IPL 2026: ಈಗೇನು ಇಂಡಿಯಾಗೆ ಆಡ್ತಿಲ್ಲ ಅಲ್ವಾ... ಕನ್ನಡಿಗ ಮನೀಶ್​​ ಪಾಂಡೆ-ಕೊಹ್ಲಿ ಸಂಭಾಷಣೆ ವೈರಲ್​!

 IPL 2026
IPL 2026
Published on
ಬೆಂಗಳೂರು: IPL 2026ರಲ್ಲಿ ಕಿಂಗ್ ಕೊಹ್ಲಿ ಮರಳಿ ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದಾರೆ! ಸತತ ವೈಫಲ್ಯಗಳಿಂದ ಕಂಗಾಲಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ಆದರೆ, ಈ ಪಂದ್ಯದಲ್ಲಿ ಅವರ ಬ್ಯಾಟಿಂಗ್ ಎಷ್ಟು ಸದ್ದು ಮಾಡಿತೋ, ಅಷ್ಟೇ ಸದ್ದು ಅವರ "ಸ್ಟಂಪ್ ಮೈಕ್" ಸಂಭಾಷಣೆಯೂ ಮಾಡಿದೆ. ಕೆಕೆಆರ್ ಆಟಗಾರ ಮನೀಶ್ ಪಾಂಡೆ ಜೊತೆ ಕೊಹ್ಲಿ ನಡೆಸಿದ ತಮಾಷೆಯ ಮಾತುಗಳು ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿವೆ.
ಐಪಿಎಲ್ 2026ರ ಬುಧವಾರದ ಪಂದ್ಯದಲ್ಲಿ ಆರ್‌ಸಿಬಿ ತಂಡವು 193 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿತ್ತು. ಈ ವೇಳೆ ಕೇವಲ 60 ಎಸೆತಗಳಲ್ಲಿ ಅಜೇಯ 105 ರನ್ ಚಚ್ಚಿದ ಕೊಹ್ಲಿ, ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಮಳೆ ಹರಿಸಿದರು. ಇದಕ್ಕೂ ಮುನ್ನ ಆಡಿದ್ದ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ಒಂದೂ ಅರ್ಧಶತಕ ಗಳಿಸಿರಲಿಲ್ಲ, ಅದರಲ್ಲಿಯೂ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ (ಡಕ್ ಔಟ್) ಔಟ್ ಆಗಿ ಟೀಕೆಗೆ ಒಳಗಾಗಿದ್ದರು. ಆದರೆ ಬುಧವಾರದ ಪಂದ್ಯದಲ್ಲಿ ಕೊಹ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ್ದರು.

ಸ್ಟಂಪ್ ಮೈಕ್‌ನಲ್ಲಿ ಸೆರೆಯಾದ ಕೊಹ್ಲಿ 'ಬ್ಯಾಂಟರ್'

