ಮೈದಾನದ ಹೊರಗೂ ವಿಶ್ವದಾಖಲೆ ಬರೆದ ಕೌರ್​: ಮೇಣದ ಪ್ರತಿಮೆಯಲ್ಲಿ ಮಿಂಚಿದ ಹರ್ಮನ್‌ಪ್ರೀತ್! Harmanpreet Kaur

World Cup-winning captain Harmanpreet Kaur celebrated the unveiling of her own life-size wax statue at the Historica Museum in Jaipur’s famous Nahargarh Fort.
ಜೈಪುರದ ಪ್ರಸಿದ್ಧ ನಹರ್‌ಗಢ ಕೋಟೆಯ ಹಿಸ್ಟಾರಿಕಾ ಮ್ಯೂಸಿಯಂನಲ್ಲಿ ತಮ್ಮದೇ ಆದ ನೈಜ ಗಾತ್ರದ (Life-size) ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿ ಸಂಭ್ರಮಿಸಿದ ವಿಶ್ವಕಪ್ ವಿಜೇತ ನಾಯಕಿ ಹರ್ಮನ್‌ಪ್ರೀತ್ ಕೌರ್.
Published on: 

ಜೈಪುರ: ಕ್ರಿಕೆಟ್ ಜಗತ್ತಿನಲ್ಲಿ ಭಾರತೀಯ ಮಹಿಳಾ ತಂಡದ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತೊಂದು ಹೊಸ ಇತಿಹಾಸ ಬರೆದಿದ್ದಾರೆ. ಮೈದಾನದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಬೌಲರ್​​ಗಳ ನಿದ್ದೆಗೆಡಿಸುತ್ತಿದ್ದ ಹರ್ಮನ್‌ಪ್ರೀತ್, ಈಗ ಮೈದಾನದ ಹೊರಗೂ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ತಮ್ಮದೇ ಆದ ನೈಜ ಗಾತ್ರದ (Life-size) ಮೇಣದ ಪ್ರತಿಮೆಯನ್ನು ಹೊಂದಿರುವ ವಿಶ್ವದ ಮೊದಲ ಮಹಿಳಾ ಕ್ರಿಕೆಟ್​ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್‌ಪ್ರೀತ್ ಪಾತ್ರರಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸ್ವತಃ ಹರ್ಮನ್‌ಪ್ರೀತ್ ಕೌರ್ ಅವರೇ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ತಮ್ಮದೇ ಪ್ರತಿರೂಪವನ್ನು ಕಂಡು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಎಲ್ಲಿದೆ ಈ ಪ್ರತಿಮೆ? ಏನಿದರ ವಿಶೇಷ?

ಜೈಪುರದ ಪ್ರಸಿದ್ಧ ನಹರ್‌ಗಢ ಕೋಟೆಯಲ್ಲಿರುವ ಹಿಸ್ಟಾರಿಕಾ - ಸ್ಟೆಪ್ ಇಂಟು ಹಿಸ್ಟರಿ (Historica - Step Into History) ಎಂಬ ಮೇಣದ ವಸ್ತುಸಂಗ್ರಹಾಲಯದಲ್ಲಿ ಹರ್ಮನ್‌ಪ್ರೀತ್ ಅವರ ಈ ಪ್ರತಿಮೆಯನ್ನು ಶಾಶ್ವತವಾಗಿ ಇರಿಸಲಾಗಿದೆ. ಇಲ್ಲಿಯವರೆಗೆ ಜಗತ್ತಿನ ಬೇರೆ ಯಾವುದೇ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಇಂತಹ ನೈಜ ಗಾತ್ರದ ಮೇಣದ ಪ್ರತಿಮೆಯನ್ನು ನಿರ್ಮಿಸಿರಲಿಲ್ಲ. ಈ ಮೂಲಕ ಹರ್ಮನ್‌ಪ್ರೀತ್ ಕೌರ್ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಇನ್ನು ಈ ಪ್ರತಿಮೆಯನ್ನು ತಯಾರಿಸಲು ಹಿಸ್ಟಾರಿಕಾ ಮ್ಯೂಸಿಯಂನ ತಜ್ಞರ ತಂಡ ಸಾಕಷ್ಟು ಶ್ರಮ ವಹಿಸಿದೆ. ಹರ್ಮನ್‌ಪ್ರೀತ್ ಅವರನ್ನು ನೇರವಾಗಿ ಭೇಟಿಯಾಗಿ, ಅವರ ದೇಹದ ನಿಖರ ಅಳತೆ, ಮುಖಭಾವ ಹಾಗೂ ಅವರು ಬ್ಯಾಟ್ ಹಿಡಿಯುವ ಶೈಲಿಯನ್ನು ವಿವಿಧ ಕೋನಗಳಿಂದ ಸೆರೆಹಿಡಿದು ಅಚ್ಚುಕಟ್ಟಾಗಿ ಈ ಪ್ರತಿಮೆಯನ್ನು ರೂಪಿಸಲಾಗಿದೆ.

