ಹೊಸಬೆಳಕಿನ, ಹೊಸಗಾಳಿಯ ನಿರೀಕ್ಷೆಯಲ್ಲಿ ಕರ್ನಾಟಕ ಕ್ರಿಕೆಟ್

ಟೀಮ್ ಇಂಡಿಯಾ ಮಾಜಿ ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್​
ಟೀಮ್ ಇಂಡಿಯಾ ಮಾಜಿ ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್​
Published on

 (ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ಗೊಂಬೆ ತಾನಾಗಿಯೇ ಎದ್ದು ಕುಣಿಯುವುದಿಲ್ಲ. ತೆರೆಯ ಹಿಂದೊಬ್ಬ ಸೂತ್ರಧಾರ ಇದ್ದಾಗ ಮಾತ್ರ ಗೊಂಬೆಗೆ ಜೀವ. ‘ಆಡಿಸಿದಾತನ ಕೈಚಳಕದಲಿ ಎಲ್ಲಾ ಅಡಗಿದೆ’ ಎಂಬಂತೆ ಅಂಗಡಿಯ ಮೂಲೆಯಲ್ಲೆಲ್ಲೊ ಬಿದ್ದಿರುವ ನಿರ್ಜೀವ ಗೊಂಬೆಗೆ ಬೆಲೆಯಿಲ್ಲ! ಆಡಿಸುವಾತನ ಕೈಚಳಕದಿಂದಷ್ಟೇ ಕುಣಿಯುವ ಗೊಂಬೆಗೆ ಬೇಡಿಕೆ! ಕೋಟ್ಯಂತರ ರೂ. ಬಂಡವಾಳ ಹಾಕಿ ಯಂತ್ರವನ್ನು ಖರೀದಿಸಬಹುದು. ಆದರೆ, ಆ ಯಂತ್ರ ಕೆಲಸ ಮಾಡುವುದಕ್ಕೆ ಅದನ್ನು ನಿರ್ವಹಿಸುವವನೊಬ್ಬ ಬೇಕೇಬೇಕು.

ಚದುರಂಗದ ಹಾಸಿನ ಮೇಲೆ ಕಾಯಿಗಳನ್ನು ಜೋಡಿಸಿದ ಮಾತ್ರಕ್ಕೆ ಆಟ ಆಗುವುದಿಲ್ಲ. ವ್ಯೂಹ ರಚಿಸಿ ರಾಜ, ರಾಣಿ, ಒಂಟೆ, ಕುದುರೆ, ಪದಾತಿಗಳನ್ನು ನಡೆಸುವುದಕ್ಕೆ ಇಬ್ಬರು ಬುದ್ಧಿವಂತರು ಬೇಕೇಬೇಕು. ನಮ್ಮ ದೇಹವೂ ಅಷ್ಟೇ.. ಒಳಗೆ ಚೈತನ್ಯವಿದ್ದರಷ್ಟೇ ದೇಹಕ್ಕೆ ಜೀವ. ಚೈತನ್ಯ ಹಾರಿಹೋದ ಕ್ಷಣವೇ ಪಾರ್ಥಿವಶರೀರ! ಇದನ್ನೇ ಸಂತ ಗೋಪಾಲದಾಸರು ಚೇತನನು ನಾ ನೀನು ಚೇಷ್ಟೆಯನು ಮಾಡಿದರೆ| ಅಚೇತನನು ನಾ ನೀನು ಸುಮ್ಮನಿರಲು|| ಎಂದು ಹೇಳುತ್ತಾರೆ.