ಪಂದ್ಯದ ಮಧ್ಯೆ ವಿರಾಟ್ ಕೊಹ್ಲಿ ಮತ್ತು ಕೆಕೆಆರ್ ತಂಡದ ಮನೀಶ್ ಪಾಂಡೆ ನಡುವೆ ಮೈದಾನದಲ್ಲಿ ಹಗುರವಾದ ನಗೆಯ ಕ್ಷಣಗಳು ಸೃಷ್ಟಿಯಾದವು. ಕೊಹ್ಲಿ ತಾವು ಇನ್ಮುಂದೆ 'ರ್ಯಾಂಪ್' ಮತ್ತು 'ಸ್ಕೂಪ್' ನಂತಹ ಅಸಾಂಪ್ರದಾಯಿಕ ಶಾಟ್‌ಗಳನ್ನು ಆಡಲು ಪ್ರಯತ್ನಿಸುವುದಾಗಿ ಪಾಂಡೆ ಬಳಿ ತಮಾಷೆ ಮಾಡುತ್ತಿರುವುದು ಸ್ಟಂಪ್ ಮೈಕ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿದೆ.
"ಹಾ, ಇವಾಗ ಹೊಡೀತೀನಿ ನೋಡು..." ಎಂದು ಕೊಹ್ಲಿ ಹಿಂದಿಯಲ್ಲಿ ಪಾಂಡೆಗೆ ಹೇಳುತ್ತಾ ರ್ಯಾಂಪ್ ಶಾಟ್ ಆಡುವಂತೆ ಸನ್ನೆ ಮಾಡಿದರು. ತಕ್ಷಣವೇ ಮುಂದುವರಿದು, "ಈಗೇನು ಇಂಡಿಯಾ ತಂಡಕ್ಕಾಗಿ ಆಡ್ತಿಲ್ಲ ಅಲ್ವಾ, ಈಗ ಎಲ್ಲಾ ಶಾಟ್‌ಗಳೂ ಕರೆಕ್ಟಾಗಿ ಕನೆಕ್ಟ್ ಆಗ್ತವೆ!" (Ab toh India ke liye thodi na khelna hai, ab toh har shot lagega) ಎಂದು ಜೋರಾಗಿ ನಕ್ಕರು.
ಅಂತರರಾಷ್ಟ್ರೀಯ ಪಂದ್ಯಗಳ ಒತ್ತಡವಿಲ್ಲದೆ, ಐಪಿಎಲ್‌ನಲ್ಲಿ ಮುಕ್ತವಾಗಿ ಬ್ಯಾಟ್ ಬೀಸುತ್ತಿರುವ ಬಗ್ಗೆ ಕೊಹ್ಲಿ ಆಡಿದ ಈ ಚಮತ್ಕಾರಿ ಮಾತುಗಳು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿವೆ. ವಿರಾಟ್ ಕೊಹ್ಲಿ ಮತ್ತು ಮನೀಶ್ ಪಾಂಡೆ 2008ರ ಅಂಡರ್-19 ವಿಶ್ವಕಪ್‌ನಿಂದಲೂ ಒಟ್ಟಿಗೆ ಆಡಿದವರು. ಅಲ್ಲದೆ ಭಾರತ ತಂಡ ಹಾಗೂ ಆರ್‌ಸಿಬಿಯಲ್ಲೂ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಹಳೆಯ ಸ್ನೇಹಿತರಾಗಿದ್ದರಿಂದ ಇಬ್ಬರ ನಡುವಿನ ಈ ಬಾಂಧವ್ಯ ಮೈದಾನದಲ್ಲಿ ಎದ್ದು ಕಾಣುತ್ತಿತ್ತು.
ಪಂದ್ಯದ ಹೈಲೈಟ್ಸ್ ಮತ್ತು ಮನೀಶ್ ಪಾಂಡೆ ಸೂಪರ್ ಕ್ಯಾಚ್
ಒಂದೆಡೆ ಕೊಹ್ಲಿ ಪಂದ್ಯವನ್ನು ಆರ್‌ಸಿಬಿ ಪರವಾಗಿ ಪೂರ್ಣಗೊಳಿಸಿದರೆ, ಇತ್ತ ಕೆಕೆಆರ್ ತಂಡದ ಮನೀಶ್ ಪಾಂಡೆ ಕೂಡ ಮೈದಾನದಲ್ಲಿ ಅದ್ಭುತ ಕ್ಷಣವೊಂದನ್ನು ಸೃಷ್ಟಿಸಿದರು. ಪಂದ್ಯದ 18ನೇ ಓವರ್‌ನಲ್ಲಿ ಆರ್‌ಸಿಬಿಯ ಆಸ್ಟ್ರೇಲಿಯಾ ಬ್ಯಾಟರ್ ಟಿಮ್ ಡೇವಿಡ್ ಹೊಡೆದ ಬಲವಾದ ಶಾಟ್ ಅನ್ನು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಮನೀಶ್ ಪಾಂಡೆ, ಎಡಗಡೆಗೆ ಅದ್ಭುತವಾಗಿ ಡೈವ್ ಮಾಡುವ ಮೂಲಕ ಈ ಸೀಸನ್‌ನ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದನ್ನು ಪಡೆದರು. ಆದಾಗ್ಯೂ, ಕೊಹ್ಲಿ ಅವರ ಅಬ್ಬರದ ಮುಂದೆ ಕೆಕೆಆರ್ ಬೌಲರ್‌ಗಳ ಆಟ ನಡೆಯಲಿಲ್ಲ. ಇನ್ನು 5 ಎಸೆತಗಳು ಬಾಕಿ ಇರುವಂತೆಯೇ ಆರ್‌ಸಿಬಿ ಗೆಲುವಿನ ನಗೆ ಬೀರಿದೆ.

ಅಂಕಪಟ್ಟಿಯಲ್ಲಿ ಆರ್‌ಸಿಬಿ ನಂ.1

ಈ ಸ್ಮರಣೀಯ ಶತಕದ ಮೂಲಕ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಮತ್ತೊಂದೆಡೆ, ಈ ಟೂರ್ನಿಯಲ್ಲಿ 6ನೇ ಸೋಲು ಕಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪ್ಲೇ-ಆಫ್ ಕನಸು ಈಗ ಸಂಕಷ್ಟಕ್ಕೆ ಸಿಲುಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net