ ಕರೆಯೊಲ್ಲ
ಕೊಹ್ಲಿ, 623 ಇನ್ನಿಂಗ್ಸ್‌ಗಳಲ್ಲಿ 84 ಶತಕ ಮತ್ತು 145 ಅರ್ಧಶತಕಗಳೊಂದಿಗೆ 27,975 ರನ್ ಗಳಿಸಿದ್ದಾರೆ. ಅದೇ ಸಚಿನ್ 644 ಇನ್ನಿಂಗ್ಸ್‌ಗಳಲ್ಲಿ 28,000 ರನ್ ಗಳಿಸಿದ್ದರೆ, ಸಂಗಕ್ಕಾರ 666 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದಿದ್ದಾರೆ. ಇಂದಿನ ಪಂದ್ಯದಲ್ಲಿ 25 ರನ್​ ಬಾರಿಸಿದರೆ ವಿರಾಟ್​ ದಿಗ್ಗಜರ ದಾಖಲೆಯನ್ನು ಹಿಂದಿಕ್ಕಿ, ತಮ್ಮದೇ ಹೊಸ ವಿಶ್ವ ದಾಖಲೆ ಬರೆಯುವುದಂತು ಖಚಿತ.
ಇನ್ನು ಮೂರು ಫಾರ್ಮೆಟ್​ಗಳಲ್ಲಿ ನೋಡುವುದಾದರೆ, ವಿರಾಟ್​, ಕುಮಾರ್ ಸಂಗಕ್ಕಾರ ಅವರ 28,016 ರನ್‌ಗಳ ದಾಖಲೆಗಿಂತ ಕೇವಲ 42 ರನ್‌ಗಳ ಹಿಂದಿದ್ದಾರೆ. ಇಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ವಿರಾಟ್​ ಹೊರಹೊಮ್ಮಲಿದ್ದಾರೆ. ಈ ಪಟ್ಟಿಯಲ್ಲಿ ಪ್ರಸ್ತುತ, ಸಂಗಕ್ಕಾರ ವಿರಾಟ್‌ಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅವರು 594 ಪಂದ್ಯಗಳಲ್ಲಿ 666 ಇನ್ನಿಂಗ್ಸ್‌ಗಳಲ್ಲಿ 28,016 ರನ್ ಗಳಿಸಿದ್ದಾರೆ.
46.77 ಸರಾಸರಿಯಲ್ಲಿ, 63 ಶತಕ ಮತ್ತು 153 ಅರ್ಧಶತಕಗಳನ್ನು ಗಳಿಸಿದ್ದಾರೆ. ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್, 664 ಪಂದ್ಯಗಳಲ್ಲಿ 48.25 ಸರಾಸರಿಯಲ್ಲಿ 34,357 ರನ್ ದಾಖಲಿಸಿದ್ದಾರೆ. ಸಚಿನ್ ಎಲ್ಲಾ ಸ್ವರೂಪಗಳಲ್ಲಿ 100 ಶತಕ ಮತ್ತು 164 ಅರ್ಧಶತಕಗಳನ್ನು ಗಳಿಸಿದ್ದಾರೆ.

ಏನಿದು ಸಂಖ್ಯೆಯ ಲೆಕ್ಕಾಚಾರ?

ಜ.11 ವಿರಾಟ್​ ಕೊಹ್ಲಿಗೆ ಬಹಳ ವಿಶೇಷ ದಿನ. ಕಾರಣ, ಈ ದಿನದಂದು ಅವರ ಪುತ್ರಿ ವಮಿಕಾ ಜನಿಸಿದ್ದು. ಇಂದು ಕೊಹ್ಲಿಗೆ ಮಗಳ ಜನ್ಮದಿನದ ಸಂಭ್ರಮ. ಮತ್ತೊಂದೆಡೆ, ವಿರಾಟ್​ ಜೆರ್ಸಿ ನಂಬರ್​ 18. ಇದು ಎಂದೆಂದಿಗೂ ಅಭಿಮಾನಿಗಳಿಗೆ ವಿಶೇಷವೇ ಸರಿ. ಇದೊಂದು ನಂಬರ್​ಗೆ ಅತಿ ಹೆಚ್ಚು ಫ್ಯಾನ್​ ಫಾಲೋಯಿಂಗ್ ಹಾಗೂ ಕ್ರೇಜ್ ಇದೆ. ಸ್ಟೇಡಿಯಂನಲ್ಲಿ ಈ ನಂಬರಿನ ಜೆರ್ಸಿಗಳೇ ಹೆಚ್ಚಾಗಿ ತುಂಬಿರಲಿವೆ. ಇದರೊಟ್ಟಿಗೆ 25 ರನ್​ಗಳು ಇಂದು ಕೊಹ್ಲಿ ತೆಕ್ಕೆಗೆ ಸೇರಿದರೆ, ದಿಗ್ಗಜರ ದಾಖಲೆ ಬ್ರೇಕ್​ ಆಗುವುದು ಮತ್ತೊಂದು ವಿಶೇಷ,(ಏಜೆನ್ಸೀಸ್). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net