ಲೌಕಿಕವಿರಲಿ, ಪಾರಮಾರ್ಥಿಕವಿರಲಿ.. ಜಗತ್ತಿನಲ್ಲಿ ಯಾವುದೂ ತನ್ನಿಂತಾನೇ ಘಟಿಸಿಬಿಡುವುದಿಲ್ಲ. ಪ್ರತಿಯೊಂದಕ್ಕೂ ಒಂದು ಕಾರ್ಯ-ಕಾರಣವಿರುತ್ತದೆ. ಒಬ್ಬ ವ್ಯಕ್ತಿ, ಒಂದು ಶಕ್ತಿ ಹಿನ್ನೆಲೆಯಲ್ಲಿರುವಾಗ ಮಾತ್ರ ಕೆಲಸಗಳು ಆಗುತ್ತಿರುತ್ತವೆ. ಅಕ್ಕಿ, ಬೇಳೆ, ತರಕಾರಿ, ಸಂಬಾರ ಪದಾರ್ಥಗಳನ್ನು ಒಂದೆಡೆ ಇಟ್ಟ ಮಾತ್ರಕ್ಕೆ ಅಡುಗೆ ಸಿದ್ಧವಾಗಿ ಬಿಡುವುದಿಲ್ಲ. ಅದೆಲ್ಲವನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಂಡು ರುಚಿಕರವಾದ ಅಡುಗೆ ಮಾಡುವುದಕ್ಕೊಬ್ಬ ಬಾಣಸಿಗ ಬೇಕೇಬೇಕು! ಅಂದರೆ, ಪ್ರತಿಯೊಂದು ಕೆಲಸಕ್ಕೂ ಸೂಕ್ತ ಜಾಗದಲ್ಲಿ ಸೂಕ್ತ ವ್ಯಕ್ತಿಗಳು ಇರಲೇಬೇಕು.

ಕೆಲವರು ಯೋಗದಿಂದ, ಇನ್ನು ಕೆಲವರು ಯೋಗ್ಯತೆಯಿಂದ ಉನ್ನತಿ ಕಾಣುತ್ತಾರೆ. ಆದರೆ, ರಕ್ಷಾಪುಟದ ಅಂದಚೆಂದ ನೋಡಿ ಪುಸ್ತಕದ ಗುಣಮಟ್ಟ ಅಳೆಯಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ವ್ಯಕ್ತಿಯ ವಿದ್ಯಾರ್ಹತೆ, ಕೌಟುಂಬಿಕ ಹಿನ್ನೆಲೆ ಅಥವಾ ಮುಖ ಚೆಂದ ನೋಡಿಯಷ್ಟೇ ಯೋಗ್ಯತೆ ತಿಳಿಯಲು ಸಾಧ್ಯವಾಗುವುದಿಲ್ಲ. ನಿರ್ದಿಷ್ಟ ಜವಾಬ್ದಾರಿಯನ್ನು ಆತ ಯಾವ ರೀತಿ ನಿರ್ವಹಿಸುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ, ಮತ್ತೊಂದರಲ್ಲಿ ಅಧಿಕಾರಸ್ಥಾನಕ್ಕೆ ಹೊಸ ನೀರಿನ ಪ್ರವೇಶವಾದಾಗ ಹೊಸ ನಿರೀಕ್ಷೆಗಳೂ ಚಿಗುರೊಡೆಯುತ್ತವೆ. ಕಳೆದೊಂದು ವರ್ಷದಿಂದ ನಕಾರಾತ್ಮಕ ಕಾರಣಗಳಿಂದಲೇ ಪ್ರಚಾರದಲ್ಲಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸದ್ಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅಧಿಕಾರ ವಹಿಸಿಕೊಂಡಿದ್ದು, ಸಹಜವಾಗಿ ಅವರ ಮೇಲೆ ನೂರೆಂಟು ನಿರೀಕ್ಷೆಗಳಿವೆ.

