2023-2023ನೇ ಸಾಲಿನ ಕರ್ನಾಟಕ ಕ್ರೀಡಾ ಪ್ರಶಸ್ತಿ ಪ್ರದಾನ: 30 ಸಾಧಕರಿಗೆ ಏಕಲವ್ಯ ಪ್ರಶಸ್ತಿ

ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಸಿದ್ದರಾಮಯ್ಯ. ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ರಿಜ್ವಾನ್ ಅರ್ಷದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಎಂಎಲ್ಸಿ ಹಾಗೂ ಕೆಒಎ ಅಧ್ಯಕ್ಷ ಗೋವಿಂದರಾಜು ಸೇರಿ ಇತರರಿದ್ದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಸಿದ್ದರಾಮಯ್ಯ. ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ರಿಜ್ವಾನ್ ಅರ್ಷದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಎಂಎಲ್ಸಿ ಹಾಗೂ ಕೆಒಎ ಅಧ್ಯಕ್ಷ ಗೋವಿಂದರಾಜು ಸೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 15 ಕ್ರೀಡಾಪಟುಗಳಿಗೆ ಕ್ರೀಡಾರತ್ನ ಗೌರವ
  • ಇನ್ನು ಆಯಾವರ್ಷವೇ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಟೋಕಿಯೋ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಗಾಲ್ಫ್ ತಾರೆ ಅದಿತಿ ಅಶೋಕ್, ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಮಿಥುನ್ ಮಂಜುನಾಥ್, ಹಾಕಿ ತಾರೆ ಮೊಹಮದ್ ರಹೀಲ್, ಮಹಿಳಾ ಶೂಟರ್ ದಿವ್ಯಾ ಟಿ.ಎಸ್, ಟೆನಿಸ್ ಆಟಗಾರ ಎಸ್.ಡಿ. ಪ್ರಜ್ವಲ್ ದೇವ್ ಸೇರಿ 30 ಯುವ ಕ್ರೀಡಾಸಾಧಕರಿಗೆ ರಾಜ್ಯದ ಅತ್ಯುನ್ನತ ಕ್ರೀಡಾ ಗೌರವವಾದ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗ್ರಾಮೀಣ ಹಾಗೂ ಪಾರಂಪರಿಕ ಕ್ರೀಡೆಗಳಲ್ಲಿ ಅತ್ಯುನ್ನತ ಸಾಧನೆ ತೋರಿದ 15 ಕ್ರೀಡಾಪಟುಗಳಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯವನಿಕಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ 2022-2023ನೇ ಸಾಲಿನ ರಾಜ್ಯದ ಕ್ರೀಡಾ ಸಾಧಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಹಲವು ಆಟಗಾರರಿಗೆ ತರಬೇತಿ ನೀಡಿ ರಾಷ್ಟ್ರೀಯ- ಅಂತಾರಾಷ್ಟ್ರೀಯ ಕ್ರೀಡಾಪಟುಗಳುಗಳನ್ನು ರೂಪಿಸಿದ 8 ತರಬೇತುದಾರರು ಜೀವಮಾನ ಸಾಧನೆಗೆ ಭಾಜನಾರಾದರೆ, ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯು 2023ನೇ ಸಾಲಿನ ಕ್ರೀಡಾಪೋಷಕ ಪ್ರಶಸ್ತಿ ಜತೆಗೆ ₹10 ಲಕ್ಷ ರೂ. ನಗದು ಬಹುಮಾನ, ಪ್ರಶಂಸನಾ ಪತ್ರ ಪಡೆದುಕೊಂಡಿತು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದು, ಪದಕವಂಚಿತರಾಗಿದ್ದ ಅದಿತ್ ಅಶೋಕ್ ಗೈರಿನಲ್ಲಿ ಅವರ ತಾಯಿ ಮಹೇಶ್ವರಿ ಹಾಗೂ ಮೊಹಮದ್ ರಹೀಲ್ ಅನುಪಸ್ಥಿತಿಯಲ್ಲಿ ಅವರ ತಂದೆ ಮೊ.ನಾಸಿರುದ್ದೀನ್ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಪುರಸ್ಕೃತರು:
ಏಕಲವ್ಯ ಪ್ರಶಸ್ತಿ 2022: ಪ್ರಿಯಾ ಮೋಹನ್ (ಅಥ್ಲೆಟಿಕ್ಸ್), ಮಿಥುನ್ ಮಂಜುನಾಥ್ (ಬ್ಯಾಡ್ಮಿಂಟನ್), ಮೊಹಮದ್ ರಹೀಲ್ (ಹಾಕಿ), ಪ್ರತ್ಯನುಷ್ ತೋಮರ್ (ಬಾಸ್ಕೆಟ್‌ಬಾಲ್), ಸಂಪತ್ ವಿಷ್ಣುವರ್ಧನ್ (ಸೈಕ್ಲಿಂಗ್), ಧನಲಕ್ಷ್ಮಿ ಎ. (ಕಯಾಕಿಂಗ್ ಮತ್ತು ಕನೋಯಿಂಗ್), ಅದಿತಿ ಅಶೋಕ್ (ಗಾಲ್ಫ್), ಎಸ್.ಡಿ. ಪ್ರಜ್ವಲ್ ದೇವ್(ಟೆನಿಸ್), ಯುಕ್ತಿ ರಾಜೇಂದ್ರ (ಶೂಟಿಂಗ್), ರಿಧಿಮ ವೀರೇಂದ್ರ ಕುಮಾರ್ (ಈಜು), ಮಣಿಕಂದನ್ ಕೆ. (ಸ್ಪೋರ್ಟ್ಸ್ ಕ್ಲೈಂಬಿಂಗ್),ಎಲ್.ಎಂ. ಮನೋಜ್ (ವಾಲಿಬಾಲ್), ಪ್ರವಲಿಕಾ ವಿ ಕುಷ್ಟಗಿ (ಟೇಕ್ವಾಂಡೊ), ನಿಂಗಪ್ಪ ಪ್ರಕಾಶ್ ಗೇಣೆನ್ನವರ (ಕುಸ್ತಿ), ರಕ್ಷಿತಾ ಆರ್. (ಪ್ಯಾರಾ ಅಥ್ಲೆಟಿಕ್ಸ್); ಏಕಲವ್ಯ-2023: ನಿಹಾಲ್ ಜೋಯಲ್ ಡಬ್ಲುೃ (ಅಥ್ಲೆಟಿಕ್ಸ್), ಕೆ.ಸಾಯಿ ಪ್ರತೀಕ್ (ಬ್ಯಾಡ್ಮಿಂಟನ್), ಆರ್. ಸಂಜನಾ (ಬಾಸ್ಕೆಟ್‌ಬಾಲ್), ಅನುಪಮಾ ಗುಳೇದ (ಸೈಕ್ಲಿಂಗ್), ನೈದಿಲೆ (ಫೆನ್ಸಿಂಗ್), ಉಜ್ಜವಲ್ ನಾಯ್ಡು ಸಿ. (ಜಿಮ್ನಾಸ್ಟಿಕ್ಸ್ ), ಬಿ. ಆಭರಣ್ ಸದೇವ್ (ಹಾಕಿ), ದಾದಪೀರ್ (ಕಯಾಕಿಂಗ್ ಹಾಗೂ ಕನೋಯಿಂಗ್), ದಿವ್ಯಾ ಟಿ.ಎಸ್. (ಶೂಟಿಂಗ್), ಅನೀಶ್ ಎಸ್. ಗೌಡ (ಈಜು), ಪ್ರಿಯಾಂಕಾ ಎಸ್. (ವಾಲಿಬಾಲ್), ಐಶ್ವರ್ಯ ಪಿ. ಕರಿಗಾರ (ಕುಸ್ತಿ), ಉಷಾ ಬಿ.ಎನ್. (ವೇಯ್ಟ ಲಿಫ್ಟಿಂಗ್), ಶ್ರೀಧರ್ ನಾಗಪ್ಪ ಮಾಳಗಿ (ಪ್ಯಾರಾ ಈಜು), ಅಮ್ಮು ಮೋಹನ್ (ಪ್ಯಾರಾ ಬ್ಯಾಡ್ಮಿಂಟನ್).
ಜೀವಮಾನ ಸಾಧನೆ-2022: ಬಿ.ಎನ್. ಸುಧಾಕರ್ (ಬ್ಯಾಡ್ಮಿಂಟನ್), ಆರ್.ರಾಜನ್ (ಬಾಸ್ಕೆಟ್‌ಬಾಲ್), ಕೃಷ್ಣ (ಫುಟ್‌ಬಾಲ್), ಈಶ್ವರ್ ಈ. ಅಂಗಡಿ (ಕಬಡ್ಡಿ), ಉಮೇಶ್ ಜಿ. ಕಲಘಟಗಿ (ಈಜು); 2023: ರಾಹುಲ್ ಬಿ. (ಪ್ಯಾರಾ ಅಥ್ಲೆಟಿಕ್ಸ್), ಎಚ್.ಎನ್. ಕೃಷ್ಣಮೂರ್ತಿ (ಕಬಡ್ಡಿ), ಸತ್ಯನಾರಾಯಣ್ (ಬಾಸ್ಕೆಟ್‌ಬಾಲ್), ಎಚ್.ಬಿ. ರವೀಶ್ (ಹಾಕಿ).
