ರಾಷ್ಟ್ರೀಯ 19 ವಯೋಮಿತಿ ಮಹಿಳಾ ಟಿ20 ಟ್ರೋಫಿ: ಕರ್ನಾಟಕ ಚಾಂಪಿಯನ್​

ರಾಷ್ಟ್ರೀಯ 19 ವಯೋಮಿತಿ ಮಹಿಳಾ ಟಿ20 ಟ್ರೋಫಿ: ಕರ್ನಾಟಕಕ್ಕೆ ಪ್ರಶಸ್ತಿ
ರಾಷ್ಟ್ರೀಯ 19 ವಯೋಮಿತಿ ಮಹಿಳಾ ಟಿ20 ಟ್ರೋಫಿ: ಕರ್ನಾಟಕಕ್ಕೆ ಪ್ರಶಸ್ತಿ
Published on
ಬೆಂಗಳೂರು: ಸ್ಪಿನ್ನರ್​ ದೀಕ್ಷಾ ಜೆ. (21ಕ್ಕೆ 5) ಮಾರಕ ಬೌಲಿಂಗ್​ ಮತ್ತು ಬ್ಯಾಟರ್​ ದೀಕ್ಷಾ ಸಿ.ಡಿ. (47*ರನ್​, 39 ಎಸೆತ, 4 ಬೌಂಡರಿ, 1 ಸಿಕ್ಸರ್​) ಉಪಯುಕ್ತ ಬ್ಯಾಟಿಂಗ್​ ಬಲದಿಂದ ಕರ್ನಾಟಕ ತಂಡ 19 ವಯೋಮಿತಿ (Under 19) ಮಹಿಳಾ ಟಿ20 ಟ್ರೋಫಿಯಲ್ಲಿ (T20 cricket) ಚಾಂಪಿಯನ್​ ಪಟ್ಟವೇರಿದೆ. ಕೋಲ್ಕತದ ಸಾಲ್ಟ್​ ಲೇಕ್​ನ ಜೆಯು ಸೆಕೆಂಡ್​ ಕ್ಯಾಂಪಸ್​ ಮೈದಾನದಲ್ಲಿ ಬುಧವಾರ ನಡೆದ ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ ಆಂಧ್ರ ವಿರುದ್ಧ 7 ವಿಕೆಟ್​ಗಳಿಂದ ಗೆದ್ದು ಬೀಗಿತು. ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್​ ವಿಜೇತ ಭಾರತ ತಂಡದಲ್ಲಿ ಕನ್ನಡತಿಯರಿರಲಿಲ್ಲ ಎಂಬ ಕೊರಗನ್ನು ಬದಿಗೊತ್ತಿ, ಭವಿಷ್ಯದ ಬಗ್ಗೆ ಭರವಸೆ ಮೂಡಿಸುವಲ್ಲಿ ಕರ್ನಾಟಕದ ಕಿರಿಯ ಮಹಿಳೆಯರು ಯಶಸ್ವಿಯಾಗಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಆಂಧ್ರ 9 ವಿಕೆಟ್​ಗೆ 119 ರನ್​ ಗಳಿಸಿತು. ದೀಕ್ಷಾಗೆ ನಾಯಕಿ ವಂದಿತಾ ಕೆ. ರಾವ್​ (18ಕ್ಕೆ 2) ಮತ್ತು ವೇದಾ ವರ್ಷಿಣಿ ವಿ. (21ಕ್ಕೆ 2) ಉತ್ತಮ ಬೆಂಬಲ ಒದಗಿಸಿ ಆಂಧ್ರಗೆ ಕಡಿವಾಣ ಹೇರಿದರು. ಪ್ರತಿಯಾಗಿ ಕರ್ನಾಟಕ ಒಂದು ಹಂತದಲ್ಲಿ 55 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ, ಅಂತಿಮವಾಗಿ 17.4 ಓವರ್​ಗಳಲ್ಲಿ 3 ವಿಕೆಟ್​ಗೆ 120 ರನ್​ ಗಳಿಸಿ ಗೆಲುವು ಸಾಧಿಸಿತು.

ದೀಕ್ಷಾ ಸಿ.ಡಿ. ಮತ್ತು ಕಾಶ್ವಿ ಕಂಡಿಕುಪ್ಪ (27*) ಮುರಿಯದ 4ನೇ ವಿಕೆಟ್​ಗೆ 49 ಎಸೆತಗಳಲ್ಲಿ 65 ರನ್​ ಗಳಿಸಿ ಗೆಲುವಿನ ದಡ ಸೇರಿಸಿದರು. ಟೂರ್ನಿ 7 ಪಂದ್ಯಗಳಲ್ಲಿ ಸರ್ವಾಧಿಕ 224 ರನ್​ ಗಳಿಸಿದ ಕರ್ನಾಟಕದ ರಚಿತಾ ಹತ್ವಾರ್​ ಸರಣಿಶ್ರೇಷ್ಠ ಪ್ರಶಸ್ತಿ ಭಾಜನರಾದರು. ಕರ್ನಾಟಕ ತಂಡ 5 ಲೀಗ್​ ಪಂದ್ಯಗಳ ಸಹಿತ ಟೂರ್ನಿಯಲ್ಲಿ ಆಡಿದ ಎಲ್ಲ 7 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. 

ಆಂಧ್ರ: 9 ವಿಕೆಟ್​ಗೆ 119 (ದೀಕ್ಷಾ ಕತ್ರಗಡ್ಡ 36, ಸೇತುಸಾಯಿ 45, ದೀಕ್ಷಾ ಜೆ. 21ಕ್ಕೆ 5, ವಂದಿತಾ 18ಕ್ಕೆ 2, ವೇದಾ 21ಕ್ಕೆ 2). ಕರ್ನಾಟಕ: 17.4 ಓವರ್​ಗಳಲ್ಲಿ 3 ವಿಕೆಟ್​ಗೆ 120 (ರಚಿತಾ 10, ಲಿಯಂಕಾ 28, ದೀಕ್ಷಾ ಸಿ.ಡಿ. 47*, ಕಾಶ್ವಿ 27*, ತಮನ್ನಾ 28ಕ್ಕೆ 1, ದೀಪ್ತಿ 19ಕ್ಕೆ 1). ಪಂದ್ಯಶ್ರೇಷ್ಠ: ದೀಕ್ಷಾ ಜೆ, ಸರಣಿಶ್ರೇಷ್ಠ: ರಚಿತಾ ಹತ್ವಾರ್​ (ಕರ್ನಾಟಕ).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net