ಸದ್ಯ ಕೆಎಸ್​ಸಿಎ ಸಂಕ್ರಮಣ ಕಾಲಘಟ್ಟದಲ್ಲಿದೆ. ನಗರದ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 50ಕ್ಕೂ ಅಧಿಕ ವರ್ಷಗಳಿಂದ ನೆಲೆಯೂರಿರುವ ಕೆಎಸ್​ಸಿಎ, ಕರ್ನಾಟಕ ಕ್ರಿಕೆಟ್​ನ ಬೇಕಾದಷ್ಟು ಮೇರು ಸಾಧನೆಗಳು ಹಾಗೂ ನಿರಾಸೆಯ ಕ್ಷಣಗಳಿಗೆ ಸಾಕ್ಷಿಪ್ರಜ್ಞೆಯಾಗಿದೆ. ಆಡಳಿತದಲ್ಲಿ, ಆಟದಲ್ಲಿ, ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ದೇಶದಲ್ಲೇ ಮಾದರಿ ಎನ್ನುವಂತಿದ್ದ, ಹಲವು ಪ್ರಥಮಗಳ ಸರದಾರನೆನಿಸಿದ್ದ ಕೆಎಸ್​ಸಿಎ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ, ಆರ್​ಸಿಬಿ ತಂಡದ ಐಪಿಎಲ್ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ಬಳಿಕ ಸೂತಕದ ಮನೆಯಂತಾಗಿವೆ. ಆ ಆಘಾತದಿಂದ, ಗ್ರಹಣದಿಂದ ಸಂಸ್ಥೆ ಇನ್ನೂ ಆಚೆ ಬಂದಿಲ್ಲ. ಇದೀಗ ಸಂಸ್ಥೆಯ ಆಡಳಿತಕ್ಕೆ ಚುರುಕು, ಹೊಸಹುರುಪು ತುಂಬಿ ಹೊಸದಿಕ್ಕಿನಲ್ಲಿ ಮುನ್ನಡೆಸುವ ಕೆಲಸ ವೆಂಕಟೇಶ್ ಪ್ರಸಾದ್​ರಿಂದ ಆಗಬೇಕಿದೆ.

ವೆಂಕಟೇಶ್ ಪ್ರಸಾದ್ ಕ್ರಿಕೆಟ್ ವಲಯದಲ್ಲಿ ತಮ್ಮದೇ ಘನತೆ, ಗೌರವವನ್ನು ಸಂಪಾದಿಸಿರುವ ಸಾಧಕ. ಗಾಡ್​ಫಾದರ್​ಗಳ ನೆರಳಿಲ್ಲದೆ ಕಷ್ಟಪಟ್ಟು ಶಿಖರವೇರಿದವರು. ಸಾಮಾನ್ಯವಾಗಿ ವೆಂಕಿ ಅಂದರೆ, 1996ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ಆಮೀರ್ ಸೊಹೈಲ್​ರನ್ನು ಔಟ್ ಮಾಡಿದ ಕೆಚ್ಚಿನ ಪ್ರಸಂಗ ನೆನಪಿಗೆ ಬರುತ್ತದೆ. ಆದರೆ, ಅದೊಂದೇ ಅಲ್ಲ, 1990ರ ದಶಕದುದ್ದಕ್ಕೂ ಜಾವಗಲ್ ಶ್ರೀನಾಥ್ ಜತೆ ಜೋಡಿಎತ್ತಿನಂತೆ ಭಾರತೀಯ ವೇಗದ ಬೌಲಿಂಗ್​ನ ನೊಗ ಹೊತ್ತವರು ವೆಂಕಿ.