2025ರ ವಿಶ್ವಕಪ್ ಗೆಲುವಿನ ನೆನಪು!

2025ರಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ದೇಶಕ್ಕೆ ಐತಿಹಾಸಿಕ ಕೀರ್ತಿ ತಂದುಕೊಟ್ಟಿತ್ತು. ಮೈದಾನದಲ್ಲಿ ಅವರ ಆ ಆಕ್ರಮಣಕಾರಿ ಆಟ ಮತ್ತು ನಾಯಕತ್ವದ ಗತ್ತನ್ನು ಈ ಮೇಣದ ಪ್ರತಿಮೆಯಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ.

Also Read
ಟಿಕ್​ಟಾಕ್​ ಹುಚ್ಚಾಟಕ್ಕೆ ಬಲಿಯಾದ ಅಮಾಯಕ ಯುವಕ: ಹುಲಿ ದಾಳಿ ಮರೆಮಾಚಲು 'ನಾಯಿ ಕಚ್ಚಿದೆ' ಎಂದಿದ್ದ ಯೂಟ್ಯೂಬರ್ ಅರೆಸ್ಟ್! Tiger Attack
World Cup-winning captain Harmanpreet Kaur celebrated the unveiling of her own life-size wax statue at the Historica Museum in Jaipur’s famous Nahargarh Fort.

ಬಾಲಕಿಯರಿಗೆ ಸ್ಫೂರ್ತಿಯ ಚಿಲುಮೆ!

ಈ ಬಗ್ಗೆ ಮಾತನಾಡಿರುವ ಹಿಸ್ಟಾರಿಕಾ ಮ್ಯೂಸಿಯಂ ಸಂಸ್ಥಾಪಕ ಅನೂಪ್ ಶ್ರೀವಾಸ್ತವ, ಹರ್ಮನ್‌ಪ್ರೀತ್ ಕೌರ್ ಕೇವಲ ಸ್ಟಾರ್ ಕ್ರಿಕೆಟರ್​ ಮಾತ್ರವಲ್ಲ, ದೇಶದ ಕೋಟ್ಯಂತರ ಬಾಲಕಿಯರು ಮತ್ತು ಯುವ ಕ್ರೀಡಾಪಟುಗಳಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ನಮ್ಮ ಮನೆಯ ಹೆಣ್ಣುಮಕ್ಕಳು ಕೂಡ ಕ್ರೀಡೆಯಲ್ಲಿ ಮುಂದೆ ಬರಬೇಕು, ದೊಡ್ಡ ಕನಸು ಕಾಣಬೇಕು ಎಂಬ ಸಂದೇಶ ಸಾರಲು ಈ ಪ್ರತಿಮೆಯನ್ನು ನಿರ್ಮಿಸಿದ್ದೇವೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ದಿಗ್ಗಜರ ಸಾಲಿನಲ್ಲಿ ಹರ್ಮನ್‌ಪ್ರೀತ್!

ನಹರ್‌ಗಢ ಕೋಟೆಯ ಈ ಮ್ಯೂಸಿಯಂನಲ್ಲಿ ಈಗಾಗಲೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ, ರನ್​ ಮಷಿನ್​ ವಿರಾಟ್ ಕೊಹ್ಲಿ, ಕಲ್ಪನಾ ಚಾವ್ಲಾ ಮತ್ತು ಸೈನಾ ನೆಹ್ವಾಲ್ ಸೇರಿದಂತೆ 48ಕ್ಕೂ ಹೆಚ್ಚು ದಿಗ್ಗಜರ ಮೇಣದ ಪ್ರತಿಮೆಗಳಿವೆ. ಇದೀಗ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಇಬ್ಬರು ದಿಗ್ಗಜ ನಾಯಕರಾದ ಎಂ.ಎಸ್. ಧೋನಿ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಪ್ರತಿಮೆಗಳು ಒಂದೇ ಸೂರಿನಡಿ ಸ್ಥಾಪಿತವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ, (ಏಜೆನ್ಸೀಸ್).