ಕರ್ನಾಟಕ ಕ್ರೀಡಾರತ್ನ-2022: ಅರುಣ್ ಮೋತಿಲಾಲ್ (ಅಟ್ಯಾ ಪಾಠ್ಯಾ), ದಿವ್ಯಾ ಎಂ.ಎಸ್ (ಬಾಲ್ ಬ್ಯಾಡ್ಮಿಂಟನ್), ಬಾಸ್ಕರ್ ದೇವಾಡಿಗ (ಕಂಬಳ), ರಾಯಪ್ಪ ಧರೆಪ್ಪ ಅಬ್ಬುನವರ (ಸಂಗ್ರಾಣಿ ಕಲ್ಲು ಎತ್ತುವುದು), ಚೈತ್ರಾ ಬಿ. (ಖೋಖೋ), ವಿಠ್ಠಲ್ ಮೇಟಿ (ಕಬಡ್ಡಿ), ಶಂಕರಪ್ಪ ಕೆ. (ಮಲ್ಲಕಂಬ), ಗೋಪವ್ವಾ ಮಂಜುನಾಥ (ಕುಸ್ತಿ), ಮೊಹಮದ್ ಫಿರೋಜ್ ಶೇಕ್ (ಯೋಗ); 2023: ಗೌತಮ್ ಎಂ.ಕೆ (ಖೋಖೋ), ಸುನೀಲ್ ಬಿ ಪಡತಾರೆ (ಕುಸ್ತಿ), ವಿನಾಯಕ ಎಂ.ಕೋಗಿ (ಯೋಗ), ಮೇಘನಾ ಎಚ್.ಎಂ (ಬಾಲ್ ಬ್ಯಾಡ್ಮಿಂಟನ್), ಆತ್ಮೀಯಾ ಎಂ.ಬಿ (ಕಬಡ್ಡಿ), ಮಂಜುಳ ಹಣಮಂತ ಹುಲಗನ್ನವರ (ಮಲ್ಲಕಂಬ).
ಬಹುಮಾನ ಮೊತ್ತ
ಕ್ರೀಡಾಕ್ಷೇತ್ರದಲ್ಲಿ ಮಹೋನ್ನತವಾದ ಸಾಧನೆಗೈದ 30 ಕ್ರೀಡಾಪಟುಗಳಿಗೆ ನೀಡಲಾದ ಏಕಲವ್ಯ ಪ್ರತಿಮೆ ಒಳಗೊಂಡ ಪ್ರಶಸ್ತಿಯು ₹4 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಜೀವಮಾನ ಸಾಧನೆ ಪ್ರಶಸ್ತಿ ₹3 ಲಕ್ಷ ನಗದು ಬಹುಮಾನದ ಜತೆಗೆ ಸ್ಕ್ರೋಲ್ ಒಳಗೊಂಡಿದೆ. ಕ್ರೀಡಾರತ್ನ ಪ್ರಶಸ್ತಿ ₹2 ಲಕ್ಷ ನಗದು ಬಹುಮಾನದ ಜತೆಗೆ ಸ್ಕ್ರೋಲ್ ಒಳಗೊಂಡಿದೆ.
ಇನ್ನು ಆಯಾವರ್ಷವೇ ಪ್ರಶಸ್ತಿ ಪ್ರದಾನ
ರಾಜ್ಯದಲ್ಲಿ ಕ್ರೀಡೆಗಳ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದು ಸಾಧಕರನ್ನು ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಈಗಾಗಲೇ ಪ್ರಶಸ್ತಿ ವಿತರಣೆ ವಿಳಂಬವಾಗಿದ್ದು, ಮುಂದಿನ ವರ್ಷದಿಂದ ಆಯಾ ಸಾಲಿನ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೇವಲ 1 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ಸಾಮರ್ಥ್ಯ ಹೊಂದಿವೆ. ಆದರೆ ಏಳು ಕೋಟಿ ಜನಸಂಖ್ಯೆಯಿರುವ ಕರ್ನಾಟಕಕ್ಕೆ ಏಕೆ ಸಾಧ್ಯವಿಲ್ಲ? ಪರಿಶ್ರಮಪಟ್ಟರೆ ಎಲ್ಲವೂ ಸಾಧ್ಯ. ಅಂಥ ಪ್ರತಿಭೆಗಳಿಗೆ ಬೆಂಬಲ ನೀಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಕ್ರೀಡಾಪಟುಗಳು ಯಾವುದಾದರೂ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ಏಕಾಗ್ರತೆ, ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಸಿಎಂ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net