ವೆಂಕಿ ಎಕ್ಸ್​ಪ್ರೆಸ್ ವೇಗದ ಬೌಲರ್ ಆಗಿರಲಿಲ್ಲ. ಬದಲಿಗೆ ಎಂಥ ಪಿಚ್​ನಲ್ಲಿ ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬುದನ್ನು ಅರಿತಿದ್ದ ಚಾಣಾಕ್ಷ ಮಧ್ಯಮವೇಗಿ ಆಗಿದ್ದರು. ಅದೇ ಕಾರಣಕ್ಕೆ ವೇಗದ ಬೌಲಿಂಗ್ ಸ್ವರ್ಗಗಳೆನಿಸಿದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಪಿಚ್​ಗಳಲ್ಲಿ ಮಾತ್ರವಲ್ಲದೆ, ಭಾರತದ ಸಪಾಟೆ; ವೆಸ್ಟ್ ಇಂಡೀಸ್, ಶ್ರೀಲಂಕಾದ ಮಂದ ಪಿಚ್​ಗಳಲ್ಲೂ ಯಶಸ್ಸು ಸಾಧಿಸಿದರು. 1999ರಲ್ಲಿ ಪಾಕಿಸ್ತಾನದ ವಿರುದ್ಧ ಚೆನ್ನೈ ಟೆಸ್ಟ್​ನ ಒಂದು ಸ್ಪೆಲ್​ನಲ್ಲಿ ಒಂದೂ ರನ್ ಬಿಟ್ಟುಕೊಡದೆ 5 ವಿಕೆಟ್ ಕಬಳಿಸಿದ್ದ ವೆಂಕಿ, ಒಟ್ಟಾರೆ 33 ರನ್​ಗೆ 6 ವಿಕೆಟ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್ ಟೆಸ್ಟ್ ಪಂದ್ಯದಲ್ಲಿ ವಿರಳ 10 ವಿಕೆಟ್ ಸಂಪಾದನೆ ಮಾಡಿದ್ದ ಅವರು, ಟೆಸ್ಟ್ ಕ್ರಿಕೆಟ್​ನಲ್ಲಿ ಆಡಿದ 33 ಪಂದ್ಯಗಳಲ್ಲಿ 7 ಬಾರಿ 5 ವಿಕೆಟ್ ಗೊಂಚಲು ಕಬಳಿಸಿರುವುದು ಹೆಗ್ಗಳಿಕೆ. 

ವೇಗಕ್ಕಿಂತ ನಿಖರತೆ, ಸ್ವಿಂಗ್ ಮತ್ತು ಸೀಮ್ ಬಳಸಿಕೊಂಡು ಬ್ಯಾಟರ್​ಗಳನ್ನು ಕಂಗೆಡಿಸುತ್ತಿದ್ದ ವೆಂಕಿ, ನಿವೃತ್ತಿ ನಂತರವೂ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ, ಕಿರಿಯ ತಂಡಗಳ ಕೋಚ್ ಆಗಿ, ಆಯ್ಕೆಗಾರರಾಗಿ, ವೀಕ್ಷಕವಿವರಣೆಗಾರರಾಗಿ ಹಲವು ಪಾತ್ರಗಳಲ್ಲಿ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡವರು. ಆವೇಶಕ್ಕಿಂತ ಸಂಯಮ, ಆತುರಕ್ಕಿಂತ ಯುಕ್ತಿಗೆ ಮಹತ್ವ ನೀಡುವ ಅವರು ಸದ್ಯ ಆಡಳಿತಗಾರರಾಗಿ ವಿಭಿನ್ನ ಸವಾಲು ಹೊಂದಿದ್ದಾರೆ. ಒಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಯಶಸ್ಸು ಪ್ರತಿಫಲಿತವಾಗುವುದು ರಾಜ್ಯ ಕ್ರಿಕೆಟ್ ತಂಡಗಳ ಹಾಗೂ ಆಟಗಾರರ ಪ್ರದರ್ಶನದಲ್ಲಿ. ಇದಕ್ಕೊಂದು ತಾಜಾ ಉದಾಹರಣೆ ದುಬೈನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ. ಇದರಲ್ಲಿ ದೇಶಿ ಕ್ರಿಕೆಟ್​ನಲ್ಲಿ ಚಮತ್ಕಾರ ತೋರಿದ ಅನೇಕ ಯುವ ಆಟಗಾರರು ಕೋಟಿಗಟ್ಟಲೆ ಮೌಲ್ಯ ಪಡೆದು ವಿವಿಧ ತಂಡಗಳನ್ನು ಸೇರಿಕೊಂಡರೆ, ಕರ್ನಾಟಕದ ಪಾಲಿಗೆ ಖುಷಿ ಪಡುವಂಥದ್ದು ಏನೂ ಇರಲಿಲ್ಲ. 

ಯಶ್​ರಾಜ್ ಪೂಂಜ ಮತ್ತು ಪ್ರವೀಣ್ ದುಬೆ 30 ಲಕ್ಷ ರೂ.ಗೆ ರಾಜಸ್ಥಾನ ಮತ್ತು ಪಂಜಾಬ್ ತಂಡ ಸೇರಿದ್ದಷ್ಟೇ ಸಮಾಧಾನ. ಆದರೆ, ರಾಜಸ್ಥಾನದ ಕಾರ್ತೀಕ್ ಶರ್ಮ, ಉತ್ತರ ಪ್ರದೇಶದ ಪ್ರಶಾಂತ್ ವೀರ್ ತಲಾ 14.2 ಕೋಟಿ ರೂ. ಬಂಪರ್ ಮೊತ್ತಕ್ಕೆ ಚೆನ್ನೈ ತಂಡ ಸೇರಿದ್ದು, ಕಾಶ್ಮೀರದ ವೇಗಿ ಆಕಿಬ್ ದಾರ್​ಗೆ ಡೆಲ್ಲಿ 8.4 ಕೋಟಿ ಕೊಟ್ಟಿದ್ದು, ಮಂಗೇಶ್ ಯಾದವ್​ಗೆ ಆರ್​ಸಿಬಿ 5.2 ಕೋಟಿ ರೂ. ನೀಡಿ ಕೆಂಪುಹಾಸು ಹಾಸಿದ್ದು ನೋಡುವಾಗ, ಕರ್ನಾಟಕದಿಂದ ಇಂಥ ಆಟಗಾರರೇಕೆ ಹೊರಹೊಮ್ಮುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಐಪಿಎಲ್​ಗೆ ಈ ಬಾರಿ ದೇಶಿ ಯುವ ಆಟಗಾರರ ಆಯ್ಕೆಗೆ ಮಾನದಂಡವಾಗಿದ್ದು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ. ಕರ್ನಾಟಕ ಈ ಟೂರ್ನಿಯಲ್ಲಿ ಉಪಾಂತ್ಯ ತಲುಪಲೂ ವಿಫಲವಾಗಿ ಲೀಗ್​ನಲ್ಲೇ ನಿರ್ಗಮಿಸಿತು. ಕರ್ನಾಟಕದ ಪರ ದೇವದತ್ ಪಡಿಕ್ಕಲ್ ಕೆಲವು ಪಂದ್ಯಗಳಲ್ಲಿ, ಸ್ಮರಣ್ ಒಂದೆರಡು ಪಂದ್ಯಗಳಲ್ಲಿ ಮಿಂಚಿದ್ದು ಬಿಟ್ಟರೆ, ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಂಥ ಸ್ಟ್ರೈಕ್ ರೇಟ್ ಯಾರೂ ಪ್ರದರ್ಶಿಸಲಿಲ್ಲ. ಇದಕ್ಕೆ ಆಟಗಾರರನ್ನೇ ಹೊಣೆ ಮಾಡುವ ಬದಲು ನಮ್ಮ ಕ್ರಿಕೆಟ್ ವ್ಯವಸ್ಥೆಯಲ್ಲೇ ಎಲ್ಲೋ ಲೋಪವಿದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ.

ಟಿ20 ಕ್ರಿಕೆಟ್ ಮುಂಚೂಣಿಗೆ ಬಂದ ಇಷ್ಟು ವರ್ಷಗಳಲ್ಲಿ ಒಂದು ಹಂತದವರೆಗೆ ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ ಹೊರತುಪಡಿಸಿದರೆ, ಚುಟುಕು ಮಾದರಿಯಲ್ಲಿ ಪ್ರಚಂಡ ಸಾಧನೆ ಮಾಡಿದ ಕನ್ನಡಿಗರು ಹೊರಹೊಮ್ಮಲೇ ಇಲ್ಲ. ಹಾಗಾಗಿಯೇ ಭಾರತ ಟಿ20 ತಂಡದಲ್ಲೂ ಸದ್ಯ ಕನ್ನಡಿಗರು ಒಬ್ಬರೂ ಇಲ್ಲ. ಟೀಮ್ ಇಂಡಿಯಾ ಟೆಸ್ಟ್, ಏಕದಿನ, ಟಿ20 ಮೂರು ಮಾದರಿಗಳಿಗೂ ಪ್ರತ್ಯೇಕ ತಂಡ ಹೊಂದಿದೆ. ಕೆಲವರನ್ನು ಹೊರತು ಪಡಿಸಿ ಎಲ್ಲರೂ ಎಲ್ಲ ಮಾದರಿಗಳಲ್ಲೂ ಆಡುವುದಿಲ್ಲ. ಕರ್ನಾಟಕದಲ್ಲೂ ಈ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕಿದೆ. ಟಿ20 ಕ್ರಿಕೆಟ್​ಗೆಂದೇ ಪ್ರತಿಭಾಶೋಧ ನಡೆಸಿ, ಐಪಿಎಲ್ ಹಾಗೂ ಭಾರತದ ಟಿ20 ತಂಡಗಳಿಗೆ ಆಯ್ಕೆಯನ್ನೇ ಗುರಿ ಆಗಿಸಿಕೊಂಡು ಪ್ರತ್ಯೇಕ ತರಬೇತಿ ನೀಡಿ ಟಿ20 ತಜ್ಞರನ್ನು ರೂಪಿಸುವ ಕೆಲಸ ಕೆಎಸ್​ಸಿಎನಿಂದ ಆಗಬೇಕಿದೆ. 

ರಣಜಿ ಆಡುವಾಗ ದೀರ್ಘ ಅವಧಿ ಆಡುವುದು, ಇನಿಂಗ್ಸ್ ಕಟ್ಟುವುದು, ತಾಂತ್ರಿಕತೆ ಮುಖ್ಯವಾದರೆ, ಟಿ20ಯಲ್ಲಿ ಸ್ಟ್ರೈಕ್ ರೇಟ್ ಒಂದೇ ಪ್ರಧಾನ. ಅಲ್ಲಿ ಅನ್ವೇಷಣಾತ್ಮಕ, ಅಸಾಂಪ್ರದಾಯಿಕ ಹೊಡೆತಗಳಿಗೆ ಮಣೆ. ಹಾಗಾಗಿ ರಾಜ್ಯ ಮಟ್ಟದಲ್ಲಿ ಹೆಚ್ಚಿನ ಟಿ20 ಟೂರ್ನಿಗಳನ್ನು ಸಂಘಟಿಸುವ ಮೂಲಕ, ಪ್ರತಿ ವರ್ಷ ನಿಯಮಿತವಾಗಿ ಮಹಾರಾಜ ಕಪ್ (ಕೆಪಿಎಲ್) ನಡೆಸುವ ಮೂಲಕ, ಪ್ರತೀ ಹಂತದ ಟೂರ್ನಿಯಲ್ಲೂ ಸ್ಪರ್ಧಾತ್ಮಕತೆ ಹೆಚ್ಚಿಸುವ ಮೂಲಕ ಕರ್ನಾಟಕವನ್ನೂ ಟಿ20 ಪ್ರಯೋಗಶಾಲೆಯಾಗಿ ಬೆಳೆಸುವ ಕೆಲಸ ಆಗಬೇಕಿದೆ. ಇಲ್ಲವಾದರೆ, ಪ್ರತೀ ಬಾರಿ ಐಪಿಎಲ್ ನಡೆಯುವಾಗ ಆರ್​ಸಿಬಿ ತಂಡದಲ್ಲಿ ಕನ್ನಡಿಗರಿಲ್ಲ ಎಂಬ ಕೊರಗು, ಭಾರತ ತಂಡದಲ್ಲೂ ಕನ್ನಡಿಗರ ಪ್ರಾತಿನಿಧ್ಯ ಹೆಚ್ಚುತ್ತಿಲ್ಲ ಎಂಬ ಅಳಲು ತಪ್ಪುವುದಿಲ್ಲ.

ಯಾವುದೇ ಕೆಲಸ ತನ್ನಿಂತಾನೇ ಆಗುವುದಿಲ್ಲ. ಹಿಂದೆ ಇದ್ದವರು ಏನು ಮಾಡಿದರು ಎಂಬುದೂ ಮುಖ್ಯವಾಗುವುದಿಲ್ಲ. ನಾವು ಏನು ಮಾಡುತ್ತೇವೆ ಎನ್ನುವುದಷ್ಟೇ ವರ್ತಮಾನದ ಸತ್ಯ. ಏಕದಿನ ಮಾದರಿಯಲ್ಲಿ ಆಡಲಾಗುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಹಾಲಿ ಚಾಂಪಿಯನ್. ಅದನ್ನುಳಿದರೆ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 2019-20ರಲ್ಲಿ ಸತತ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಮಂಕಾಗಿದೆ. ರಣಜಿ ಟ್ರೋಫಿಯಲ್ಲಿ 2014-15ರ ಬಳಿಕ ಗೆದ್ದೇ ಇಲ್ಲ. ವೆಂಕಟೇಶ್ ಪ್ರಸಾದ್ ಆಟದ ದಿನಗಳಲ್ಲಿ ಭಾರತ ತಂಡದಲ್ಲಿ 5-6-7 ಕನ್ನಡಿಗರಿರುತ್ತಿದ್ದರು. ಸದ್ಯ ಕೆಎಲ್ ರಾಹುಲ್, ಪಡಿಕ್ಕಲ್, ಪ್ರಸಿದ್ಧ ಕೃಷ್ಣ ಮಾತ್ರ ಭಾರತ ತಂಡದಲ್ಲಿದ್ದಾರೆ. ಆದರೆ, ಟೆಸ್ಟ್- ಏಕದಿನ- ಟಿ20 ಮೂರೂ ತಂಡಗಳಲ್ಲಿ ಖಾಯಂ ಎನಿಸಿಕೊಂಡವರು ಯಾರೂ ಇಲ್ಲ.

ಬದಲಾವಣೆ ಎನ್ನುವುದು ಏಕಾಏಕಿ ಆಗುವುದಿಲ್ಲ. ಸಮಸ್ಯೆಗಳು ಮತ್ತು ಪರಿಹಾರಗಳು ಕಾಗದದ ಮೇಲಿದ್ದರಷ್ಟೇ ಸಾಕಾಗುವುದೂ ಇಲ್ಲ. ಗೊಂಬೆಗೆ ಜೀವ ತುಂಬುವ ಸೂತ್ರಧಾರನಂತೆ ಭರವಸೆಗಳಿಗೆ ವಾಸ್ತವರೂಪ ನೀಡಲು ಕರ್ತೃತ್ವ ಶಕ್ತಿ ಬೇಕಾಗುತ್ತದೆ. ಅದಕ್ಕೆ ಬೇಕಾದ ಇಚ್ಛಾಶಕ್ತಿ ವೆಂಕಟೇಶ್ ಪ್ರಸಾದ್ ಅವರಲ್ಲಿದೆ. ಅವರಿಗೆ ಬೆನ್ನೆಲುಬಾಗಲು ಕುಂಬ್ಳೆ, ಜಾವಗಲ್ ಶ್ರೀನಾಥ್ ಮೊದಲಾದ ದಿಗ್ಗಜರನ್ನೊಳಗೊಂಡ ಸಲಹಾ ಸಮಿತಿ ಇದೆ. ಒಳ್ಳೆಯ ಕೆಲಸ ತಡವಿಲ್ಲದಂತೆ ಕಾರ್ಯರೂಪಕ್ಕೆ ಬರಬೇಕಿದೆ ಅಷ್ಟೇ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net